2025 ರ ಐಪಿಎಲ್ಗೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಆದರೆ ಈ ಮಿಲಿಯನ್ ಡಾಲರ್ ಟೂರ್ನಿಗೆ ಸಂಬಂಧಿಸಿದ ಕೆಲಸಗಳು ಈಗಾಗಲೇ ಆರಂಭವಾಗಿವೆ. ಈ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಬೇಕಿದೆ. ಈ ಮೆಗಾ ಹರಾಜಿಗೆ ಸಂಬಂಧಪಟ್ಟಂತೆ ಸಾಕಷ್ಟು ಊಹಪೋಹಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಮಾತ್ರ ಬಿಸಿಸಿಐ ಇದುವರೆಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೀಗ ಮುಂಬರುವ ಐಪಿಎಲ್ನಿಂದ ಪ್ರತಿ ಪಂದ್ಯವನ್ನು ಆಡುವ ಆಟಗಾರರಿಗೆ ಪಂದ್ಯ ಶುಲ್ಕವಾಗಿ 7.5 ಲಕ್ಷ ರೂ.ಗಳನ್ನು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಾಸ್ತವವಾಗಿ ಐಪಿಎಲ್‌ನಲ್ಲಿ ಇದುವರೆಗೆ ನಡೆದಿರುವ 17 ಆವೃತ್ತಿಗಳಲ್ಲಿ ಆಟಗಾರರಿಗೆ ಯಾವುದೇ ಪಂದ್ಯ ಶುಲ್ಕವನ್ನು ನೀಡುತ್ತಿರಲಿಲ್ಲ. ಬದಲಿಗೆ ಹರಾಜಿನಲ್ಲಿ ಯಾವ ಆಟಗಾರ, ಯಾವ ತಂಡಕ್ಕೆ, ಎಷ್ಟು ಮೊತ್ತಕ್ಕೆ ಹರಾಜುಗುತ್ತಿದ್ದನೋ, ಅಷ್ಟು ಮೊತ್ತವನ್ನು ಫ್ರಾಂಚೈಸಿ ಕಡೆಯಿಂದ ವೇತನವಾಗಿ ಪಡೆಯುತ್ತಿದ್ದ. ಅದನ್ನು ಬಿಟ್ಟರೆ ಪಂದ್ಯದಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ವಿವಿಧ ಪ್ರಶಸ್ತಿಗಳ ರೂಪದಲ್ಲಿ ಆಟಗಾರರಿಗೆ ಬಹುಮಾನದ ರೂಪದಲ್ಲಿ ಹಣ ಸಿಗುತ್ತಿತ್ತು. ಉಳಿದಂತೆ ಬಿಸಿಸಿಐ ವತಿಯಿಂದ ಯಾವುದೇ ರೀತಿಯ ವೇತನ ಆಟಗಾರರಿಗೆ ಸಿಗುತ್ತಿರಲಿಲ್ಲ. ಆದರೀಗ ಜಯ್ ಶಾ ನೀಡಿರುವ ಹೇಳಿಕೆಯ ಪ್ರಕಾರ, ಮುಂದಿನ ಆವೃತ್ತಿಯಿಂದ ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಪಂದ್ಯ ಶುಲ್ಕವಾಗಿ 7.5 ಲಕ್ಷ ರೂಗಳನ್ನು ನೀಡಲಾಗುತ್ತದೆ.
ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ಮುಂದಿನ ಸೀಸನ್‌ನಿಂದ ಆಟಗಾರರು ಐಪಿಎಲ್‌ನಲ್ಲಿ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಘೋಷಿಸಿದ್ದಾರೆ. ಆಟಗಾರರು ಒಂದು ಪಂದ್ಯಕ್ಕೆ 7.5 ಲಕ್ಷ ರೂಪಾಯಿ ಪಡೆಯುತ್ತಾರೆ. ಈ ರೀತಿಯಾಗಿ ಒಬ್ಬ ಆಟಗಾರ ಲೀಗ್ ಹಂತದ ಎಲ್ಲಾ 14 ಪಂದ್ಯಗಳನ್ನು ಆಡಿದರೆ ಅವನಿಗೆ ಒಟ್ಟಾರೆಯಾಗಿ 1.05 ಕೋಟಿ ರೂ. ಪಂದ್ಯ ಶುಲ್ಕವಾಗಿ ಸಿಗಲಿದೆ.
ಇದಲ್ಲದೆ ಒಬ್ಬ ಆಟಗಾರ ಲೀಗ್ ಹಂತದ 14 ಪಂದ್ಯಗಳನ್ನು ಹೊರತುಪಡಿಸಿ, ಪ್ಲೇಆಫ್‌ನಲ್ಲಿ ಫೈನಲ್ ಸೇರಿದಂತೆ ಇನ್ನೂ 3 ಪಂದ್ಯಗಳನ್ನು ಆಡಿದರೆ, ಅವನಿಗೆ ಒಟ್ಟು 1.23 ಕೋಟಿ ರೂ. ವೇತನ ಸಿಗಲಿದೆ. ಅಂದರೆ ಒಬ್ಬ ಆಟಗಾರನ ಹರಾಜು ಶುಲ್ಕ ಕೋಟಿಗಟ್ಟಲೆ ಇರಲಿ ಅಥವಾ ಮೂಲ ಬೆಲೆ ಕೇವಲ 20 ಲಕ್ಷ ರೂ.ಗಳಿರಲಿ, ಪಂದ್ಯಾವಳಿಯಲ್ಲಿ ಅವರು ಆಡಿದ ಪಂದ್ಯಗಳ ಸಂಖ್ಯೆಗೆ ಅನುಗುಣವಾಗಿ ಆತ ವೇತನ ಪಡೆಯಲಿದ್ದಾನೆ. ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿಯನ್ನು ಇಡುತ್ತವೆ ಎಂದು ಶಾ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
In a historic move to celebrate consistency and champion outstanding performances in the #IPL, we are thrilled to introduce a match fee of INR 7.5 lakhs per game for our cricketers! A cricketer playing all league matches in a season will get Rs. 1.05 crores in addition to his…
— Jay Shah (@JayShah) September 28, 2024
ಬಿಸಿಸಿಐ ತಂದಿರುವ ಈ ಹೊಸ ನಿಯಮ ಸ್ಟಾರ್ ಆಟಗಾರರಿಗೆ ಅಷ್ಟೇನೂ ಮಹತ್ವದ್ದಾಗಿಲ್ಲ. ಏಕೆಂದರೆ ಅವರು ಹರಾಜಿನಲ್ಲೇ ಕೋಟಿಗಟ್ಟಲೇ ಹಣವನ್ನು ಪಡೆದುಕೊಂಡಿರುತ್ತಾರೆ. ಆದರೆ ಅನ್‌ಕ್ಯಾಪ್ಡ್ ಆಟಗಾರರಿಗೆ ಈ ನಿಯಮ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಏಕೆಂದರೆ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರ ಮೂಲ ಬೆಲೆಯನ್ನು ಕೇವಲ 20 ಲಕ್ಷ ರೂ.ಗಳಿಗೆ ಇರಿಸಲಾಗಿದೆ. ಇನ್ನು ಮುಂದೆ ಒಬ್ಬ ಅನ್‌ಕ್ಯಾಪ್ಡ್ ಆಟಗಾರ 20 ಲಕ್ಷ ರೂ.ಗೆ ಮಾರಾಟವಾಗಿ ಆತ ಆವೃತ್ತಿಯ ಎಲ್ಲಾ ಪಂದ್ಯಗಳನ್ನು ಆಡಿದರೆ, ಆತನಿಗೆ 1.05 ಕೋಟಿ ರೂ. ವೇತನ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Sat, 28 September 24