
ಐಪಿಎಲ್ 2026 (IPL 2026) ರ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ತಂಡಗಳು ಮುಖಾಮುಖಿಯಾಗಲಿವೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಅದರಲ್ಲೂ ಆರ್ಸಿಬಿಗೆ ಹೋಲಿಸಿದರೆ, ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರಷ್ಟೇ ಕೆಕೆಆರ್‌ಗೆ ಪ್ಲೇಆಫ್ ಕನಸು ಜೀವಂತ, ಇಲ್ಲದಿದ್ದರೆ ಅದು ಕೂಡ ಲೀಗ್ ಹಂತದಲ್ಲೇ ಹೊರಬೀಳಲಿದೆ. ಹೀಗಾಗಿ ರಹಾನೆ ಪಡೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇತ್ತ ಆರ್‌ಸಿಬಿ, ಲೀಗ್ ಆರಂಭಕ್ಕೂ ಮುನ್ನ ಕೆಕೆಆರ್ ಫ್ರಾಂಚೈಸಿ ಮಾಡಿದ್ದ ಅವಮಾನಕ್ಕೆ ತಕ್ಕ ತಿರುಗೇಟು ನೀಡಲು ತಯಾರಾಗಿದೆ.
ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ಫ್ರಾಂಚೈಸಿ ತನ್ನ ತಂಡದ ನೂತನ ಜೆರ್ಸಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿತ್ತು. 1:38 ನಿಮಿಷಗಳ ವಿಡಿಯೋದಲ್ಲಿ ಕೆಕೆಆರ್ ತನ್ನ ಕೆಲವು ಐತಿಹಾಸಿಕ ಸಾಧನೆಗಳನ್ನು ನೆನಪು ಮಾಡಲು ಪ್ರಯತ್ನಿಸಿತ್ತು. ಇದರಲ್ಲಿ ಹೆಚ್ಚಿನದಾಗಿ ಆರ್‌ಸಿಬಿ ವಿರುದ್ಧ ಕೆಕೆಆರ್ ತಂಡದ ಪಾರುಪತ್ಯ ಹೇಗಿತ್ತು ಎಂಬುದನ್ನು ಹೇಳುವುದರ ಜೊತೆಗೆ ಉದ್ದೇಶಪೂರ್ವಕವಾಗಿಯೇ ಆರ್ಸಿಬಿಯನ್ನು ಅಣಕಿಸುವ ಕೆಲಸ ಮಾಡಿತ್ತು.
ಕೆಕೆಆರ್ ಫ್ರಾಂಚೈಸಿ ಬಿಡುಗಡೆ ಮಾಡಿದ್ದ ಆ ವಿಡಿಯೋದಲ್ಲಿ ಮೊದಲಿಗೆ ಟ್ರಾಫಿಕ್ ಸಿಗ್ನಲ್ ತೋರಿಸಲಾಗಿದ್ದು, ಆ ಸಿಗ್ನಲ್ನ ಒಂದು ದೀಪದಲ್ಲಿ 49 ಎಂದು ಬರೆಯಲಾಗಿತ್ತು. ಸಾಮಾನ್ಯವಾಗಿ ಇದು 49 ಸೆಕೆಂಡುಗಳನ್ನು ಅರ್ಥೈಸುತ್ತದೆಯಾದರೂ, ಇಲ್ಲಿ ತನ್ನ ಬುದ್ಧಿ ಬಳಸಿರುವ ಕೆಕೆಆರ್, ಹಾಲಿ ಚಾಂಪಿಯನ್ ಬೆಂಗಳೂರು ತಂಡವನ್ನು 49 ರನ್ಗಳಿಗೆ ಆಲೌಟ್ ಮಾಡಿದ್ದನ್ನು ನೆನಪಿಸುವ ಕೆಲಸ ಮಾಡಿತ್ತು.
ವಾಸ್ತವವಾಗಿ, 2017 ರ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 131 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಕೇವಲ 49 ರನ್ಗಳಿಗೆ ಆಲೌಟ್ ಆಗಿ, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಮೊದಲ ತಂಡವೆಂಬ ಮುಜುಗರದ ದಾಖಲೆಗೆ ಕೊರಳೊಡ್ಡಿತ್ತು.
ಇದಾದ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ 158ನೇ ಟೇಕ್ ಎಂಬುದನ್ನು ಬಳಸಿರುವ ಕೆಕೆಆರ್ ಮತ್ತೆ ಆರ್ಸಿಬಿಯನ್ನು ಅಣಕಿಸುವ ಕೆಲಸ ಮಾಡಿತ್ತು. ಐಪಿಎಲ್ ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಪರ ಆಡಿದ್ದ ಬ್ರೆಂಡನ್ ಮೆಕಲಮ್ ಬರೋಬ್ಬರಿ 158 ರನ್ಗಳ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲೂ ಆರ್‌ಸಿಬಿ ಹೀನಾಯವಾಗಿ ಸೋತಿತ್ತು.
IPL 2026: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ? ಎದುರಾಳಿ ಯಾರು?
ಅದೇ ರೀತಿ, ಒಂದು ಸ್ಥಳದಲ್ಲಿ, 105/0 6 ಓವರ್‌ಗಳು ಎಂದು ಬರೆಯಲಾಗಿತ್ತು. ಇದು 2017 ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದ ಪವರ್‌ಪ್ಲೇನಲ್ಲಿ ಕೆಕೆಆರ್ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಈ ಎಲ್ಲಾ ಹಳೆಯ ಘಟನೆಗಳನ್ನು ನೆನಪಿಸುತ್ತಾ ಆರ್ಸಿಬಿಯನ್ನು ಜರಿಯುವ ಕೆಲಸವನ್ನು ಕೆಕೆಆರ್ ಮಾಡಿತ್ತು. ಇದೀಗ ಆರ್‌ಸಿಬಿ, ಕೆಕೆಆರ್‌ಗೆ ಸರಿಯಾದ ಪಾಠ ಕಲಿಸಲು ಸಜ್ಜಾಗಿದೆ. ಇತ್ತ ಅಭಿಮಾನಿಗಳು ಕೂಡ ಆರ್‌ಸಿಬಿ, ಕೆಕೆಆರ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ನೋಡಲು ಕಾದು ಕುಳಿತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Mon, 11 May 26