
2025 ರ ಐಪಿಎಲ್‌ನಲ್ಲಿ (IPL 2025) ರಾಜಸ್ಥಾನ್ ರಾಯಲ್ಸ್ (RR) ತಂಡದ ಕಳಪೆ ಪ್ರದರ್ಶನ ಮುಂದುವರೆದಿದ್ದು, ಸತತ ಎರಡನೇ ಪಂದ್ಯದಲ್ಲಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದೆ. ಇತ್ತ ರೋಚಕ ಹೋರಾಟ ನೀಡಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಜಸ್ಥಾನ್ ತಂಡವನ್ನು ಕೊನೆಯ ಓವರ್‌ನಲ್ಲಿ ಮಣಿಸಿ ಪಂದ್ಯವನ್ನು ಗೆದ್ದುಕೊಂಡಿತು. ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ 9 ರನ್ ಗಳಿಸಲು ವಿಫಲವಾಗಿದ್ದ ರಾಜಸ್ಥಾನ್, ಇದೀಗ ಲಕ್ನೋ ವಿರುದ್ಧವೂ ಕೊನೆಯ ಓವರ್‌ನಲ್ಲಿ 9 ರನ್ ಬಾರಿಸಲು ಸಾಧ್ಯವಾಗದೆ ಸೋಲಿಗೆ ಶರಣಾಯಿತು. ಲಕ್ನೋ ಪರ ಮಾಂತ್ರಿಕ ದಾಳಿ ಮಾಡಿದ ಆವೇಶ್ ಖಾನ್ ಪಂದ್ಯವನ್ನು ರಾಜಸ್ಥಾನ್ ಕೈನಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಐಡೆನ್ ಮಾರ್ಕ್ರಾಮ್ ಮತ್ತು ಆಯುಷ್ ಬಡೋನಿ ಅವರ ಅರ್ಧಶತಕದ ಸಹಾಯದಿಂದ 181 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಲಕ್ನೋ ತಂಡ ಕಳಪೆ ಆರಂಭ ಕಂಡಿತು. ಜೋಫ್ರಾ ಆರ್ಚರ್, 4 ರನ್ ಬಾರಿಸಿದ್ದ ಮಿಚೆಲ್ ಮಾರ್ಷ್ ಅವರ ವಿಕೆಟ್ ಪಡೆದರು. ಇದಾದ ನಂತರ ಸಂದೀಪ್ ಶರ್ಮಾ ನಿಕೋಲಸ್ ಪೂರನ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು. ನಾಯಕ ರಿಷಭ್ ಪಂತ್ ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ ಕೇವಲ ಮೂರು ರನ್ ಬಾರಿಸಲಷ್ಟೇ ಶಕ್ತರಾದರು.
ಇದಾದ ನಂತರ, ಐಡೆನ್ ಮಾರ್ಕ್ರಾಮ್ ಮತ್ತು ಆಯುಷ್ ಬದೋನಿ ನಾಲ್ಕನೇ ವಿಕೆಟ್‌ಗೆ 49 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟ ನಡೆಸಿದರು. ಈ ವೇಳೆ ಮಾರ್ಕ್ರಾಮ್ 45 ಎಸೆತಗಳಲ್ಲಿ 66 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಬದೋನಿ 34 ಎಸೆತಗಳಲ್ಲಿ 50 ರನ್‌ಗಳ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ, ಅಬ್ದುಲ್ ಸಮದ್ ಡೆತ್ ಓವರ್‌ಗಳಲ್ಲಿ ಕೇವಲ 10 ಎಸೆತಗಳಲ್ಲಿ 300 ಸ್ಟ್ರೈಕ್ ರೇಟ್‌ನಲ್ಲಿ 30 ರನ್ ಸಿಡಿಸಿದರು. ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಸಮದ್ ಒಟ್ಟು 27 ರನ್ ಚಚ್ಚಿದರು.
ಗುರಿ ಬೆನ್ನಟ್ಟಿದ ರಾಜಸ್ಥಾನ್ ಉತ್ತಮ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್ ಮತ್ತು 14 ವರ್ಷದ ವೈಭವ್ ಸೂರ್ಯವಂಶಿ ಮೊದಲ ವಿಕೆಟ್‌ಗೆ 85 ರನ್‌ಗಳ ಜೊತೆಯಾಟವನ್ನಾಡಿದರು. ಐಡೆನ್ ಮಾರ್ಕ್ರಾಮ್ ಈ ಜೊತೆಯಾಟ ಮುರಿದರು. ವೈಭವ್ 20 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 34 ರನ್ ಗಳಿಸಿ ಔಟಾದರು. ಇದಾದ ನಂತರ, ಶಾರ್ದೂಲ್ ಠಾಕೂರ್ ನಿತೀಶ್ ರಾಣಾಗೆ ಪೆವಿಲಿಯನ್ ದಾರಿ ತೋರಿಸಿದರು. ನಂತರ ಜೊತೆಯಾದ ಜೈಸ್ವಾಲ್ ಹಾಗೂ ರಿಯಾನ್ ಪರಾಗ್ ಮೂರನೇ ವಿಕೆಟ್‌ಗೆ 62 ರನ್ ಸೇರಿಸಿದರು.
IPL 2025: ಸಿಕ್ಸ್ ಬಾರಿಸುವ ಮೂಲಕವೇ ಐಪಿಎಲ್ ವೃತ್ತಿಜೀವನ ಆರಂಭಿಸಿದ 14 ವರ್ಷದ ವೈಭವ್; ವಿಡಿಯೋ
ಪಂದ್ಯಕ್ಕೆ ತಿರುವು ನೀಡಿದ 18ನೇ ಓವರ್‌ನ ಮೊದಲ ಎಸೆತದಲ್ಲಿ ಆವೇಶ್ ಖಾನ್ ಜೈಸ್ವಾಲ್ ಅವರನ್ನು ಬೌಲ್ಡ್ ಮಾಡಿದರು. ಜೈಸ್ವಾಲ್ 52 ಎಸೆತಗಳಲ್ಲಿ 74 ರನ್ ಗಳಿಸಿ ಔಟಾದರು. ಅದೇ ಓವರ್‌ನಲ್ಲಿ, ಆವೇಶ್ ರಿಯಾನ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು. ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ತಂಡಕ್ಕೆ ಗೆಲ್ಲಲು ಒಂಬತ್ತು ರನ್‌ಗಳು ಬೇಕಾಗಿದ್ದವು. ಆದರೆ ಆವೇಶ್ ಖಾನ್ ಶಿಮ್ರಾನ್ ಹೆಟ್ಮೆಯರ್ ಅವರನ್ನು ಔಟ್ ಮಾಡುವ ಮೂಲಕ ಆ ಭರವಸೆಯನ್ನು ಮುರಿದರು. ಧ್ರುವ್ ಜುರೆಲ್ ಮತ್ತು ಶುಭಂ ದುಬೆ ಕ್ರಮವಾಗಿ ಆರು ಮತ್ತು ಮೂರು ರನ್ ಗಳಿಸಿ ಅಜೇಯರಾಗಿ ಉಳಿದರು. ಲಕ್ನೋ ಪರ ಆವೇಶ್ ಮೂರು ವಿಕೆಟ್ ಪಡೆದರೆ, ಶಾರ್ದೂಲ್ ಮತ್ತು ಮರ್ಕ್ರಮ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 pm, Sat, 19 April 25