IPL 2024: ಮುಂಬೈಗೆ ಹಾರ್ದಿಕ್ ಪಾಂಡ್ಯ? ಗುಜರಾತ್ ಸಾರಥ್ಯ ಯಾರಿಗೆ? ರೇಸ್ನಲ್ಲಿ ಇಬ್ಬರು
IPL 2024, Hardik Pandya: ಒಂದು ವೇಳೆ ಪಾಂಡ್ಯ ಮುಂಬೈ ತಂಡವನ್ನು ಸೇರಿಕೊಂಡರೆ ಅವರನ್ನು ರೋಹಿತ್‌ಗೆ ಪರ್ಯಾಯವಾಗಿಯೂ ನೋಡಲಾಗುತ್ತಿದೆ. ಆದರೆ ಗುಜರಾತ್ ತಂಡದಲ್ಲಿ ಪಾಂಡ್ಯಗೆ ಪರ್ಯಾಯ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಮುಂದಿನ ವರ್ಷದ ಐಪಿಎಲ್‌ಗೆ (IPL 2024) ಈಗಾಗಲೇ ಸಿದ್ಧತೆ ಆರಂಭವಾಗಿದೆ. ಆಟಗಾರರ ಟ್ರೆಡಿಂಗ್ ಮುಕ್ತಾಯಗೊಳ್ಳಲು ಇನ್ನೊಂದೆ ದಿನ ಬಾಕಿ ಉಳಿದಿರುವುದು. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಉಳಿಸಿಕೊಳ್ಳುವ ಹಾಗೂ ತಂಡದಿಂದ ಕೈಬಿಡುವ ಕೆಲಸವನ್ನು ತ್ವರಿತಗೊಳಿಸಿವೆ. ಈ ನಡುವೆ ತಮ್ಮ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಚಾಂಪಿಯನ್ ಮಾಡಿದ್ದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ತಮ್ಮ ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ಗೆ ಮರಳಬಹುದು ಎಂದು ಹಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಎರಡು ವರ್ಷಗಳ ಕಾಲ ಗುಜರಾತ್ ತಂಡದಲ್ಲಿದ್ದ ಪಾಂಡ್ಯ ಹಾಗೂ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಇದರಿಂದಾಗಿ ಪಾಂಡ್ಯ ಗುಜರಾತ್ ತಂಡವನ್ನು ತ್ಯಜಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೀಗಿರುವಾಗ ಪಾಂಡ್ಯ ಮುಂಬೈ ತಂಡವನ್ನು ಸೇರಿಕೊಂಡರೆ, ಗುಜರಾತ್ ತಂಡದ ನಾಯಕ ಯಾರು ಎಂಬ ಪ್ರಶ್ನೆ ಎದುರಾಗಿದೆ.
ಗುಜರಾತ್ನಿಂದ ಮುಂಬೈಗೆ ಪಾಂಡ್ಯ?
2022ರಲ್ಲಿ ಐಪಿಎಲ್‌ಗೆ ಎಂಟ್ರಿಕೊಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಎರಡನೇ ಸೀಸನ್ ಅಂದರೆ ಐಪಿಎಲ್-2023ರಲ್ಲೂ ಈ ತಂಡ ಬಲಿಷ್ಠ ಪ್ರದರ್ಶನ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ನಲ್ಲಿ ಸೋತು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತ್ತು. ಈ ಎರಡೂ ಆವೃತ್ತಿಗಳಲ್ಲೂ ನಾಯಕನಾಗಿ ಪಾಂಡ್ಯ ಅವರ ನಾಯಕತ್ವವನ್ನು ಹೆಚ್ಚು ಪ್ರಶಂಸಿಸಲಾಯಿತು. ಇದರೊಂದಿಗೆ ಪಾಂಡ್ಯ ಟೀಂ ಇಂಡಿಯಾದ ಟಿ20 ತಂಡದ ನಾಯಕರಾಗಿ ಮತ್ತು ಏಕದಿನ ತಂಡದ ಉಪನಾಯಕರಾಗಿಯೂ ಆಯ್ಕೆಯಾಗಿದ್ದರು. ಆದರೆ ಫ್ರಾಂಚೈಸಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಪಾಂಡ್ಯ ತಂಡ ತೊರೆಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಪಾಂಡ್ಯ ಮುಂಬೈ ತಂಡವನ್ನು ಸೇರಿಕೊಂಡರೆ ಅವರನ್ನು ರೋಹಿತ್‌ಗೆ ಪರ್ಯಾಯವಾಗಿಯೂ ನೋಡಲಾಗುತ್ತಿದೆ. ಆದರೆ ಗುಜರಾತ್ ತಂಡದಲ್ಲಿ ಪಾಂಡ್ಯಗೆ ಪರ್ಯಾಯ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ನಾಯಕನಾಗ್ತಾರಾ ಶುಭ್ಮನ್ ಗಿಲ್?
ಗುಜರಾತ್ ತಂಡವನ್ನು ಗಮನಿಸಿದರೆ ಅದರಲ್ಲಿ ನಾಯಕನಾಗಲು ಪ್ರಮುಖ ಇಬ್ಬರು ಆಟಗಾರರ ನಡುವೆ ಫೈಪೋಟಿ ಏರ್ಪಟ್ಟಿದೆ. ಅದರಲ್ಲಿ ಒಂದು ಹೆಸರು ಶುಭಮನ್ ಗಿಲ್. ಗುಜರಾತ್ ತಂಡವನ್ನು ಸೇರುವುದಕ್ಕೂ ಮುನ್ನ ಗಿಲ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ಒಂದು ಆವೃತ್ತಿಯ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಕೆಕೆಆರ್ ಫ್ರಾಂಚೈಸಿ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಆ ಬಳಿಕ ಗುಜರಾತ್ ಸೇರಿಕೊಂಡ ಗಿಲ್, ಫ್ರಾಂಚೈಸಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಅವರಿಗೆ ನಾಯಕತ್ವ ಹಸ್ತಾಂತರಿಸುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಮ್ಯಾನೇಜ್‌ಮೆಂಟ್ ನೇರವಾಗಿ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸದಿರುವ ಸಾಧ್ಯತೆಯಿದೆ.
ಏಕೆಂದರೆ ಇದು ಅವರ ಮೇಲೆ ಒತ್ತಡವನ್ನು ಉಂಟುಮಾಡಬಹುದು ಮತ್ತು ಅದರ ಪರಿಣಾಮ ಅವರ ನಾಯಕತ್ವದ ಮೇಲೆ ಗೋಚರಿಸಬಹುದು. ನಾಯಕತ್ವದ ಹೊರೆ ಬಿದ್ದಾಗ, ಆಟಗಾರನು ತನ್ನ ಫಾರ್ಮ್ ಕಳೆದುಕೊಳ್ಳುತ್ತಾನೆ. ತಂಡದ ಕೋಚ್ ಆಶಿಶ್ ನೆಹ್ರಾಗೆ ಇದು ಚೆನ್ನಾಗಿ ತಿಳಿದಿದೆ. ಅಕಸ್ಮಾತ್ ಗಿಲ್‌ಗೆ ನಾಯಕತ್ವ ನೀಡಿದರೆ ಅವರ ಬ್ಯಾಟ್ ಸೈಲೆಂಟ್ ಆಗಬಹುದು ಎಂಬುದು ಅವರ ಮನಸ್ಸಿನಲ್ಲಿಯೂ ಇದೆ. ಗಿಲ್ ಈ ಹಿಂದೆ ಇಷ್ಟು ದೊಡ್ಡ ವೇದಿಕೆಯಲ್ಲಿ ನಾಯಕತ್ವ ವಹಿಸದಿರುವುದು ಕೂಡ ಒಂದು ಕಾರಣವಾಗಿದೆ.
ರಶೀದ್ಗೆ ಅವಕಾಶ?
ತಂಡದ ಭವಿಷ್ಯದ ದೃಷ್ಟಿಯಿಂದ ನೋಡಿದಾಗ ಫ್ರಾಂಚೈಸಿಗೆ ಗಿಲ್‌ಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಏಕೆಂದರೆ ಗಿಲ್, ದೀರ್ಘಕಾಲ ಆಡುವ ಬ್ಯಾಟ್ಸ್‌ಮನ್. ನಾಯಕತ್ವದ ಸಾಮರ್ಥ್ಯವೂ ಅವರಲ್ಲಿದೆ. ಆದರೆ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ನೋಡಿದರೆ, ತಂಡಕ್ಕೆ ರಶೀದ್ ಖಾನ್ ರೂಪದಲ್ಲಿ ಇನ್ನೊಂದು ಆಯ್ಕೆಯಿದೆ. ಪಾಂಡ್ಯ ನಾಯಕರಾಗಿದ್ದಾಗ ರಶೀದ್ ತಂಡದ ಉಪನಾಯಕರಾಗಿದ್ದರು. ಅಲ್ಲದೆ ಪ್ರಪಂಚದಾದ್ಯಂತ ರಶೀದ್ಗೆ ಟಿ20 ಲೀಗ್ ಆಡಿದ ಅನುಭವವಿದೆ. ಅಲ್ಲದೆ ಈ ಹಿಂದೆ ಕೆಲವು ಸಂದರ್ಭಗಳಲ್ಲಿ ತಂಡದ ನಾಯಕರಾಗಿಯೂ ರಶೀದ್ ಕೆಲಸ ಮಾಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಫ್ರಾಂಚೈಸಿ ಕೆಲವು ಆವೃತ್ತಿಗಳಿಗೆ ರಶೀದ್ ಅವರಿಗೆ ನಾಯಕತ್ವ ನೀಡಿ, ಉಪನಾಯಕತ್ವವನ್ನು ಗಿಲ್‌ಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಇದರಿಂದ ಗಿಲ್‌ಗೆ ತನ್ನನ್ನು ನಾಯಕತ್ವದ ಪಾತ್ರಕ್ಕೆ ಹೊಂದಿಸಿಕೊಳ್ಳಲು ಸಾಕಷ್ಟು ಸಮಯ ಕೂಡ ಸಿಗಲಿದೆ. ನಂತರ ಗಿಲ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದು. ಈ ಇಬ್ಬರನ್ನು ಹೊರತುಪಡಿಸಿ, ಪ್ರಸ್ತುತ ಸೆಟಪ್‌ನಲ್ಲಿ ತಂಡವು ಬೇರೆ ಯಾವುದೇ ನಾಯಕತ್ವದ ಆಯ್ಕೆಯನ್ನು ಹೊಂದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:34 pm, Sat, 25 November 23