ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತೆ ಕಣಕ್ಕಿಳಿಯುವುದು ಯಾವಾಗ?
Virat Kohli - Rohit Sharma: ವಿಜಯ ಹಝಾರೆ ಟೂರ್ನಿಯ ದ್ವಿತೀಯ ಪಂದ್ಯಗಳು ಡಿಸೆಂಬರ್ 26 ರಂದು ನಡೆಯಲಿದೆ. ಮೊದಲ ದಿನದಂತೆ ಶುಕ್ರವಾರ ಕೂಡ 32 ತಂಡಗಳು ಕಣಕ್ಕಿಳಿಯಲಿವೆ. ಇದರಲ್ಲಿ ದೆಹಲಿ ಹಾಗೂ ಮುಂಬೈ ತಂಡಗಳು ಸೇರಿವೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದ್ವಿತೀಯ ಪಂದ್ಯದಲ್ಲೂ ಕಣಕ್ಕಿಳಿಯುವುದು ಬಹುತೇಕ ಖಚಿತ.

ವಿಜಯ ಹಝಾರೆ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ಗೆ ಮರಳಿದ್ದಾರೆ. ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದರೆ, ಜೈಪುರದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದ್ದರು. ವಿಶೇಷ ಎಂದರೆ ಈ ಇಬ್ಬರು ದಿಗ್ಗಜರು ಮೊದಲ ಮ್ಯಾಚ್ನಲ್ಲೇ ಶತಕ ಸಿಡಿಸಿದ್ದಾರೆ.
- ಆಂಧ್ರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 101 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 131 ರನ್ ಬಾರಿಸಿದ್ದಾರೆ.
- ಸಿಕ್ಕಿಂ ವಿರುದ್ಧದ ಮ್ಯಾಚ್ನಲ್ಲಿ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿದ ಹಿಟ್ಮ್ಯಾನ್ 9 ಭರ್ಜರಿ ಸಿಕ್ಸ್ ಹಾಗೂ 18 ಫೋರ್ಗಳೊಂದಿಗೆ 155 ರನ್ ಬಾರಿಸಿದ್ದಾರೆ.
ಅಂದರೆ 15 ವರ್ಷಗಳ ಬಳಿಕ ದೇಶೀಯ ಏಕದಿನ ಪಂದ್ಯವಾಡಿದ ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿಯೊಂಧಿಗೆ ಅಬ್ಬರಿಸಿದ್ದಾರೆ. ಮತ್ತೊಂದೆಡೆ 7 ವರ್ಷಗಳ ಬಳಿಕ ವಿಜಯ ಹಝಾರೆ ಪಂದ್ಯವಾಡಿದ ರೋಹಿತ್ ಶರ್ಮಾ ಕೂಡ ಶತಕದೊಂದಿಗೆ ಮಿಂಚಿದ್ದಾರೆ. ಈ ಅಬ್ಬರದೊಂದಿಗೆ ಇಬ್ಬರು ದಿಗ್ಗಜರು ತಮ್ಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
ಮತ್ತೆ ಕಣಕ್ಕಿಳಿಯುವುದು ಯಾವಾಗ?
ವಿಜಯ ಹಝಾರೆ ಟೂರ್ನಿಯ ಮೊದಲ ಮ್ಯಾಚ್ನಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಡಿಸೆಂಬರ್ 26 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಬಿಸಿಸಿಐ, ಟೀಮ್ ಇಂಡಿಯಾ ಆಟಗಾರರಿಗೆ ವಿಜಯ ಹಝಾರೆ ಟೂರ್ನಿಯಲ್ಲಿ ಕನಿಷ್ಠ 2 ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಶುಕ್ರವಾರ ನಡೆಯಲಿರುವ ದ್ವಿತೀಯ ಸುತ್ತಿನ ಪಂದ್ಯಗಳಲ್ಲೂ ರೋ-ಕೊ ಜೋಡಿ ಮತ್ತೆ ಕಣಕ್ಕಿಳಿಯಲಿದ್ದಾರೆ.
- ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಮುಂಬೈ ಮತ್ತು ಉತ್ತರಾಖಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯುವುದು ಖಚಿತ.
- ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ದೆಹಲಿ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಎರಡು ಮ್ಯಾಚ್ಗಳ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಜನವರಿ 11 ರಿಂದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿ ಶುರುವಾಗಲಿದ್ದು, ಅದಕ್ಕೂ ಮುನ್ನ ಸಂಪೂರ್ಣ ವಿಶ್ರಾಂತಿ ಪಡೆದು ಹಿಟ್ಮ್ಯಾನ್, ಕಿಂಗ್ ಕೊಹ್ಲಿ ಜೋಡಿ ಮತ್ತೆ ಅಭ್ಯಾಸಕ್ಕೆ ಮರಳುವ ಸಾಧ್ಯತೆಯಿದೆ.
