
ಒಂದು ಗೆಲುವು.. ತವರಿನಲ್ಲಿ ಒಂದು ಗೆಲುವಿಗಾಗಿ ಕಾದು ಕುಳಿತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಐಪಿಎಲ್ 2025 ರ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಿದ್ದ ಆರ್ಸಿಬಿ ಕೊನೆಗೂ ತನ್ನ ತವರು ಮೈದಾನದಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಈ ಸೀಸನ್ನಲ್ಲಿ 3 ತವರು ಪಂದ್ಯಗಳನ್ನು ಆಡಿದ್ದ ಆರ್ಸಿಬಿ ಮೂರೂ ಪಂದ್ಯಗಳನ್ನು ಸೋತಿತ್ತು. ಆದರೆ ರಾಜಸ್ಥಾನ್ ವಿರುದ್ಧ ಸಾಂಘಿಕ ಹೋರಾಟ ನೀಡಿದ ಆರ್ಸಿಬಿ ತವರಿನಲ್ಲಿ ಆಡಿದ 4ನೇ ಪಂದ್ಯದಲ್ಲಿ 11 ರನ್‌ಗಳ ರೋಚಕ ಜಯ ಸಾಧಿಸಿತು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸೀಸನ್ನ ನಾಲ್ಕನೇ ಪಂದ್ಯ ಇದಾಗಿತ್ತು. ಕಳೆದ ಮೂರು ಪಂದ್ಯಗಳಂತೆ, ಮತ್ತೊಮ್ಮೆ ಆತಿಥೇಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಟಿದಾರ್ ನಾಲ್ಕನೇ ಬಾರಿಗೆ ಟಾಸ್ ಸೋತರು. ಹೀಗಾಗಿ ಸತತ ನಾಲ್ಕನೇ ಬಾರಿಗೆ ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ಚಿನ್ನಸ್ವಾಮಿಯಲ್ಲಿ ನಡೆದ ಕಳೆದ 3 ಪಂದ್ಯಗಳಿಗಿಂತ ಭಿನ್ನವಾಗಿ, ಈ ಬಾರಿ ಆರ್ಸಿಬಿ ಉತ್ತಮ ಆರಂಭವನ್ನು ಪಡೆಯಿತು.
ಆರಂಭಿಕ ಜೋಡಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ 6.4 ಓವರ್‌ಗಳಲ್ಲಿ 61 ರನ್‌ಗಳ ಉತ್ತಮ ಆರಂಭವನ್ನು ನೀಡಿದರು. ಇದಾದ ನಂತರ, ಕೊಹ್ಲಿ ಮತ್ತು ದೇವದತ್ ಪಡಿಕಲ್ ಮತ್ತೊಮ್ಮೆ ರಾಜಸ್ಥಾನ ವಿರುದ್ಧದ ಅದ್ಭುತ ಜೊತೆಯಾಟವನ್ನಾಡಿ ಎರಡನೇ ವಿಕೆಟ್‌ಗೆ ಕೇವಲ 51 ಎಸೆತಗಳಲ್ಲಿ 95 ರನ್ ಸೇರಿಸಿದರು. ಈ ವೇಳೆ ಕೊಹ್ಲಿ ಈ ಆವೃತ್ತಿಯ ಐದನೇ ಅರ್ಧಶತಕವನ್ನು ಪೂರೈಸಿದರೆ, ಪಡಿಕಲ್ ಸತತ ಎರಡನೇ ಅರ್ಧಶತಕವನ್ನು ದಾಖಲಿಸಿದರು. ಇದಾದ ನಂತರ, ಟಿಮ್ ಡೇವಿಡ್ ಮತ್ತು ಜಿತೇಶ್ ಶರ್ಮಾ ಕೇವಲ 19 ಎಸೆತಗಳಲ್ಲಿ 42 ರನ್‌ಗಳ ತ್ವರಿತ ಪಾಲುದಾರಿಕೆಯನ್ನು ಮಾಡಿ ತಂಡವನ್ನು 205 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಸ್ಫೋಟಕ ಆರಂಭ ನೀಡಿದರು. ಜೈಸ್ವಾಲ್, ವೈಭವ್ ಸೂರ್ಯವಂಶಿ ಜೊತೆಗೂಡಿ, ಕೇವಲ 5 ನೇ ಓವರ್‌ನಲ್ಲಿ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು. ನಂತರ ನಿತೀಶ್ ರಾಣಾ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿದರು. ಹೀಗಾಗಿ ಪವರ್‌ಪ್ಲೇನಲ್ಲಿಯೇ ರಾಜಸ್ಥಾನ್ 72 ರನ್ ಗಳಿಸಿತು. ಆದರೆ ಅದೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಜೈಸ್ವಾಲ್ ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್ಗೆ ಆಘಾತ ನೀಡಿದರು. ಆದರೆ ನಿತೀಶ್ ಮತ್ತು ನಾಯಕ ರಿಯಾನ್ ಪರಾಗ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ತಂಡವನ್ನು 9 ನೇ ಓವರ್ ವೇಳೆಗೆ 110 ರನ್‌ಗಳ ಗಡಿ ದಾಟಿಸಿದರು.
ಈ ಹಂತದಲ್ಲಿ ದಾಳಿಗಿಳಿದ ಕೃನಾಲ್ ಪಾಂಡ್ಯ 10 ನೇ ಓವರ್‌ನಲ್ಲಿ ರಿಯಾನ್ ಪರಾಗ್ ಅವರ ವಿಕೆಟ್ ಪಡೆದರು. ನಂತರ ತಮ್ಮ ಮೂರನೇ ಓವರ್‌ನಲ್ಲೂ ಕೃನಾಲ್, ನಿತೀಶ್ ಅವರನ್ನು ಔಟ್ ಮಾಡಿದರು. ಇದರ ನಂತರ, ಕಳೆದ 2 ಪಂದ್ಯಗಳಲ್ಲಿ ಸೋಲಿನ ಖಳನಾಯಕರೆನಿಸಿಕೊಂಡಿದ್ದ ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಮೇಲೆ ಜವಾಬ್ದಾರಿ ಬಿತ್ತು. ಇಬ್ಬರ ನಡುವಿನ ಪಾಲುದಾರಿಕೆ ಬೆಳೆಯುತ್ತಿರುವಂತೆ ತೋರುತ್ತಿತ್ತು ಆದರೆ 17 ನೇ ಓವರ್‌ನಲ್ಲಿ ಹ್ಯಾಜಲ್‌ವುಡ್ ಹೆಟ್ಮೆಯರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ನಂತರ 18 ನೇ ಓವರ್ ಎಸೆದ ಭುವನೇಶ್ವರ ಕುಮಾರ್ ಅವರ ಓವರ್‌ನಲ್ಲಿ ಜುರೆಲ್ 22 ರನ್ ಗಳಿಸುವ ಮೂಲಕ ತಂಡವನ್ನು ಮತ್ತೆ ಗೆಲುವಿನ ಲಯಕ್ಕೆ ಮರಳಿ ತಂದರು. ಆದರೆ ಪಂದ್ಯದ ಭವಿಷ್ಯ 19ನೇ ಓವರ್‌ನಲ್ಲಿ ನಿರ್ಧರಿಸಲ್ಪಟ್ಟಿತು. ಆಸ್ಟ್ರೇಲಿಯಾದ ಅನುಭವಿ ವೇಗಿ ಮೊದಲು ಜುರೆಲ್ ಮತ್ತು ನಂತರ ಜೋಫ್ರಾ ಆರ್ಚರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಕೇವಲ 1 ರನ್ ನೀಡಿದರು. ಹೀಗಾಗಿ 20 ನೇ ಓವರ್‌ನಲ್ಲಿ ರಾಜಸ್ಥಾನ್ ಗೆಲುವಿಗೆ 17 ರನ್ ಬೇಕಾಗಿದ್ದವು. ಈ ವೇಳೆ ದಾಳಿಗಿಳಿದ ಯಶ್ ದಯಾಳ್ ರಾಜಸ್ಥಾನವನ್ನು 194 ಕ್ಕೆ ಸೀಮಿತಗೊಳಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:38 pm, Thu, 24 April 25