IPL 2024: 14 ತಿಂಗಳ ನಂತರ ಕಣಕ್ಕಿಳಿದ ರಿಷಬ್ ಪಂತ್​ಗೆ ಭವ್ಯ ಸ್ವಾಗತ; ವಿಡಿಯೋ ನೋಡಿ

|

Updated on: Mar 23, 2024 | 5:47 PM

IPL 2024 Rishabh Pant: ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೊನೆಗೂ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. 2022 ರ ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಹಲವಾರು ಸುತ್ತಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆದರೆ ತಮ್ಮ ಧೈರ್ಯ ಮತ್ತು ಬಲವಾದ ಇಚ್ಛಾಶಕ್ತಿಯಿಂದಾಗಿ, ಪಂತ್ ಸುಮಾರು 14 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ.

IPL 2024: 14 ತಿಂಗಳ ನಂತರ ಕಣಕ್ಕಿಳಿದ ರಿಷಬ್ ಪಂತ್​ಗೆ ಭವ್ಯ ಸ್ವಾಗತ; ವಿಡಿಯೋ ನೋಡಿ
ರಿಷಬ್ ಪಂತ್
Follow us on

ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಕೊನೆಗೂ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. 2022 ರ ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಹಲವಾರು ಸುತ್ತಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆದರೆ ತಮ್ಮ ಧೈರ್ಯ ಮತ್ತು ಬಲವಾದ ಇಚ್ಛಾಶಕ್ತಿಯಿಂದಾಗಿ, ಪಂತ್ ಸುಮಾರು 14 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಡೆಲ್ಲಿಯ (Punjab Kings vs Delhi Capitals) ಮೊದಲ ಪಂದ್ಯದಲ್ಲಿ ತಂಡದ ನಾಯಕತ್ವವಹಿಸಿಕೊಂಡಿರುವ ಪಂತ್, ಟಾಸ್ ವೇಳೆ ಕಳೆದ 14 ತಿಂಗಳುಗಳ ಪ್ರಯಾಣ ನೆನೆದ ಭಾವುಕರೂ ಆದರು.

ವಾಸ್ತವವಾಗಿ ಪಂತ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿರುವುದರಿಂದ ಅವರ ವಾಪಸಾತಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಏಕೆಂದರೆ ವಿಕೆಟ್ ಕೀಪಿಂಗ್ ಸಮಯದಲ್ಲಿ ಮೊಣಕಾಲು ಹೆಚ್ಚು ಬಳಸಲ್ಪಡುತ್ತದೆ. ಪಂತ್ ಮೊದಲಿನಂತೆ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆ ಮೂಡಿತ್ತು. ಆದರೆ, ಎಲ್ಲ ಅನುಮಾನಗಳನ್ನು ಬದಿಗೊತ್ತಿ ಪಂತ್ ಐಪಿಎಲ್​ನಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

ಪಂತ್ ಹೇಳಿದ್ದೇನು?

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಂತರ ಮಾತನಾಡಿದ ಪಂತ್, ನಾವು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು. ವಿಕೆಟ್ ಸ್ವಲ್ಪ ನಿಧಾನವಾಗಿ ಕಾಣುತ್ತಿದೆ. ಇದು ನಿಜವಾಗಿಯೂ ನನಗೆ ಭಾವನಾತ್ಮಕ ಸಮಯ. ನಾನು ಈ ಕ್ಷಣವನ್ನು ಆನಂದಿಸಲು ಬಯಸುತ್ತೇನೆ. ನಾನು ಹೆಚ್ಚು ಯೋಚಿಸುವುದಿಲ್ಲ. ಕಳೆದ ಸೀಸನ್ ಬಗ್ಗೆ ನನಗೆ ಚಿಂತೆಯಿಲ್ಲ. ಇದು ನನಗೆ ನಿಜವಾಗಿಯೂ ರೋಮಾಂಚನಕಾರಿ ಸಮಯ. ನಾವು ಚೆನ್ನಾಗಿ ತಯಾರಿ ನಡೆಸಿದ್ದೇವೆ ಎಂದರು.

18 ರನ್​ಗೆ ಪಂತ್ ಔಟ್

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಪಂತ್​ಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಅದ್ಭುತ ಸ್ವಾಗತ ಸಿಕ್ಕಿತು. ಎಲ್ಲರು ಚಪ್ಪಾಳೆ ತಟ್ಟುವ ಮೂಲಕ ಪಂತ್​ಗೆ ಸ್ವಾಗತ ಕೊರಿದರು. ಆದರೆ ಪಂತ್ ಇನ್ನಿಂಗ್ಸ್ ಅತ್ಯಂತ ವೇಗವಾಗಿ ಅಂತ್ಯಗೊಂಡಿತು. ಡೇವಿಡ್ ವಾರ್ನರ್ ವಿಕೆಟ್ ಬಳಿಕ ಬಂದ ಪಂತ್, 13 ಎಸೆತಗಳಲ್ಲಿ 2 ಬೌಂಡರಿ ಸಹಿತ 18 ರನ್​ ಗಳಿಸಲಷ್ಟೇ ಶಕ್ತರಾದರು. ಕೊನೆಗೆ ಹರ್ಷಲ್ ಪಟೇಲ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ 14 ತಿಂಗಳ ನಂತರ ಮೈದಾನಕ್ಕೆ ಮರಳಿದ ಪಂತ್​ಗೆ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಮೊದಲ ಇನ್ನಿಂಗ್ಸ್ ಹೀಗಿತ್ತು

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 174 ರನ್ ಗಳಿಸಿ ಗೆಲುವಿಗೆ 175 ರನ್‌ಗಳ ಸವಾಲನ್ನು ನೀಡಿದೆ. ಡೆಲ್ಲಿಗೆ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಜೋಡಿ ಭರವಸೆಯ ಆರಂಭ ನೀಡಿತು. ಮೂರು ಓವರ್‌ಗಳಲ್ಲಿ ಇವರಿಬ್ಬರು 39 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ನಾಲ್ಕನೇ ಓವರ್​ನಲ್ಲಿ ಮಿಚೆಲ್ ಮಾರ್ಷ್ ವಿಕೆಟ್ ಪತನವಾಯಿತು. ನಂತರ ಡೇವಿಡ್ ವಾರ್ನರ್ ಮತ್ತು ಶಾಯ್ ಹೋಪ್ ಜೊತೆಯಾದರು. ಈ ಜೋಡಿ 33 ರನ್‌ಗಳ ಜೊತೆಯಾಟವಾಡಿತು. ಆದರೆ ಈ ಜೋಡಿಯನ್ನು ಮುರಿಯುವಲ್ಲಿ ಹರ್ಷಲ್ ಪಟೇಲ್ ಯಶಸ್ವಿಯಾದರು. ಆ ಬಳಿಕ ಎಲ್ಲರಿಗಾಗಿ ಕಾದು ಕುಳಿತಿದ್ದ ರಿಷಬ್ ಪಂತ್ ಅಖಾಡಕ್ಕೆ ಇಳಿದರು. ಆದರೆ ತಮ್ಮ ಇನ್ನಿಂಗ್ಸ್​ನಲ್ಲಿ 12 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಡೆಲ್ಲಿ ಪರ ಅದ್ಭುತ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಪೊರೆಲ್ 10 ಎಸೆತಗಳಲ್ಲಿ 32 ರನ್ ಗಳಿಸಿದಲ್ಲದೆ ಕೊನೆಯ ಓವರ್‌ನಲ್ಲಿ 25 ರನ್ ಕೂಡ ಚಚ್ಚಿ ತಂಡವನ್ನು ಸ್ಪಧಾತ್ಮಕ ಮೊತ್ತಕೆ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Sat, 23 March 24