PSL 2026: ಐಪಿಎಲ್‌ಗಾಗಿ ಪಿಎಸ್‌ಎಲ್ ತೊರೆದ ಮತ್ತೊಬ್ಬ ಸ್ಟಾರ್ ಆಟಗಾರ
IPL vs PSL: ಐಪಿಎಲ್ ಜೊತೆ ಸೆಣೆಸುವ ಹಠಕ್ಕೆ ಬಿದ್ದಿದ್ದ ಪಾಕಿಸ್ತಾನ ಸೂಪರ್ ಲೀಗ್ ತೀವ್ರ ಸಂಕಷ್ಟದಲ್ಲಿದೆ. ಐಪಿಎಲ್‌ನ ದೊಡ್ಡ ಸಂಭಾವನೆ ಮತ್ತು ಉತ್ತಮ ಅವಕಾಶಗಳಿಂದ ಆಕರ್ಷಿತರಾದ ಅನೇಕ ವಿದೇಶಿ ಆಟಗಾರರು ಪಿಎಸ್‌ಎಲ್ ತೊರೆಯುತ್ತಿದ್ದಾರೆ. ಶ್ರೀಲಂಕಾದ ನಾಯಕ ದಸುನ್ ಶನಕ ಕೂಡ ಪಿಎಸ್‌ಎಲ್ ಬದಲು ರಾಜಸ್ಥಾನ ರಾಯಲ್ಸ್‌ಗಾಗಿ ಐಪಿಎಲ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ. ಪಿಸಿಬಿ ಎಚ್ಚರಿಕೆಗಳನ್ನು ಲೆಕ್ಕಿಸದೆ ಆಟಗಾರರು ಐಪಿಎಲ್‌ಗೆ ಆದ್ಯತೆ ನೀಡುತ್ತಿದ್ದಾರೆ.

ಐಪಿಎಲ್ (IPL) ಜೊತೆಗೆ ಪಿಎಸ್‌ಎಲ್ (PSL) ನಡೆಸಬೇಕೆಂಬ ಹಠಕ್ಕೆ ಬಿದ್ದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ವಾಸ್ತವವಾಗಿ ಕಳೆದ ಆವೃತ್ತಿಯಿಂದ ಪಾಕಿಸ್ತಾನ ಸೂಪರ್ ಲೀಗ್, ಐಪಿಎಲ್ ಜೊತೆಗೆ ಆರಂಭವಾಗುತ್ತಿದೆ. ಕಳೆದ ಆವೃತ್ತಿಯ ಪಿಎಸ್‌ಎಲ್ ಹೆಚ್ಚಿನ ತೊಂದರೆಗಳಿಲ್ಲದೆ ಮುಗಿದಿತ್ತು. ಆದರೆ ಈ ಆವೃತ್ತಿ, ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲೇ ಅನೇಕ ವಿದೇಶಿ ಆಟಗಾರರು ಈ ಲೀಗ್‌ನಿಂದ ತಮ್ಮ ಹೆಸರುಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುತ್ತಿರುವುದು.
ವಿಶ್ವದ ಅತಿದೊಡ್ಡ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್‌ನ 19 ನೇ ಸೀಸನ್ ಇದೇ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಆದರೆ ಲೀಗ್ ಆರಂಭಕ್ಕೂ ಮುನ್ನವೇ ಅನೇಕ ಆಟಗಾರರು ಗಾಯದಿಂದಾಗಿ ಈಗಾಗಲೇ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಬೇರೆ ಆಟಗಾರರನ್ನು ಹುಡುಕುವ ಕೆಲಸವನ್ನು ಫ್ರಾಂಚೈಸಿಗಳು ಮಾಡುತ್ತಿವೆ. ಅದರಂತೆ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗದೆ ಪಾಕಿಸ್ತಾನ ಸೂಪರ್ ಲೀಗ್ನತ್ತ ಮುಖ ಮಾಡಿದ್ದ ಆಟಗಾರರಿಗೆ ಮತ್ತೆ ಐಪಿಎಲ್‌ನಲ್ಲಿ ಆಡಲು ಆಹ್ವಾನ ನೀಡಲಾಗುತ್ತಿದೆ.
ಆರ್ ಆರ್ ತಂಡಕ್ಕೆ ದಸುನ್ ಶನಕ
ಪಿಎಸ್ಎಲ್ಗೆ ಹೋಲಿಸಿಕೊಂಡರೆ, ಐಪಿಎಲ್‌ನಲ್ಲಿ ಹೆಚ್ಚಿನ ಸಂಬಳ ನೀಡುವ ಕಾರಣ ಆಹ್ವಾನ ಪಡೆದ ಎಲ್ಲಾ ಆಟಗಾರರು ಐಪಿಎಲ್ನತ್ತ ಮುಖ ಮಾಡುತ್ತಿದ್ದಾರೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿ ತುಪ್ಪವಾಗಿದೆ. ಹೀಗೆ ಲೀಗ್ ತೊರೆಯುತ್ತಿರುವ ಆಟಗಾರರ ಮೇಲೆ ಕಾನೂನು ಕ್ರಮದ ಜೊತೆಗೆ ಲೀಗ್‌ನಿಂದ ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗುತ್ತಿದೆ. ಆದರೆ ಈ ಎಚ್ಚರಿಕೆಗೆ ತಲೆಕೆಡಿಸಿಕೊಳ್ಳದ ಆಟಗಾರರು ಐಪಿಎಲ್ ಆಡಲು ಮುಂದಾಗಿದ್ದಾರೆ. ಅಂತಹ ಆಟಗಾರರ ಪಟ್ಟಿಗೆ ಇದೀಗ ಶ್ರೀಲಂಕಾದ ಟಿ20 ತಂಡದ ನಾಯಕ ದಸುನ್ ಶನಕ ಕೂಡ ಸೇರಿಕೊಂಡಿದ್ದಾರೆ.
ಈ ಐಪಿಎಲ್ ತಂಡದಲ್ಲಿ ಅವಕಾಶ
ಶ್ರೀಲಂಕಾ ನಾಯಕ ಮತ್ತು ಆಲ್‌ರೌಂಡರ್ ದಸುನ್ ಶನಕ ಮಾರ್ಚ್ 26 ರಂದು ಪ್ರಾರಂಭವಾಗುವ ಪಾಕಿಸ್ತಾನ ಸೂಪರ್ ಲೀಗ್‌ನ 11 ನೇ ಸೀಸನ್‌ನಲ್ಲಿ ಲಾಹೋರ್ ಖಲಂದರ್ಸ್ ತಂಡದ ಪರ ಆಡಬೇಕಿತ್ತು. ಹರಾಜಿನಲ್ಲಿ ಶನಕ ಅವರನ್ನು 7.5 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಲಾಹೋರ್ ಖಲಂದರ್ಸ್ ಖರೀದಿಸಿತ್ತು. ಅದರಂತೆ ಶನಕ ಈ ಪಂದ್ಯಾವಳಿಯಲ್ಲಿ ಆಡಲು ತಯಾರಿ ನಡೆಸುತ್ತಿರುವಾಗಲೇ ಐಪಿಎಲ್ ತಂಡದಿಂದ ಬುಲಾವ್ ಬಂದಿದೆ. ವರದಿಗಳ ಪ್ರಕಾರ, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಶನಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರ ಬದಲಿಯಾಗಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, ದಸುನ್ ಶನಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದೆ. ಅದರಂತೆ ಲಂಕಾ ಕ್ರಿಕೆಟ್‌ನೊಂದಿಗೆ ಕೆಲವು ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಶನಕ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು. ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಗಾಯದಿಂದಾಗಿ ಇಡಿ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಶನಕ ಆಡಲಿದ್ದಾರೆ.
ಪಿಎಸ್ಎಲ್ಗೆ ಮತ್ತೊಬ್ಬ ವೇಗಿ ಗುಡ್ ಬೈ?
ಈ ಹಿಂದೆ, ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಪಿಎಸ್‌ಎಲ್‌ನಿಂದ ಹಿಂದೆ ಸರಿದು ನಂತರ ಬದಲಿಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿದ್ದರು. ಶನಕ ನಂತರ, ಪಾಕಿಸ್ತಾನಿ ಲೀಗ್‌ನಿಂದ ಮತ್ತೊಬ್ಬ ವಿದೇಶಿ ಆಟಗಾರ ಹಿಂದೆ ಸರಿಯುವ ವದಂತಿಗಳಿವೆ. ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಪೆನ್ಸರ್ ಜಾನ್ಸನ್, ನಾಥನ್ ಎಲಿಸ್ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಬಹುದು ಎಂದು ವರದಿಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 23 March 26
