ರಿಷಭ್ ಪಂತ್ ಸೇರಿ 3 ಸ್ಟಾರ್ ಆಟಗಾರರಿಗೆ ಸಂಜೀವ್ ಗೋಯೆಂಕಾ ಕೋಕ್?
ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೊನೆಯ ಸ್ಥಾನಕ್ಕೆ ಕುಸಿದಿದ್ದು ತೀವ್ರ ನಿರಾಸೆ ಮೂಡಿಸಿದೆ. ಕೇವಲ 4 ಪಂದ್ಯಗಳಲ್ಲಿ ಜಯಗಳಿಸಿ, 10ರಲ್ಲಿ ಸೋತ ತಂಡ, 2027ರ ಹರಾಜಿಗೂ ಮುನ್ನ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ರಿಷಭ್ ಪಂತ್ ಸೇರಿ ಮೂವರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಐಪಿಎಲ್ 2026ರ ಸೀಸನ್ ಲಕ್ನೋ ಸೂಪರ್ ಜೈಂಟ್ಸ್ (LSG) ಪಾಲಿಗೆ ಸಂಪೂರ್ಣ ನಿರಾಸೆ ಮೂಡಿಸಿದೆ. ಟೂರ್ನಿಯುದ್ದಕ್ಕೂ ತಡಕಾಡಿದ ಲಕ್ನೋ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು. ಇಡೀ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಮಾತ್ರ ಜಯಗಳಿಸಿದರೆ, ಬರೋಬ್ಬರಿ 10 ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತು. ಆರಂಭದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದರೂ, ಆ ನಂತರ ಸತತ 6 ಪಂದ್ಯಗಳಲ್ಲಿ ಸೋತಿದ್ದು ತಂಡದ ಪತನಕ್ಕೆ ಕಾರಣವಾಯಿತು. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ತಂಡದ ಮ್ಯಾನೇಜ್‌ಮೆಂಟ್ ಮುಂದಿನ ಸೀಸನ್‌ಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದು, ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಮೂವರು ಪ್ರಮುಖ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆ ಮೂವರು ಆಟಗಾರರ ವಿವರ ಇಲ್ಲಿದೆ:
ರಿಷಭ್ ಪಂತ್
ಲಕ್ನೋ ತಂಡದ ನಾಯಕ ರಿಷಭ್ ಪಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಿ, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಮರಳಿ ಖರೀದಿಸಲು ಫ್ರಾಂಚೈಸಿ ಯೋಚಿಸುತ್ತಿದೆ. ಲಕ್ನೋ ತಂಡ ಸೇರಿದಾಗಿನಿಂದ ಪಂತ್ ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. 2025ರ ಸೀಸನ್‌ನಲ್ಲಿ 13 ಇನ್ನಿಂಗ್ಸ್‌ಗಳಿಂದ ಕೇವಲ 269 ರನ್ ಗಳಿಸಿದ್ದ ಪಂತ್, ತಂಡ ಟೂರ್ನಿಯಿಂದ ಹೊರಬಿದ್ದ ನಂತರವಷ್ಟೇ ಶತಕ ಬಾರಿಸಿದ್ದರು.
2026ರ ಸೀಸನ್‌ನಲ್ಲೂ ಇವರ ಫಾರ್ಮ್ ಸುಧಾರಿಸಲಿಲ್ಲ. ಇಡೀ ಟೂರ್ನಿಯಲ್ಲಿ ಗಳಿಸಿದ್ದು ಕೇವಲ 312 ರನ್ ಮಾತ್ರ. ಐಪಿಎಲ್‌ನಲ್ಲಿನ ಈ ಕಳಪೆ ಪ್ರದರ್ಶನದಿಂದಾಗಿ ಪಂತ್ ಭಾರತ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಲ್ಲದೆ, ಟೆಸ್ಟ್ ತಂಡದ ಉಪನಾಯಕತ್ವವನ್ನೂ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಇವರನ್ನು ನಾಯಕತ್ವದಿಂದ ಕೆಳಗಿಳಿಸಿ ಬಿಡುಗಡೆ ಮಾಡಲು ಲಕ್ನೋ ಚಿಂತಿಸುತ್ತಿದೆ.
ನಿಕೋಲಸ್ ಪೂರನ್
2025ರ ಮೆಗಾ ಹರಾಜಿಗೂ ಮುನ್ನ ಲಕ್ನೋ ಫ್ರಾಂಚೈಸಿ ಬರೋಬ್ಬರಿ 21 ಕೋಟಿ ರೂಪಾಯಿ ನೀಡಿ ನಿಕೋಲಸ್ ಪೂರನ್ ಅವರನ್ನು ರಿಟೇನ್ ಮಾಡಿಕೊಂಡಿತ್ತು. ಆದರೆ ಈ ವೆಸ್ಟ್‌ಇಂಡೀಸ್ ಆಟಗಾರನ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ. ಲಕ್ನೋ ತಂಡದ ಉಪನಾಯಕನೂ ಆಗಿರುವ ಪೂರನ್, 2026ರ ಸೀಸನ್‌ನಲ್ಲಿ ಆಡಿದ 14 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 234 ರನ್‌ಗಳನ್ನು ಮಾತ್ರ. ಮಧ್ಯಮ ಕ್ರಮಾಂಕದಲ್ಲಿ ಪೂರನ್ ಸತತವಾಗಿ ಫ್ಲಾಪ್ ಆಗಿದ್ದು ಕೂಡ ಲಕ್ನೋ ತಂಡ ಕೊನೆಯ ಸ್ಥಾನಕ್ಕೆ ಕುಸಿಯಲು ಪ್ರಮುಖ ಕಾರಣವಾಯಿತು.
ಇದನ್ನೂ ಓದಿ: ರಿಷಭ್ ಪಂತ್ಗೆ ಗೇಟ್ ಪಾಸ್? ಟಾಮ್ ಮೂಡಿ ಬಿಚ್ಚಿಟ್ಟ ಸತ್ಯ!
ಮಯಾಂಕ್ ಯಾದವ್
ಭಾರತದ ಯುವ ವೇಗಿ ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂಪಾಯಿ ನೀಡಿ ಲಕ್ನೋ ತಂಡ ಉಳಿಸಿಕೊಂಡಿತ್ತು. ಆದರೆ ಇವರ ಫಿಟ್‌ನೆಸ್ ಸಮಸ್ಯೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. 2025ರ ಐಪಿಎಲ್‌ನಲ್ಲಿ ಕೇವಲ ಎರಡು ಪಂದ್ಯಗಳನ್ನಾಡಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದ ಮಯಾಂಕ್, 2026ರ ಸೀಸನ್‌ನಲ್ಲಿ ಕಂಬ್ಯಾಕ್ ಮಾಡಿದರೂ ಕೇವಲ 4 ಪಂದ್ಯಗಳನ್ನಷ್ಟೇ ಆಡಲು ಸಾಧ್ಯವಾಯಿತು. ಅಷ್ಟೇ ಅಲ್ಲದೆ, ಬೌಲ್ ಮಾಡಿದ 16 ಓವರ್‌ಗಳಲ್ಲಿ ಒಂದೂ ವಿಕೆಟ್ ಪಡೆಯಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಷ್ಟೊಂದು ಭಾರಿ ಮೊತ್ತ ನೀಡಿ ಇವರನ್ನು ತಂಡದಲ್ಲಿ ಇಟ್ಟುಕೊಳ್ಳುವ ಬದಲು, ರಿಲೀಸ್ ಮಾಡಿ ನಂತರ ಕಡಿಮೆ ಬೆಲೆಗೆ ಆರ್ಟಿಎಂ ಮೂಲಕ ಖರೀದಿಸುವುದು ಲಕ್ನೋ ಪ್ಲಾನ್ ಆಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:09 am, Thu, 28 May 26





