ಐಪಿಎಲ್ (IPL) ಸೀಸನ್ 15 ಮುಕ್ತಾಯದ ಬೆನ್ನಲ್ಲೇ ಇದೀಗ ಬಿಸಿಸಿಐ (BCCI) ಮುಂಬರುವ ಸೀಸನ್ಗಳಲ್ಲಿ ಮಹತ್ವದ ಬದಲಾವಣೆ ತರಲು ಯೋಜನೆ ರೂಪಿಸುತ್ತಿದೆ. ಏಕೆಂದರೆ ಈ ಬಾರಿ ಐಪಿಎಲ್ ನೇರ ಪ್ರಸಾರ ಮಾಧ್ಯಮ ಹಕ್ಕುಗಳ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಮೂಲಕ ಬಿಡ್ಡಿಂಗ್ದಾರರಿಗೆ ಹೆಚ್ಚಿನ ಲಾಭವಾಗುವಂತಹ ಆಫರ್ನ್ನು ಮುಂದಿಡಲು ಬಿಸಿಸಿಐ ಬಯಸಿದೆ. ಇದರಿಂದ ಐಪಿಎಲ್ ಪ್ರಸಾರ ಹಕ್ಕುಗಳ ಖರೀದಿಗೆ ಹೆಚ್ಚಿನ ಪೈಪೋಟಿ ಕಂಡು ಬರಲಿದೆ. ಈ ಬಾರಿ ಹೊಸ ಎರಡು ತಂಡಗಳ ಸೇರ್ಪಡೆಯಿಂದಾಗಿ ಐಪಿಎಲ್ ಪಂದ್ಯಗಳ ಸಂಖ್ಯೆ ಹೆಚ್ಚಳವಾಗಿತ್ತು. ಅಂದರೆ ಲೀಗ್ ಫಾರ್ಮಾಟ್ ಬದಲಿಗೆ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಸಲಾಗಿತ್ತು. ಅದರಂತೆ ಈ ಬಾರಿ 60 ಪಂದ್ಯಗಳ ಬದಲಾಗಿ ಒಟ್ಟು 74 ಪಂದ್ಯಗಳನ್ನು ನಡೆಸಲಾಗಿತ್ತು.
ಇದೀಗ ಅದೇ ಮಾದರಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಮುಂದಾಗಿದೆ. ಅಂದರೆ ಐಪಿಎಲ್ 2023 ಮತ್ತು 2024 ರಲ್ಲಿ 74 ಪಂದ್ಯಗಳೇ ನಡೆಯಲಿದೆ. ಆದರೆ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ನಡೆಸಲಾಗುತ್ತದೆ. ಹಾಗೆಯೇ 2027 ರಲ್ಲಿ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲಾಗುತ್ತದೆ. ಅಂದರೆ 2027 ರಲ್ಲಿ ಮತ್ತೆ ಲೀಗ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ.
ಐಪಿಎಲ್ 2021 ರಲ್ಲಿ ಒಟ್ಟು 60 ಪಂದ್ಯಗಳನ್ನು ನಡೆಸಲಾಗಿತ್ತು. ಇದರಲ್ಲಿ 56 ಲೀಗ್ ಪಂದ್ಯಗಳಿದ್ದರೆ, 4 ಪ್ಲೇಆಫ್ ಪಂದ್ಯಗಳನ್ನು ಆಡಿಸಲಾಗಿತ್ತು. ಈ ವೇಳೆ ಪ್ರತಿ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನು ಆಡಿತ್ತು. ಈ ಮೂಲಕ ಲೀಗ್ನಲ್ಲಿ ಎಲ್ಲಾ ತಂಡಗಳು ಒಟ್ಟು 14 ಪಂದ್ಯಗಳನ್ನಾಡಲಾಗಿತ್ತು. ಆದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸಲಾಗಿದೆ.
ಅದರಂತೆ ಗ್ರೂಪ್ A-ನಲ್ಲಿದ್ದ ತಂಡವು ತನ್ನದೇ ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಿದೆ. ಹಾಗೆಯೇ ಗ್ರೂಪ್ B-ನಲ್ಲಿದ್ದ 4 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯವನ್ನಾಡಿದೆ. ಅಂದರೆ ಆಯಾ ಗ್ರೂಪ್ನ ತಂಡಗಳ ವಿರುದ್ದ 2 ಪಂದ್ಯಗಳು, ಮತ್ತೊಂದು ಗ್ರೂಪ್ 4 ತಂಡಗಳ ವಿರುದ್ದ ಒಂದೊಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯವಾಡಿತ್ತು. ಈ ಮೂಲಕ ಒಂದು ತಂಡವು ಒಟ್ಟು 14 ಲೀಗ್ ಪಂದ್ಯಗಳನ್ನು ಆಡಲಾಗಿತ್ತು. ಇದೇ ಮಾದರಿಯಲ್ಲೇ 2023 ರ ಮತ್ತು 2024 ಐಪಿಎಲ್ ನಡೆಯಲಿದೆ.
ಆದರೆ 2025 ರ ಐಪಿಎಲ್ನಲ್ಲಿ ಒಟ್ಟು 84 ಪಂದ್ಯಗಳು ಇರಲಿದೆ. ಇಲ್ಲಿ ಕೂಡ ರೌಂಡ್ ರಾಬಿನ್ ಮಾದರಿಯನ್ನೇ ಅನುಸರಿಸಲಿದೆ. ಅಂದರೆ ಆಯಾ ಗ್ರೂಪ್ನ 4 ತಂಡಗಳ ವಿರುದ್ದ 2 ಪಂದ್ಯಗಳು, ಮತ್ತೊಂದು ಗ್ರೂಪ್ 3 ತಂಡಗಳ ವಿರುದ್ದ ಒಂದೊಂದು ಪಂದ್ಯ ಹಾಗೂ 2 ತಂಡಗಳ ವಿರುದ್ದ ಎರಡೆರಡು ಪಂದ್ಯಗಳನ್ನು ಆಡಿಸಲಾಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿ ಒಟ್ಟು 15 ಪಂದ್ಯವಾಡಲಿದೆ. ಈ ಮಾದರಿಯಲ್ಲಿ ಐಪಿಎಲ್ 2025-26 ರ ಸೀಸನ್ ನಡೆಯಲಿದೆ.
ಇನ್ನು 2027 ರ ಸೀಸನ್ ಅನ್ನು ಲೀಗ್ ಮಾದರಿಯಲ್ಲೇ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅಂದರೆ ಎಲ್ಲಾ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನು ಆಡಲಿದೆ. ಇಲ್ಲಿ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 9 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಿದೆ. ಇದಾಗ್ಯೂ ಮುಂಬರುವ ಸೀಸನ್ಗಳಲ್ಲಿ ಪ್ಲೇಆಫ್ ಮಾದರಿಯಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ. ಈಗಿರುವಂತೆ ಮೊದಲ ಕ್ವಾಲಿಫೈಯರ್ ಪಂದ್ಯ, ಎಲಿಮಿನೇಟರ್ ಪಂದ್ಯ, ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ನಡೆಸಲಾಗುತ್ತದೆ.
ಈ ಮಾದರಿಯಲ್ಲಿ ಎರಡು ಸೀಸನ್ಗೊಮ್ಮೆ ಪಂದ್ಯಗಳ ಸಂಖ್ಯೆ ಹೆಚ್ಚಿಸುವುದರಿಂದ 5 ವರ್ಷದಲ್ಲಿ 370 ರ ಬದಲು 410 ಪಂದ್ಯಗಳನ್ನು ಆಡಿಸಬಹುದು. ಇದರಿಂದ 40 ಪಂದ್ಯಗಳು ಕೂಡ ಹೆಚ್ಚಳವಾಗಲಿದೆ. ಈ ಮೂಲಕ ಐಪಿಎಲ್ 2023 ರಿಂದ 2027ರ ನೇರ ಪ್ರಸಾರ ಹಕ್ಕುಗಳ ಖರೀದಿದಾರರು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಹೀಗಾಗಿ ಬಿಸಿಸಿಐ ಮುಂಬರುವ ಸೀಸನ್ಗಳಲ್ಲಿ ಪಂದ್ಯಗಳ ಸಂಖ್ಯೆಗಳನ್ನು ಹೆಚ್ಚಿಸುವತ್ತ ಚಿಂತನೆ ನಡೆಸಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.