IPL 2022: ಐಪಿಎಲ್ ಸೀಸನ್ 15 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 66 ಲೀಗ್ ಪಂದ್ಯಗಳು ಮುಗಿದಿದ್ದು, ಇನ್ನು ಕೆಲವೇ ಕೆಲವು ಪಂದ್ಯಗಳು ಮಾತ್ರ ಉಳಿದಿವೆ. ಈ ಪಂದ್ಯಗಳ ಬಳಿಕ ಪ್ಲೇಆಫ್ ಪಂದ್ಯಗಳು ಜರುಗಲಿದೆ. ಇದರೊಂದಿಗೆ ಐಪಿಎಲ್ನ ಮತ್ತೊಂದು ಸೀಸನ್ಗೆ ತೆರೆ ಬೀಳಲಿದೆ. ಆದರೆ ಇದಕ್ಕೂ ಮುನ್ನ ಐಪಿಎಲ್ನ ಮುಂದಿನ ಸೀಸನ್ನಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐ ಮುಂದಾಗಿದೆ. ಐಪಿಎಲ್ 2023 ಪಂದ್ಯಗಳ ಸಮಯವನ್ನು ಬದಲಾಯಿಸಲು ಬಿಸಿಸಿಐ ನಿರ್ಧರಿಸಿದೆ. ಕಳೆದ ಕೆಲ ಸೀಸನ್ಗಳಿಂದ ಐಪಿಎಲ್ ಪಂದ್ಯಗಳು ಸಂಜೆ 3.30 ಮತ್ತು ರಾತ್ರಿ 7.30 ರಿಂದ ಪ್ರಾರಂಭವಾಗುತ್ತಿದ್ದವು. ಆದರೆ ಮುಂದಿನ ಸೀಸನ್ನಲ್ಲಿ ಅರ್ಧ ಗಂಟೆ ತಡವಾಗಿ ಐಪಿಎಲ್ ಶುರುವಾಗಲಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಐಪಿಎಲ್ 2023 ರಲ್ಲಿ ಡಬಲ್ ಹೆಡರ್ ಪಂದ್ಯ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ. ಹಾಗೆಯೇ 2ನೇ ಪಂದ್ಯವು ರಾತ್ರಿ 8 ಗಂಟೆಗೆ ಶುರುವಾಗಲಿದೆ. ಅಷ್ಟೇ ಅಲ್ಲದೆ ಡಬಲ್ ಹೆಡರ್ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. ಮುಂದಿನ ಸೀಸನ್ಗಾಗಿ ಐಪಿಎಲ್ ನೇರ ಪ್ರಸಾರ ಹಕ್ಕಿಗಾಗಿ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ ಪ್ರಮುಖ ಕಂಪೆನಿಗಳಿಗೆ ಬಿಸಿಸಿಐ ಈ ಮಾಹಿತಿ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಐಪಿಎಲ್ನಲ್ಲಿ ಪಂದ್ಯಗಳು ಸಂಜೆ 4 ಮತ್ತು 8 ಗಂಟೆಗೆ ಆರಂಭವಾಗುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಇದೇ ಸಮಯದಲ್ಲಿ ಪಂದ್ಯಗಳು ನಡೆದಿವೆ. ಐಪಿಎಲ್ ಆರಂಭಿಕ ವರ್ಷಗಳಲ್ಲಿ ಪಂದ್ಯಗಳು 4 ಗಂಟೆ ಮತ್ತು 8 ಗಂಟೆಗೆ ಆರಂಭವಾಗುತ್ತಿದ್ದವು. ಸ್ಟಾರ್ ಸ್ಪೋರ್ಟ್ಸ್ ಪ್ರಸಾರದ ಹಕ್ಕನ್ನು ಖರೀದಿಸಿದ ಬಳಿಕ ಸಮಯದಲ್ಲಿ ಬದಲಾವಣೆ ಮಾಡಲಾಯಿತು. ಅಂದರೆ 2018 ರಿಂದ ಐಪಿಎಲ್ನ ಸಮಯವು 3.30 ಮತ್ತು ರಾತ್ರಿ 7.30 ಆಗಿ ಬದಲಾಯಿತು. ಇದೀಗ ಮತ್ತೆ ಐಪಿಎಲ್ ಸಮಯದಲ್ಲಿ ಬದಲಾವಣೆ ತರಲು ಬಿಸಿಸಿಐ ಮುಂದಾಗಿದೆ.
ಐಪಿಎಲ್ 2022 ಮುಗಿದ ಬಳಿಕ ಮುಂದಿನ 5 ವರ್ಷಗಳ (2023-2027) ಪ್ರಸಾರದ ಹಕ್ಕುಗಳಿಗಾಗಿ ಜೂನ್ 12 ರಂದು ಹರಾಜು ಮಾಡಲಾಗುತ್ತದೆ. ಈಗಾಗಲೇ ಸ್ಟಾರ್ ಇಂಡಿಯಾ, ವಯಾಕಾಮ್ 18, ಅಮೆಜಾನ್, ಝೀ, ಡ್ರೀಮ್ XI, ದಕ್ಷಿಣ ಆಫ್ರಿಕಾದ ಸೂಪರ್‌ಸ್ಪೋರ್ಟ್ಸ್ ಚಾನೆಲ್ ಗ್ರೂಪ್ ಮತ್ತು ಯುಕೆಯ ಸ್ಕೈ ಸ್ಪೋರ್ಟ್ಸ್ ಪ್ರಸಾರ ಹಕ್ಕುಗಳನ್ನು ಖರೀದಿಸುವ ರೇಸ್‌ನಲ್ಲಿವೆ. ಇದಲ್ಲದೇ ಐಪಿಎಲ್ ಪ್ರಸಾರ ಹಕ್ಕುಗಳನ್ನು ಖರೀದಿಸಲು ಗೂಗಲ್ ಕೂಡ ಆಸಕ್ತಿ ತೋರಿದೆ. ಹೀಗಾಗಿ ಮುಂದಿನ 5 ವರ್ಷಗಳ ಪ್ರಸಾರ ಹಕ್ಕು ಯಾವ ಕಂಪೆನಿಯ ಪಾಲಾಗಲಿದೆ ಕಾದು ನೋಡಬೇಕಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.