IPL 2025: ಡೆಲ್ಲಿ ವಿರುದ್ಧ ಬೃಹತ್ ಮೊತ್ತ ಬೆನ್ನಟ್ಟಿ ದಾಖಲೆಯ ಗೆಲುವು ಸಾಧಿಸಿದ ಗುಜರಾತ್
Gujarat Titans vs Delhi Capitals Result: 2025ರ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋಲಿಸಿತು. ಡೆಲ್ಲಿ ನೀಡಿದ 204 ರನ್‌ಗಳ ಬೃಹತ್ ಗುರಿಯನ್ನು ಗುಜರಾತ್ ಕೊನೆಯ ಓವರ್‌ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು. ಜೋಸ್ ಬಟ್ಲರ್ ಅವರ 97 ರನ್ ಮತ್ತು ಪ್ರಸಿದ್ಧ್ ಕೃಷ್ಣ ಅವರ 4 ವಿಕೆಟ್‌ಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ಗುಜರಾತ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆ ಬರೆದಿದೆ.

2025 ರ ಐಪಿಎಲ್ (IPL 2025)ನಲ್ಲಿ ಇಂದು ನಡೆದ ಟೇಬಲ್ ಟಾಪರ್ಸ್ಗಳಾದ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (GT vs DC) ನಡುವಿನ ಪಂದ್ಯದಲ್ಲಿ ಆತಿಥೇಯ ಗುಜರಾತ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ, ಶುಭ್ಮನ್ ಗಿಲ್ ನಾಯಕತ್ವದ ತಂಡವು ಸೀಸನ್‌ನಲ್ಲಿ ತನ್ನ 5 ನೇ ಗೆಲುವು ದಾಖಲಿಸಿತು. ಡೆಲ್ಲಿ ನೀಡಿದ 204 ರನ್‌ಗಳ ಬೃಹತ್ ಗುರಿಯನ್ನು ಗುಜರಾತ್ ಕೊನೆಯ ಓವರ್‌ನಲ್ಲಿ ಸಾಧಿಸಿತು. ಗುಜರಾತ್ ತಂಡದ ಈ ಗೆಲುವಿನಲ್ಲಿ ಜೋಸ್ ಬಟ್ಲರ್ ಮತ್ತು ಪ್ರಸಿದ್ಧ್ ಕೃಷ್ಣ ಪ್ರಮುಖ ಪಾತ್ರವಹಿಸಿದರು. ಬ್ಯಾಟಿಂಗ್ನಲ್ಲಿ ಬಟ್ಲರ್ 97 ರನ್ ಗಳಿಸಿದರೆ, ಪ್ರಸಿದ್ಧ್ 4 ವಿಕೆಟ್ ಪಡೆದರು. ಈ ಮೂಲಕ ಗುಜರಾತ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವನ್ನು ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು. ಈ ಮೊದಲು ಗುಜರಾತ್, ಆರ್ಸಿಬಿ ವಿರುದ್ಧ 198 ರನ್‌ಗಳ ಗುರಿ ಬೆನ್ನಟ್ಟಿ ಗೆದ್ದಿತ್ತು.
203 ರನ್‌ಗಳ ಟಾರ್ಗೆಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 203 ರನ್ ಗಳಿಸಿತು. ಡೆಲ್ಲಿ ಪರ ನಾಯಕ ಅಕ್ಷರ್ ಪಟೇಲ್ ಅತಿ ಹೆಚ್ಚು 39 ರನ್ ಗಳಿಸಿದರು. ಆದಾಗ್ಯೂ, ಕೊನೆಯಲ್ಲಿ, ಅಶುತೋಷ್ ಶರ್ಮಾ 19 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 37 ರನ್ ಬಾರಿಸಿದ್ದರಿಂದಾಗಿ ತಂಡವು 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ತಂಡ ಆರಂಭದಲ್ಲಿಯೇ ಪೊರೆಲ್ ಮತ್ತು ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. 10 ವರ್ಷಗಳ ನಂತರ ಐಪಿಎಲ್‌ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದ ರಾಹುಲ್ 28 ರನ್ ಗಳಿಸಿ ಔಟಾದರು.
ಕನ್ನಡಿಗ ಪ್ರಸಿದ್ಧ ಮ್ಯಾಜಿಕ್
ಇದಾದ ನಂತರ, ಕರುಣ್ ನಾಯರ್ ಕೂಡ 18 ಎಸೆತಗಳಲ್ಲಿ 31 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ನಾಯಕ ಅಕ್ಷರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್ ಜೊತೆ ನಾಲ್ಕನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ ಸಿರಾಜ್ ಸ್ಟಬ್ಸ್ ಅವರನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. 21 ಎಸೆತಗಳಲ್ಲಿ 31 ರನ್ ಗಳಿಸಿದ ನಂತರ ಸ್ಟಬ್ಸ್ ಪೆವಿಲಿಯನ್‌ಗೆ ಮರಳಿದರು. ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ ಎರಡು ರನ್ ಮತ್ತು ಕುಲ್ದೀಪ್ ಯಾದವ್ ನಾಲ್ಕು ರನ್ ಗಳಿಸಿ ಅಜೇಯರಾಗುಳಿದರು. ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ಓವರ್‌ಗಳಲ್ಲಿ 41 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿದರು.
ಗುಜರಾತ್ಗೆ ಆರಂಭಿಕ ಆಘಾತ
203 ರನ್ ಗುರಿ ಬೆನ್ನಟ್ಟಿದ ಗುಜರಾತ್ ತಂಡ ನಾಯಕ ಶುಭ್ಮನ್ ಗಿಲ್ ಅವರನ್ನು ಬೇಗನೆ ಕಳೆದುಕೊಂಡ ಕಾರಣ ಉತ್ತಮ ಆರಂಭ ಸಿಗಲಿಲ್ಲ. ಗಿಲ್ ಏಳು ರನ್ ಗಳಿಸಿ ರನೌಟ್ ಆದರು. ಇದಾದ ನಂತರ ಸಾಯಿ ಸುದರ್ಶನ್ ಮತ್ತು ಬಟ್ಲರ್ ಎರಡನೇ ವಿಕೆಟ್‌ಗೆ 60 ರನ್ ಸೇರಿಸಿದರು. ಸುದರ್ಶನ್ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಆದರೆ 21 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 36 ರನ್ ಗಳಿಸಿ ಔಟಾದರು. ನಂತರ ಬಟ್ಲರ್ ಮತ್ತು ರುದರ್ಫೋರ್ಡ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಮೂರನೇ ವಿಕೆಟ್‌ಗೆ 119 ರನ್ ಸೇರಿಸಿದರು.
VIDEO: ಶರ್ಮಾ vs ಶರ್ಮಾ; ಯುವ ಕ್ರಿಕೆಟಿಗನ ಮೇಲೆ ಇಶಾಂತ್ ದರ್ಪ
ಬಟ್ಲರ್ ಶತಕ ವಂಚಿತ
ರುದರ್ಫೋರ್ಡ್ 34 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 43 ರನ್ ಗಳಿಸಿ ಔಟಾದರು. ಹೀಗಾಗಿ ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲ್ಲಲು 10 ರನ್‌ಗಳು ಬೇಕಾಗಿದ್ದವು. ಈ ವೇಳೆಗೆ ಕ್ರೀಸ್ಗೆ ಬಂದ ತೆವಾಟಿಯಾ, ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲಿ ಸಿಕ್ಸರ್ ಮತ್ತು ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಕೊನೆಗೊಳಿಸಿದರು. ತೆವಾಟಿಯಾ 3 ಎಸೆತಗಳಲ್ಲಿ 11 ರನ್ ಗಳಿಸಿ ಅಜೇಯರಾಗುಳಿದರೆ, ಬಟ್ಲರ್ 54 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಅಜೇಯ 97 ರನ್ ಗಳಿಸಿದರು. ದೆಹಲಿ ಪರ ಕುಲ್ದೀಪ್ ಯಾದವ್ ಮತ್ತು ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Sat, 19 April 25