IPL 2024: ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಯುವ ಸ್ಪೋಟಕ ದಾಂಡಿಗನಿಗೆ ಬುಲಾವ್..!

| Updated By: ಝಾಹಿರ್ ಯೂಸುಫ್

Updated on: Aug 12, 2023 | 5:57 PM

IPL 2024: ದೇವಧರ್ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೇರಳದ ಯುವ ಆರಂಭಿಕ ಆಟಗಾರ ರೋಹನ್ ಕುನ್ನುಮ್ಮಲ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಟ್ರಯಲ್ಸ್​ನಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರೋಹನ್ ಕುನ್ನಮ್ಮಲ್ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

IPL 2024: ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಯುವ ಸ್ಪೋಟಕ ದಾಂಡಿಗನಿಗೆ ಬುಲಾವ್..!
Rohan Kunnummal
Follow us on

ಇಂಡಿಯನ್ ಪ್ರೀಮಿಯರ್ ಲೀಗ್  (IPL 2024) ಸೀಸನ್ 17 ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಕೆಲ ತಂಡಗಳಿಗೆ ಹೊಸ ಕೋಚ್​ಗಳು ನೇಮಕವಾಗಿದ್ದಾರೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು  ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಇಳಿದಿದೆ. ಇದರ ಮೊದಲ ಭಾಗವಾಗಿ ಕೇರಳದ ಯುವ ಸ್ಪೋಟಕ ದಾಂಡಿಗ ರೋಹನ್ ಕುನ್ನುಮ್ಮಲ್​ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬುಲಾವ್ ಬಂದಿದೆ.

ಐಪಿಎಲ್ ಸೀಸನ್ 17 ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಟ್ರಯಲ್ಸ್ ಆಯೋಜಿಸಿದ್ದು, ಇದರಲ್ಲಿ ಕೇರಳ ತಂಡದ ಆರಂಭಿಕ ಆಟಗಾರ ರೋಹನ್ ಕುನ್ನುಮ್ಮಲ್ ಭಾಗವಹಿಸಿದ್ದಾರೆ. ಈ ಟ್ರಯಲ್ಸ್​ನಲ್ಲಿ ಯುವ ದಾಂಡಿಗನ ಬ್ಯಾಟಿಂಗ್ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದ್ದು, ಹೀಗಾಗಿ ಮುಂದಿನ ಸೀಸನ್ ಹರಾಜಿನಲ್ಲಿ ರೋಹನ್ ಕುನ್ನುಮ್ಮಲ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ದೇಶೀಯ ಅಂಗಳದಲ್ಲಿ ರೋಹನ್ ಅಬ್ಬರ:

ಈ ಬಾರಿಯ ದೇವಧರ್ ಟ್ರೋಫಿಯಲ್ಲಿ ದಕ್ಷಿಣ ವಲಯ ಪರ ಇನಿಂಗ್ಸ್​ ಆರಂಭಿಸಿದ್ದ ರೋಹನ್ ಕುನ್ನುಮ್ಮಲ್ 62.20 ರ ಸರಾಸರಿಯಲ್ಲಿ ಒಟ್ಟು 311 ರನ್​ ಕಲೆಹಾಕಿದ್ದರು. ಅಲ್ಲದೆ ಟೂರ್ನಿಯಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು.

  • ಈ ಬಾರಿಯ ದೇವದರ್ ಟ್ರೋಫಿಯಲ್ಲಿ ಅತ್ಯಧಿಕ ರನ್​ ಕಲೆಹಾಕಿದ್ದು ರಿಯಾನ್ ಪರಾಗ್. ಪೂರ್ವ ವಲಯ ಪರ ಕಣಕ್ಕಿಳಿದಿದ್ದ ಪರಾಗ್ ಒಟ್ಟು 354 ರನ್​ ಬಾರಿಸಿದ್ದರು.
  • ದಕ್ಷಿಣ ವಲಯ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಮಯಾಂಕ್ ಅಗರ್ವಾಲ್ ಒಟ್ಟು 341 ರನ್​ ಬಾರಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
  • ರೋಹನ್ ಕುನ್ನುಮ್ಮಲ್ ಒಟ್ಟು 311 ರನ್​ಗಳಿಸುವ ಮೂಲಕ ದೇವಧರ್ ಟ್ರೋಫಿ 2023 ರ ರನ್​ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್​ ಕನಸು:

ಕಳೆದ ಎರಡು ವರ್ಷಗಳಿಂದ ದೇಶೀಯ ಅಂಗಳದಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸುತ್ತಿರುವ ರೋಹನ್ ಕುನ್ನಮ್ಮಲ್​ಗೆ ಇದುವರೆಗೆ ಐಪಿಎಲ್​ನಲ್ಲಿ ಅವಕಾಶ ದೊರೆತಿಲ್ಲ. ಈ ಬಾರಿಯ ದೇವಧರ್ ಟ್ರೋಫಿಯಲ್ಲಿ 123.90 ರ ಸ್ಟ್ರೈಕ್-ರೇಟ್​ನಲ್ಲಿ ಬ್ಯಾಟ್ ಬೀಸುವ ಮೂಲಕ ರೋಹನ್ ಇದೀಗ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಟ್ರಯಲ್ಸ್​:

ಕೇರಳದ ಯುವ ದಾಂಡಿಗ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತಿ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೈರೆಕ್ಟರ್ ಸೌರವ್ ಗಂಗೂಲಿ ಮತ್ತು ಪ್ರವೀಣ್ ಆಮ್ರೆ ಜೊತೆ ರೋಹನ್ ಸಂವಹನ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ರೋಹನ್, ಗಂಗೂಲಿ ಹಾಗೂ ಆಮ್ರೆ ಸರ್ ಜೊತೆ ಚರ್ಚಿಸಿರುವುದು ತುಂಬಾ ಸಹಾಯಕವಾಗಿದೆ. ನೆಟ್ಸ್‌ನಲ್ಲಿ ಕೆಲವು ತಾಂತ್ರಿಕ ಅಂಶಗಳೊಂದಿಗೆ ಅವರು ನನಗೆ ಸಹಾಯ ಮಾಡಿದ್ದಾರೆ. ಆಶಾದಾಯಕವಾಗಿ, ಇದು ನನ್ನ ವೃತ್ತಿಜೀವನದಲ್ಲಿ ಮುಂದಿನ ದಿನಗಳಲ್ಲಿ ಧನಾತ್ಮಕವಾಗಿ ಪ್ರತಿಫಲಿಸುತ್ತದೆ ಎಂಬ ನಂಬಿಕೆಯಿದೆ ಎಂದು ರೋಹನ್ ತಿಳಿಸಿದ್ದಾರೆ.

ಇದನ್ನೂ ಓದಿ: IPL 2024: ಗುಜರಾತ್ ಟೈಟಾನ್ಸ್​ ತಂಡದಿಂದ ಹೊರಬರಲಿದ್ದಾರಾ ಶುಭ್​ಮನ್ ಗಿಲ್?

ವಿದೇಶದಲ್ಲಿ ಐಪಿಎಲ್​?

ಈ ಬಾರಿಯ ಐಪಿಎಲ್ ವಿದೇಶದಲ್ಲಿ ನಡೆಯುವ ಸಾಧ್ಯತೆಯಿದೆ. 2024 ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಹೀಗಾಗಿ ಟೂರ್ನಿಯನ್ನು ಯುಎಇ ಅಥವಾ ಸೌತ್ ಆಫ್ರಿಕಾದಲ್ಲಿ ಆಯೋಜಿಸಬಹುದು. ಏಕೆಂದರೆ 2009 ರಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಐಪಿಎಲ್ ಅನ್ನು ಸೌತ್ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ 2014 ರಲ್ಲಿ ಲೋಕಸಭಾ ಚುನಾವಣೆಯ ಕಾರಣ ಐಪಿಎಲ್​ನ ದ್ವಿತೀಯಾರ್ಧವನ್ನು ಯುಎಇನಲ್ಲಿ ನಡೆಸಲಾಗಿತ್ತು. ಹೀಗಾಗಿ ಈ ಬಾರಿ ಕೂಡ ಐಪಿಎಲ್ ವಿದೇಶಕ್ಕೆ ಶಿಫ್ಟ್ ಆಗುವ ಸಾಧ್ಯತೆಯಿದೆ.