ಎರಡು ಐಪಿಎಲ್ (IPL) ಆವೃತ್ತಿಗಳ ನಂತರ ಮತ್ತೆ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಸೇರಿಕೊಂಡಿರುವ ಹಾರ್ದಿಕ್ ಪಾಂಡ್ಯಗೆ (Hardik Pandya) ತಂಡದ ನಾಯಕತ್ವ ಹಸ್ತಾಂತರಿಸಲಾಗಿದೆ. ಹಲವು ವರ್ಷಗಳಿಂದ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಫ್ರಾಂಚೈಸಿಯ ಈ ನಡೆಯನ್ನು ರೋಹಿತ್ ಶರ್ಮಾ ಅಭಿಮಾನಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮುಂಬೈ ಇಂಡಿಯನ್ಸ್‌ನ ಜೆರ್ಸಿ ಹಾಗೂ ಕ್ಯಾಪ್ ಅನ್ನು ಸುಟ್ಟು ಹಾಕುವ ಮೂಲಕ ಅಭಿಮಾನಿಗಳು ಪ್ರತಿಭಟಿಸುತ್ತಿದ್ದಾರೆ. ಏತನ್ಮಧ್ಯೆ, ಭಾರತ ಟಿ20 ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಸೂರ್ಯಕುಮಾರ್ ಯಾದವ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಒಡೆದ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಈ ಅರ್ಥದಲ್ಲಿ, ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ನ ನಾಯಕನನ್ನಾಗಿ ಮಾಡಿದ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎಂದು ಊಹಿಸಲಾಗಿದೆ. ವಾಸ್ತವವಾಗಿ, 2023 ರ ಐಪಿಎಲ್ ಆವೃತ್ತಿಯಲ್ಲಿ, ರೋಹಿತ್ ಶರ್ಮಾ ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದಾಗ, ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಿದ್ದರು ಮತ್ತು ತಂಡದ ಉಪನಾಯಕರಾಗಿಯೂ ಆಯ್ಕೆಯಾಗಿದ್ದರು.
ಈ ಮೂಲಕ ಮುಂಬೈ ತಂಡದ ನಾಯಕತ್ವಕ್ಕೆ ತಾನು ಕೂಡ ಪ್ರಬಲ ಸ್ಪರ್ಧಿ ಎಂಬ ಸುಳಿವನ್ನು ಸೂರ್ಯ ನೀಡಿದ್ದರು. ಆದರೆ ಈಗ ಏಕಾಏಕಿಯಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಅದು ಎರಡು ವರ್ಷ ಬೇರೆ ತಂಡದಲ್ಲಿ ಆಡಿ, ಆ ನಂತರ ತಂಡ ಸೇರಿಕೊಂಡಿರುವ ಪಾಂಡ್ಯಗೆ ನಾಯಕತ್ವ ನೀಡಿರುವುದು ಸೂರ್ಯ ಅವರ ಅಸಹನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಸೂರ್ಯಕುಮಾರ್ ಅವರ ಈ ಪೋಸ್ಟ್ ನ ನಿಜವಾದ ಅರ್ಥವೇನು? ಇದಕ್ಕೆ ಸೂರ್ಯ ಮಾತ್ರ ಉತ್ತರಿಸಬಲ್ಲರು.
ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ 2022 ರ ಮೊದಲು ಮುಂಬೈ ಇಂಡಿಯನ್ಸ್ ತಂಡದಿಂದ ಬಿಡುಗಡೆ ಮಾಡಿತು. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಎರಡು ವರ್ಷಗಳ ಕಾಲ ಅಲ್ಲಿ ತಂಡವನ್ನು ಮುನ್ನಡೆಸಿದರು. ಇದರಲ್ಲಿ ನಾಯಕತ್ವವಹಿಸಿಕೊಂಡ ಮೊದಲ ಆವೃತ್ತಿಯಲ್ಲೇ ಪಾಂಡ್ಯ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆ ಬಳಿಕ ಸತತ ಎರಡನೇ ಆವೃತ್ತಿಯಲ್ಲೂ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು.
ಇದೀಗ 2024ರ ಐಪಿಎಲ್ ಹರಾಜಿಗೂ ಮುನ್ನ ಪಾಂಡ್ಯ ಅವರನ್ನು ಮುಂಬೈ ಪ್ರಾಂಚೈಸಿ ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೇ ವೇಳೆ ಬಹಳ ವರ್ಷಗಳಿಂದ ಮುಂಬೈ ತಂಡದಲ್ಲಿ ಆಡಿದ್ದ ಜಸ್ಪ್ರೀತ್ ಬುಮ್ರಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಕೆಲವೊಮ್ಮೆ ಮೌನವೇ ಉತ್ತರ’ ಎಂಬ ಪೋಸ್ಟ್ ಒಂದನ್ನು ಹಂಚಿಕೊಂಡು ಫ್ರಾಂಚೈಸಿ ವಿರುದ್ಧವಿರುವ ಅಸಮಾಧಾನವನ್ನು ಹೊರಹಾಕಿದ್ದರು.
ಹೀಗಾಗಿ ರೋಹಿತ್ ಶರ್ಮಾ ನಂತರ ಮುಂಬೈ ತಂಡದ ನಾಯಕರಾಗುವ ಕನಸು ಹೊತ್ತಿದ್ದ ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಗೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಸಿಕ್ಕಿರುವುದು ಎಷ್ಟರ ಮಟ್ಟಿಗೆ ಅಸಮಾಧಾನ ಸೃಷ್ಟಿಸಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Sat, 16 December 23