IPL 2024: ಅಲ್ಲಿ ಕೊಹ್ಲಿ, ಇಲ್ಲಿ ಧೋನಿ.. ಒಂದೇ ರೀತಿಯ ಘಟನೆ; ಪರಿಣಾಮ ವಿಭಿನ್ನ

|

Updated on: May 11, 2024 | 5:01 PM

IPL 2024: ಅಭಿಮಾನಿಯೊಬ್ಬ ಭದ್ರತಾ ಸರಪಳಿ ಮುರಿದು ಮೈದಾನದಲ್ಲಿ ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾಗಿರುವಂತಹ ಪ್ರಕರಣ ಈ ಹಿಂದೆಯೂ ಸಾಕಷ್ಟು ಸಾರಿ ನಡೆದಿದೆ. ಕೆಲವೊಮ್ಮೆ ಆಟಗಾರರು ಅಭಿಮಾನಿಗಳ ಈ ರೀತಿಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ವಿನಯದಿಂದ ನಡೆದುಕೊಂಡು ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿಕೊಡುತ್ತಾರೆ.

IPL 2024: ಅಲ್ಲಿ ಕೊಹ್ಲಿ, ಇಲ್ಲಿ ಧೋನಿ.. ಒಂದೇ ರೀತಿಯ ಘಟನೆ; ಪರಿಣಾಮ ವಿಭಿನ್ನ
ಐಪಿಎಲ್ 2024
Follow us on

ಭಾರತ ಒಂದು ಕ್ರಿಕೆಟ್ ಧರ್ಮ ದೇಶ. ಇಲ್ಲಿ ಕ್ರಿಕೆಟಿಗಿರುವಷ್ಟು ಮನ್ನಣೆ ಬೇರೆ ಯಾವ ಆಟಕ್ಕೂ ಸಿಗುವುದಿಲ್ಲ. ಹೀಗಾಗಿ ಭಾರತದ ಕ್ರಿಕೆಟಿಗರಿಗೆ ಅಸಂಖ್ಯಾತ ಅಭಿಮಾನಿಗಳಿರುತ್ತಾರೆ. ಅದರಲ್ಲೂ ತನ್ನ ಆಟದಿಂದ ಇಡೀ ವಿಶ್ವ ಕ್ರಿಕೆಟ್​ನಲ್ಲೇ ಹೆಸರು ಮಾಡಿದ ದಿಗ್ಗಜರು ಅಭಿಮಾನಿಗಳಿಗೆ ದೇವರ ಸ್ವರೂಪವಿದಂತೆ. ಹೀಗಾಗಿ ಈ ದಿಗ್ಗಜ ಆಟಗಾರರು ಮೈದಾನಕ್ಕಿಳಿದಾಗಲೆಲ್ಲ ಆಟ ನೋಡಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ಸೆಕ್ಯುರಿಟಿ ನಿಯಮವನ್ನು ಉಲ್ಲಂಘಿಸಿ ಮೈದಾನದೊಳಕ್ಕೆ ನುಗ್ಗಿ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ತಬ್ಬಿ ಮುದ್ದಾಡುತ್ತಾರೆ. ಈ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ನಿನ್ನೆ ನಡೆದ ಚೆನ್ನೈ ಹಾಗೂ ಗುಜರಾತ್ (Gujarat Titans vs Chennai Super Kings) ನಡುವಿನ ಪಂದ್ಯದಲ್ಲೂ ಇದೇ ರೀತಿಯ ಘಟನೆ ನಡೆಯಿತು. ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂಎಸ್ ಧೋನಿ (MS Dhoni) ಬ್ಯಾಟಿಂಗ್ ಮಾಡುವ ಸಮಯದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಧೋನಿಯ ಕಾಲಿಗೆ ಬಿದ್ದು, ತಬ್ಬಾಡಿದ್ದಾನೆ.

ಧೋನಿಯ ಸಿಡಿಲಬ್ಬರದ ಬ್ಯಾಟಿಂಗ್

ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಚೆನ್ನೈ ತಂಡ ಸೋತಿತ್ತಾದರೂ ಎಂದಿನಂತೆ ಧೋನಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ನೆರೆದಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ವಾಸ್ತವವಾಗಿ ಇದು ಧೋನಿಯ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಧೋನಿಯ ಆಟವನ್ನು ಕಣ್ತುಂಬಿಕೊಳ್ಳುವ ಸಲುವಾಗಿಯೇ ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ. ಧೋನಿ ಕೂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸದೆ ಕೊನೆಯಲ್ಲಿ ಬ್ಯಾಟಿಂಗ್​ಗೆ ಬಂದರೂ ಎಲ್ಲರೂ ಮೆಚ್ಚುವಂತಹ ಇನ್ನಿಂಗ್ಸ್ ಆಡುತ್ತಾರೆ.

ನಿನ್ನೆಯ ಪಂದ್ಯದಲ್ಲೂ ಧೋನಿ ಇದೆ ರೀತಿಯ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ 11 ಎಸೆತಗಳನ್ನು ಎದುರಿಸಿದ ಧೋನಿ 26 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಹಾಗೂ 3 ಅದ್ಭುತ ಸಿಕ್ಸರ್‌ಗಳು ಸೇರಿದ್ದವು. ಈ ಪೈಕಿ ರಶೀದ್ ಖಾನ್ ಓವರ್‌ನಲ್ಲಿ ಮಹಿ ಸತತ 2 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇದೇ ವೇಳೆ ಪಂದ್ಯದ ಕೊನೆಯ ಓವರ್‌ನಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಅಭಿಮಾನಿಯೊಬ್ಬ ಕ್ರೀಡಾಂಗಣದಿಂದ ಹೊರಬಂದು ನೇರವಾಗಿ ಮೈದಾನಕ್ಕೆ ಪ್ರವೇಶಿಸಿದನು.

ಮಹಿಯ ಕಾಲಿಗೆ ಬಿದ್ದ ಅಭಿಮಾನಿ

ಧೋನಿ ಸ್ವಲ್ಪ ಸಮಯದವರೆಗೆ ಆ ಅಭಿಮಾನಿಯ ಕೈಗೆ ಸಿಗದೆ ಆಟ ಆಡಿಸಿದರು.ಆ ನಂತರ ಅಭಿಮಾನಿ ಮಹಿಯ ಕಾಲಿಗೆ ಬಿದ್ದನ್ನು. ಇದಾದ ಬಳಿಕ ಧೋನಿ ಅಭಿಮಾನಿಯನ್ನು ಅಪ್ಪಿಕೊಂಡರು. ಆಗ ಸೆಕ್ಯುರಿಟಿ ಬಂದು ಈ ಅಭಿಮಾನಿಯನ್ನು ಹಿಡಿದು ಹೊರಗೆ ಕರೆದೊಯ್ದರು.

ವಾಸ್ತವವಾಗಿ ಅಭಿಮಾನಿಯೊಬ್ಬ ಭದ್ರತಾ ಸರಪಳಿ ಮುರಿದು ಮೈದಾನದಲ್ಲಿ ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾಗಿರುವಂತಹ ಪ್ರಕರಣ ಈ ಹಿಂದೆಯೂ ಸಾಕಷ್ಟು ಸಾರಿ ನಡೆದಿದೆ. ಕೆಲವೊಮ್ಮೆ ಆಟಗಾರರು ಅಭಿಮಾನಿಗಳ ಈ ರೀತಿಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ವಿನಯದಿಂದ ನಡೆದುಕೊಂಡು ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿಕೊಡುತ್ತಾರೆ. ನಿನ್ನೆಯ ಪಂದ್ಯದಲ್ಲೂ ಸಂಭವಿಸಿದ್ದು ಇದೆ. ಆದರೆ ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಇದೇ ಐಪಿಎಲ್‌ ಆವೃತ್ತಿಯ ಪಂದ್ಯದಲ್ಲಿ ಕೊಹ್ಲಿಯನ್ನು ಅಭಿಮಾನಿಯೊಬ್ಬ ಮೈದಾನದಲ್ಲಿ ಭೇಟಿಯಾಗಿದ್ದನ್ನು. ಕೊಹ್ಲಿ ಕೂಡ ವಿನಯದಿಂದ ಮಾತನಾಡಿ ಆತನನ್ನು ಹೊರಗೆ ಕಳುಹಿಸಿದ್ದರು.

ಕೊಹ್ಲಿಯನ್ನು ತಬ್ಬಿದ್ದ ಅಭಿಮಾನಿಗೆ ಬಿದ್ದಿತ್ತು ಗೂಸಾ

ಆದರೆ ಆ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದಿದ್ದ ಸೆಕ್ಯುರಿಟಿ ಗಾರ್ಡ್​ಗಳು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಸೆಕ್ಯುರಿಟಿ ಗಾರ್ಡ್​ಗಳ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಆ ಅಭಿಮಾನಿಯ ವಿರುದ್ಧ ಕಬ್ಬನ್ ಪಾರ್ಕ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಧೋನಿಯನ್ನು ತಬ್ಬಿದ ಅಭಿಮಾನಿಯನ್ನು ಸೆಕ್ಯುರಿಟಿ ಗಾರ್ಡ್​ಗಳು ನಯವಾಗಿ ಮೈದಾನದಿಂದ ಹೊರಗೆ ಕರೆದೊಯ್ದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ