ಮಾರ್ಚ್ 25 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy stadium) ನಡೆದ ಐಪಿಎಲ್ 17ನೇ (IPL 2024) ಆವೃತ್ತಿಯ ಪಂದ್ಯದಲ್ಲಿ ಭದ್ರತಾ ನಿಯಮವನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ್ದ ಅಭಿಮಾನಿಗೆ ಕ್ರೀಡಾಂಗಣದ ಭದ್ರತಾ ಸಿಬ್ಬಂಧಿಗಳು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಾಸ್ತವವಾಗಿ ಪಂಜಾಬ್ ಕಿಂಗ್ ಹಾಗೂ ಆರ್ಸಿಬಿ (RCB vs PBKS) ನಡುವೆ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ಮಾಡುವ ವೇಳೆ ಮೈದಾನಕ್ಕೆ ನುಗ್ಗಿದ ವಿರಾಟ್ ಕೊಹ್ಲಿ ಅಭಿಮಾನಿ, ಕಿಂಗ್ ಕೊಹ್ಲಿ ಪಾದಕ್ಕೇರಗಿದ್ದ. ನಂತರ ಮೇಲೆದ್ದು, ಕೊಹ್ಲಿಯನ್ನು ತಬ್ಬಾಡಿದ್ದ. ಕೂಡಲೇ ಓಡಿಬಂದ ಮೈದಾನದ ಸೆಕ್ಯೂರಿಟಿ ಗಾರ್ಡ್ಗಳು ಆತನನ್ನು ಮೈದಾನದಿಂದ ಹೊರಕ್ಕೆ ಎಳೆದೊಯ್ದಿದ್ದರು.
ಮೈದಾನದ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ ಆ ಅಭಿಮಾನಿಯನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಆತ ರಾಯಚೂರಿನಿಂದ ಬಂದಿದ್ದ 17 ವರ್ಷದ ಅಪ್ರಾಪ್ತನಾಗಿದ್ದು, 3000 ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿ ಮಾಡಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿತ್ತು.
ಆದರೆ ಪೊಲೀಸ್ ಠಾಣೆಗೂ ಕರೆದೊಯ್ಯುವ ಮುನ್ನ ಆ ಅಪ್ರಾಪ್ತ ಅಭಿಮಾನಿಗೆ ಮೈದಾನದ ಸಿಬ್ಬಂಧಿಗಳು ಮೈದಾನದಿಂದ ಹೊರಗೆ ಎಳೆದೊಯ್ದ ಬಳಿಕ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ. ಆದರೂ ಈ ವೀಡಿಯೊ ಬಗ್ಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಹಲವು ಪಂದ್ಯಗಳ ವೇಳೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡಿದ ಘಟನೆ ಹಲವು ಬಾರಿ ನಡೆದಿದೆ. ಹೀಗಾಗಿಯೇ ಇಂತಹ ಘಟನೆಗಳನ್ನು ತಡೆಯುವ ಸಲುವಾಗಿ, ಈ ರೀತಿಯಾಗಿ ಮೈದಾನದೊಳಕ್ಕೆ ಅತಿಕ್ರಮ ಪ್ರವೇಶ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ನಿರ್ಧಾರಕ್ಕೆ ಬರಲಾಗಿದೆ.
The fan who obstructed the field to meet Virat Kohli was beaten up black and blue.
Thoughts?pic.twitter.com/BZ4SKI6f5d
— Sameer Allana (@HitmanCricket) March 27, 2024
ಪಂದ್ಯದ ವೇಳೆ ಅಭಿಮಾನಿಯೊಬ್ಬ ಕೊಹ್ಲಿಯನ್ನು ಹೀಗೆ ತಬ್ಬಾಡಿರುವುದು ಈ ವರ್ಷದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮುನ್ನ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ, ಅಭಿಮಾನಿಯೊಬ್ಬರು ಫೀಲ್ಡಿಂಗ್ ಮಾಡುವಾಗ ಕೊಹ್ಲಿ ಬಳಿಗೆ ಹೋಗಿ ಅವರನ್ನು ಅಪ್ಪಿಕೊಂಡಿದ್ದರು.
ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಕುರಿತು ಮಾತನಾಡುವುದಾದರೆ, ಗೆಲ್ಲಲು 177 ರನ್‌ಗಳ ಗುರಿ ಪಡೆದಿದ್ದ ಆರ್ಸಿಬಿ ಪರ ವಿರಾಟ್ ಕೊಹ್ಲಿ 77 ರನ್‌ಗಳ ಇನ್ನಿಂಗ್ಸ್ ಆಡಿದರೆ, ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ಪಂದ್ಯವನ್ನು ಮುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್ಸಿಬಿ ಪ್ರಸ್ತುತ 2 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಆರ್ಸಿಬಿ, ಕೆಕೆಆರ್ ತಂಡವನ್ನು ಇದೇ ಮಾರ್ಚ್ 29 ರಂದು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Wed, 27 March 24