
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ಮಿನಿ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬರುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಸ್ಯಾಮ್ಸನ್, ತನ್ನನ್ನು ಟ್ರೇಡ್ ಮಾಡಿಕೊಳ್ಳಲು ಅಥವಾ ರಿಲೀಸ್ ಮಾಡಲು ಆರ್ಆರ್ ಫ್ರಾಂಚೈಸಿಗೆ ತಿಳಿಸಿದ್ದಾರೆ. ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಇನ್ನೂ ಯಾವುದೇ ದೃಢ ನಿರ್ಧಾರ ತೆಗೆದುಕೊಂಡಿಲ್ಲ. ಅತ್ತ ಕಳೆದ ಕೆಲ ವರ್ಷಗಳಿಂದ ಆರ್ಆರ್ ತಂಡದಲ್ಲಿದ್ದರೂ ಇದೀಗ ದಿಢೀರ್ ಸ್ಯಾಮ್ಸನ್ ಹೊರಬರಲು ಕಾರಣವೇನು? ಎಂಬ ಪ್ರಶ್ನೆ ಮೂಡುವುದು ಸಹಜ.
ಈ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಎಸ್. ಬದ್ರಿನಾಥ್ ಉತ್ತರ ನೀಡಿದ್ದಾರೆ. ಬದ್ರಿನಾಥ್ ಅವರ ಪ್ರಕಾರ, ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಲು ಮುಖ್ಯ ಕಾರಣ ರಿಯಾನ್ ಪರಾಗ್. ಈ ಬಗ್ಗೆ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಎಸ್ ಬದ್ರಿನಾಥ್, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕಳೆದ ಸೀಸನ್ನಲ್ಲಿ ತೆಗೆದುಕೊಂಡ ನಿರ್ಧಾರದಿಂದ ಸ್ಯಾಮ್ಸನ್ ಬೇಸರಗೊಂಡಿರುವ ಸಾಧ್ಯತೆಯಿದೆ.
ಏಕೆಂದರೆ ಕಳೆದ ಸೀಸನ್ನಲ್ಲಿ ಸಂಜು ಸ್ಯಾಮ್ಸನ್ ಅವರ ಬದಲಿಗೆ ರಿಯಾನ್ ಪರಾಗ್ ಕೆಲ ಮ್ಯಾಚ್ಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಸಾಧಾರಣ ಆಟಗಾರನಿಗೆ ನಾಯಕತ್ವ ನೀಡಿದರೆ, ಸ್ಯಾಮ್ಸನ್‌ನಂತಹ ಆಟಗಾರರು ತಂಡದಲ್ಲಿ ಹೇಗೆ ಉಳಿಯಲು ಸಾಧ್ಯ?. ಇದೇ ಕಾರಣದಿಂದಾಗಿ ಸಂಜು ಸ್ಯಾಮ್ಸನ್ ಆರ್ಆರ್ ತಂಡವನ್ನು ತೊರೆಯಲು ನಿರ್ಧರಿಸಿರುವ ಸಾಧ್ಯತೆಯಿದೆ ಎಂದು ಎಸ್. ಬದ್ರಿನಾಥ್ ಹೇಳಿದ್ದಾರೆ.
ಕಳೆದ ಸೀಸನ್ನ ಆರಂಭದಲ್ಲಿ ಸಂಜು ಸ್ಯಾಮ್ಸನ್ ಸಂಪೂರ್ಣ ಫಿಟ್ ಆಗಿರಲಿಲ್ಲ. ಹೀಗಾಗಿ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಿದ್ದರು. ಅತ್ತ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅನೇಕ ಅನುಭವಿ ಆಟಗಾರರಿದ್ದರೂ ಪರಾಗ್ಗೆ ಕ್ಯಾಪ್ಟನ್ ಪಟ್ಟ ನೀಡಿದ್ದು ಚರ್ಚೆಗೆ ಕಾರಣವಾಗಿತ್ತು. ಇದರಿಂದ ತಂಡದಲ್ಲೂ ವೈಮನಸ್ಸು ಮೂಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ರನ್ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಡೇವಿಡ್ ವಾರ್ನರ್
ಇದೀಗ ಅದರ ಮುಂದುವರೆದ ಭಾಗವಾಗಿ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಯೊಂದು ಮಹತ್ವ ಪಡೆದುಕೊಂಡಿದೆ. ಇತ್ತ ಸ್ಯಾಮ್ಸನ್ ರಿಲೀಸ್ ಆಗುವ ಮುನ್ನವೇ ಟ್ರೇಡ್ ಮಾಡಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಆಸಕ್ತಿ ತೋರಿದೆ. ಹೀಗಾಗಿ ಐಪಿಎಲ್ 2026 ರಲ್ಲಿ ಸಂಜು ಸ್ಯಾಮ್ಸನ್ ಸಿಎಸ್ಕೆ ಪರ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.