IPL 2024: ಸುಳ್ಳು ಹೇಳಿದ್ರಾ ರೋಹಿತ್ ಶರ್ಮಾ? ಹಿಟ್​ಮ್ಯಾನ್​ ಆರೋಪಕ್ಕೆ ಸ್ಟಾರ್ ಸ್ಪೋರ್ಟ್ಸ್ ಸ್ಪಷ್ಟನೆ

|

Updated on: May 21, 2024 | 4:59 PM

IPL 2024: ಸ್ಟಾರ್ ಸ್ಪೋರ್ಟ್ಸ್ ತಮ್ಮ ಟಿಆರ್‌ಪಿಗಾಗಿ ತಮ್ಮ ವೈಯಕ್ತಿಕ ಸಂಭಾಷಣೆಗಳನ್ನು ಪ್ರಸಾರ ಮಾಡಿದೆ ಎಂದು ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ ಆರೋಪಿಸಿದ್ದರು. ಅಲ್ಲದೆ ಐಪಿಎಲ್ ಪ್ರಸಾರಕರ ವಿರುದ್ಧವೂ ತಮ್ಮ ಅಸಮಾಧಾನ ಹೊರಹಾಕಿದ್ದರು. ಆದರೀಗ ರೋಹಿತ್ ಶರ್ಮಾ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ವಾಹಿನಿ, ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.

IPL 2024: ಸುಳ್ಳು ಹೇಳಿದ್ರಾ ರೋಹಿತ್ ಶರ್ಮಾ? ಹಿಟ್​ಮ್ಯಾನ್​ ಆರೋಪಕ್ಕೆ ಸ್ಟಾರ್ ಸ್ಪೋರ್ಟ್ಸ್ ಸ್ಪಷ್ಟನೆ
ರೋಹಿತ್ ಶರ್ಮಾ
Follow us on

ರೋಹಿತ್ ಶರ್ಮಾ (Rohit Sharma) ಮತ್ತು ಸ್ಟಾರ್ ಸ್ಪೋರ್ಟ್ಸ್ (Star Sports) ನಡುವಿನ ಆರೋಪ ಹಾಗೂ ಪ್ರತ್ಯಾರೋಪಗಳ ನಡುವಿನ ಸಮರ ಇದೀಗ ಇನ್ನೊಂದು ಹಂತ ತಲುಪಿದೆ. ವಾಸ್ತವವಾಗಿ ಸ್ಟಾರ್ ಸ್ಪೋರ್ಟ್ಸ್ ತಮ್ಮ ಟಿಆರ್‌ಪಿಗಾಗಿ ತಮ್ಮ ವೈಯಕ್ತಿಕ ಸಂಭಾಷಣೆಗಳನ್ನು ಪ್ರಸಾರ ಮಾಡಿದೆ ಎಂದು ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ ಆರೋಪಿಸಿದ್ದರು. ಅಲ್ಲದೆ ಐಪಿಎಲ್ ಪ್ರಸಾರಕರ ವಿರುದ್ಧವೂ ತಮ್ಮ ಅಸಮಾಧಾನ ಹೊರಹಾಕಿದ್ದರು. ಆದರೀಗ ರೋಹಿತ್ ಶರ್ಮಾ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ವಾಹಿನಿ, ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಅಲ್ಲದೆ ರೋಹಿತ್ ಶರ್ಮಾ ಅವರ ಯಾವುದೇ ಆಡಿಯೊವನ್ನು ಪ್ರಸಾರ ಮಾಡಿಲ್ಲ ಎಂದು ಹೇಳಿಕೊಂಡಿದೆ.

ಸ್ಟಾರ್ ಸ್ಪೋರ್ಟ್ಸ್ ಹೇಳಿದ್ದೇನು?

ರೋಹಿತ್ ಶರ್ಮಾ ಅವರ ಆರೋಪಗಳಿಗೆ ಉತ್ತರಿಸಿದ ಸ್ಟಾರ್ ಸ್ಪೋರ್ಟ್ಸ್, ‘ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ರೋಹಿತ್ ಶರ್ಮಾ ಅವರ ಸಂಭಾಷಣೆಯ ಕ್ಲಿಪ್ ಮೇ 16, ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಸೆರೆ ಹಿಡಿದಿದ್ದು. ಆ ಕ್ಲಿಪ್ ಅನ್ನು ಪ್ರಸಾರ ಮಾಡುವ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಹೊಂದಿತ್ತು. ಆ ವಿಡಿಯೋದಲ್ಲಿ ರೋಹಿತ್ ಶರ್ಮಾ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು. ಅವರ ಕೊರಿಕೆಯ ಮೇರೆಗೆ ನಾವು ಆ ಕ್ಲಿಪ್‌ನ ಯಾವುದೇ ಆಡಿಯೋ ಅಥವಾ ಸಂಭಾಷಣೆಯನ್ನು ರೆಕಾರ್ಡ್ ಮಾಡಿಲ್ಲ ಅಥವಾ ಪ್ರಸಾರ ಮಾಡಿಲ್ಲ. ಆ ವೀಡಿಯೋವನ್ನು ಪ್ರೀ ಶೋಗೆ ಮಾತ್ರ ಬಳಸಲಾಗಿತ್ತು ಆದರೆ ಅದರಲ್ಲಿ ಆಡಿಯೋ ರೆಕಾರ್ಡ್ ಇರಲಿಲ್ಲ ಎಂದು ಹೇಳಿಕೊಂಡಿದೆ.

ಅಷ್ಟಕ್ಕೂ ಈ ವಿವಾದ ಶುರುವಾಗಿದ್ದು ಎಲ್ಲಿಂದ?

ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ರೋಹಿತ್ ಶರ್ಮಾ, ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆ ವೇಳೆ ರೋಹಿತ್, ಮುಂಬೈ ತಂಡದಲ್ಲಿ ಇದು ನನ್ನ ಕೊನೆಯ ಸೀಸನ್ ಎಂಬರ್ಥದಲ್ಲಿ ಮಾತನಾಡಿದ್ದರು. ಆ ಬಳಿಕ ಇವರಿಬ್ಬರ ನಡುವಿನ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದಾದ ನಂತರ ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ, ಧವಳ್ ಕುಲಕರ್ಣಿ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕ್ಯಾಮರಾಮ್ಯಾನ್ ಇವರಿಬ್ಬರ ನಡುವಿನ ಸಂಭಾಷಣೆಯನ್ನು ಚಿತ್ರಿಕರಿಸಲು ಮುಂದಾದರು. ಆಗ ರೋಹಿತ್ ಶರ್ಮಾ ತಮ್ಮಿಬ್ಬರ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡದಂತೆ ಹಾಗೂ ಈ ಆಡಿಯೊವನ್ನು ಡಿಲೀಟ್ ಮಾಡುವಂತೆ ವಿನಂತಿ ಮಾಡಿದ್ದರು.

ರೋಹಿತ್ ಟ್ವೀಟ್​ನಲ್ಲಿರುವುದೇನು?

ತನ್ನ ಮನವಿಗೆ ಗೌರವ ನೀಡದೆ, ವಿಡಿಯೋ ಪ್ರಸಾರ ಮಾಡಿದ್ದ ಸ್ಟಾರ್ ಸ್ಪೋರ್ಟ್ಸ್‌ ವಿರುದ್ಧ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲಿ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವ ರೋಹಿತ್, ‘ಕ್ರಿಕೆಟಿಗರ ಜೀವನದಲ್ಲಿ ಕ್ಯಾಮೆರಾಗಳು ನುಸುಳಿವೆ, ಅವರ ಪ್ರತಿಯೊಂದು ಹೆಜ್ಜೆಯೂ ದಾಖಲಾಗುತ್ತಿದೆ. ಅದು ತರಬೇತಿ ಸಮಯವಾಗಿರಬಹುದು ಅಥವಾ ಕ್ರಿಕೆಟಿಗರು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ಖಾಸಗಿ ಸಂಭಾಷಣೆಯಾಗಿರಬಹುದು. ನನ್ನ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್ ಬಳಿ ಮನವಿ ಮಾಡಿದರೂ, ಅವರು ಅದನ್ನು ರೆಕಾರ್ಡ್ ಮಾಡಿ, ಪ್ರಸಾರ ಮಾಡಿದ್ದಾರೆ. ಇದು ಖಾಸಗಿತನದ ಉಲ್ಲಂಘನೆಯಾಗಿದೆ. ವೀಕ್ಷರಿಗೆ ಕುತೂಹಲಕಾರಿ ಸುದ್ದಿಯನ್ನು ನೀಡುವುದಕ್ಕೆ ಹೆಚ್ಚು ಒತ್ತು ನೀಡುವ ಈ ನಡೆಯಿಂದ ಒಂದು ದಿನ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್‌ ನಡುವೆ ಇರುವ ನಂಬಿಕೆ ಮುರಿದುಹೋಗುತ್ತದೆ. ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ನಿಮ್ಮ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸಿ ಎಂದಿದ್ದರು. ಆದರೀಗ ರೋಹಿತ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡುವ ಮೂಲಕ ಸ್ಟಾರ್ ಸ್ಪೋರ್ಟ್ಸ್ ವಿವಾದಗಳಿಗೆ ತೆರೆ ಎಳೆಯುವ ಕೆಲಸ ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Tue, 21 May 24