
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪ್ಲೇಆಫ್ ಪಂದ್ಯಗಳು ಇಂದಿನಿಂದ ಶುರುವಾಗಲಿದೆ. ಚಂಡೀಗಢ್ನ ಮುಲ್ಲನ್ಪುರ್ನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ, ಯಾರು ಫೈನಲ್ಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ. ಇನ್ನು ಸೋಲುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯವಾಡಬೇಕಾಗುತ್ತದೆ.
ಆದರೆ ಇಲ್ಲಿ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳಿಗೆ ಬಿಸಿಸಿಐ ಮೀಸಲು ದಿನದಾಟವನ್ನು ಘೋಷಿಸಿಲ್ಲ. ಹೀಗಾಗಿಯೇ ಇಂದಿನ ಪಂದ್ಯವು ಮಳೆಗೆ ಆಹುತಿಯಾದರೆ, ಯಾರು ಫೈನಲ್ಗೇರಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾದರೆ, ಅಂಕಗಳನ್ನು ಹಂಚಲಾಗುವುದಿಲ್ಲ. ಬದಲಾಗಿ ಲೀಗ್ ಹಂತದಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.
ಈ ಬಾರಿಯ ಐಪಿಎಲ್ನ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದು ಪಂಜಾಬ್ ಕಿಂಗ್ಸ್. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅಂದರೆ ಇಂದಿನ ಪಂದ್ಯವು ಮಳೆಯಿಂದಾಗಿ ರದ್ದಾದರೆ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ಫೈನಲ್ಗೆ ಅರ್ಹತೆ ಪಡೆಯಲಿದೆ.
ಐಪಿಎಲ್ ಪಂದ್ಯಗಳಿಗೆ ಮಳೆ ಭೀತಿ ಎದುರಾಗಿರುವ ಕಾರಣ ಬಿಸಿಸಿಐ ಹೆಚ್ಚುವರಿ 120 ನಿಮಿಷಗಳ ಕಾಲಾವಕಾಶವನ್ನು ನೀಡಿದೆ. ಅಂದರೆ ಮಳೆಯ ನಡುವೆ ಪಂದ್ಯವನ್ನು ಆಯೋಜಿಸಲು 2 ಗಂಟೆಗಳ ಕಾಲ ಹೆಚ್ಚುವರಿ ಸಮಯ ತೆಗೆದುಕೊಳ್ಳಲಿದ್ದಾರೆ. ಇದರಿಂದಾಗಿ 9.30 ರವರೆಗೆ ಪಂದ್ಯ ಆರಂಭವಾಗದಿದ್ದರೂ ಯಾವುದೇ ಓವರ್ ಕಡಿತ ಇರುವುದಿಲ್ಲ. ಅಲ್ಲದೆ ಹೆಚ್ಚುವರಿ 120 ನಿಮಿಷಗಳ ಮೂಲಕ ಸಂಪೂರ್ಣ ಪಂದ್ಯವನ್ನು ಆಯೋಜಿಸಲಿದ್ದಾರೆ. ಅಂದರೆ 11.30 ಕ್ಕೆ ಮುಗಿಯುವ ಪಂದ್ಯವು 1.30 ರವರೆಗೆ ಆಯೋಜಿಸಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಮ್ಯಾಚ್ಗೆ ಮೀಸಲು ದಿನದಾಟವನ್ನು ನೀಡಲಾಗುತ್ತದೆ. ಅಂದರೆ ಜೂನ್ 3 ರಂದು ಪಂದ್ಯ ನಡೆಯದಿದ್ದರೆ, ಜೂನ್ 4 ರಂದು ಮತ್ತೆ ಅಂತಿಮ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: IPL 2025: ಪ್ಲೇಆಫ್ ಪಂದ್ಯಗಳಿಂದ 8 ಆಟಗಾರರು ಔಟ್
ಒಂದು ವೇಳೆ ಜೂನ್ 4 ರಂದು ಸಹ ಪಂದ್ಯವನ್ನು ಆಯೋಜಿಸುವಂತಹ ಪರಿಸ್ಥಿತಿ ಕಂಡು ಬರದಿದ್ದರೆ, ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಅಂದರೆ ಫೈನಲ್ಗೆ ಅರ್ಹತೆ ಪಡೆದ ಎರಡೂ ತಂಡಗಳನ್ನು ಚಾಂಪಿಯನ್ಸ್ ಎಂದು ಪರಿಗಣಿಸಲಾಗುತ್ತದೆ.
Published On - 10:32 am, Thu, 29 May 25