
ಐಪಿಎಲ್ 2026 (IPL 2026) ರ 42ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಲೀಗ್ನಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ಗೆದ್ದಿದ್ದರೆ, ಇದೀಗ ಎರಡನೇ ಪಂದ್ಯವನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೇವಲ 155 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಇನ್ನು 25 ಬಾಲ್ಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು. ಈ ಆವೃತ್ತಿಯಲ್ಲಿ ಇದು ಆರ್ಸಿಬಿಯ ಮೂರನೇ ಸೋಲಾದರೆ, ಇತ್ತ ಗುಜರಾತ್ ತಂಡಕ್ಕೆ 5ನೇ ಗೆಲುವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕಳಪೆ ಆರಂಭ ಪಡೆಯಿತು. ಜಾಕೋಬ್ ಬೆಥೆಲ್ ಕೇವಲ 5 ರನ್‌ಗಳಿಗೆ ಔಟಾದರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ, ರಬಾಡ ಅವರ ಓವರ್‌ನಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು. ಆದರೆ ಅದೇ ರಬಾಡ ಬೌಲ್ ಮಾಡಿದ ಮುಂದಿನ ಓವರ್‌ನಲ್ಲಿ ಔಟಾದರು. ಪಡಿಕ್ಕಲ್ ಮತ್ತು ಪಾಟಿದಾರ್ ಜೊತೆಯಾಟವನ್ನು ನಿರ್ಮಿಸಲು ಪ್ರಯತ್ನಿಸಿದರು, ಆದರೆ ಆರ್‌ಸಿಬಿ ನಾಯಕ ಪಾಟಿದಾರ್ 19 ರನ್‌ಗಳಿಗೆ ಔಟಾದರು. ಜಿತೇಶ್ ಶರ್ಮಾ ಮತ್ತೊಮ್ಮೆ ನಿರಾಶೆಗೊಳಿಸಿ 1 ರನ್‌ಗೆ ಔಟಾದರು. ಟಿಮ್ ಡೇವಿಡ್ ಅವರನ್ನು ರಶೀದ್ ಖಾನ್ 9 ರನ್‌ಗೆ ಔಟ್ ಮಾಡಿದರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ದೇವದತ್ (40 ರನ್), ರಶೀದ್ ಖಾನ್ ಅವರ ಅದ್ಭುತ ಎಸೆತದಲ್ಲಿ ಬೌಲ್ಡ್ ಆದರು. ಅಂತಿಮವಾಗಿ ಆರ್‌ಸಿಬಿ 19.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು.
ಗುರಿ ಬೆನ್ನಟ್ಟಿದ ಗುಜರಾತ್ ತಂಡ ಕೂಡ ಕಳಪೆ ಆರಂಭ ಪಡೆಯಿತು. ಸಾಯಿ ಸುದರ್ಶನ್ 6 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಆದರೆ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್ ನಡೆಸಿ ಜೋಶ್ ಹ್ಯಾಜಲ್‌ವುಡ್ ಅವರ ಮೊದಲ ಓವರ್‌ನಲ್ಲಿ 24 ರನ್ ಕಲೆಹಾಕಿದರು. ಅವರು 18 ಎಸೆತಗಳಲ್ಲಿ 3 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಒಳಗೊಂಡಂತೆ 43 ರನ್ ಗಳಿಸಿ ಔಟಾದರು. ಜೋಸ್ ಬಟ್ಲರ್ 19 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಒಳಗೊಂಡಂತೆ 39 ರನ್ ಗಳಿಸಿದರು. ಕೊನೆಯಲ್ಲಿ, ರಾಹುಲ್ ತೆವಾಟಿಯಾ ಗುಜರಾತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
GT vs RCB IPL 2026 Highlights: ಆರ್‌ಸಿಬಿ ವಿರುದ್ಧ ಸುಲಭವಾಗಿ ಗೆದ್ದ ಗುಜರಾತ್
ಗುಜರಾತ್ ತಂಡದ ಈ ಗೆಲುವಿನಲ್ಲಿ ಆರ್ಸಿಬಿಯ ಕಳಪೆ ಫಿಲ್ಡಿಂಗ್ ಕೂಡ ಕಾರಣವಾಯಿತು. ಶುಭ್ಮನ್ ಗಿಲ್ ನೀಡಿದ ರನೌಟ್ ಅವಕಾಶಗಳನ್ನು ಆರ್‌ಸಿಬಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಾಗೆಯೇ ಜೋಸ್ ಬಟ್ಲರ್ ಕೇವಲ 1 ರನ್ ಬಾರಿಸಿದ್ದಾಗ ನೀಡಿದ ಸುಲಭ ಕ್ಯಾಚ್ ಅನ್ನು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೈಚೆಲ್ಲಿದರು. ಈ ಜೀವದಾನದ ಲಾಭ ಪಡೆದ ಬಟ್ಲರ್ 39 ರನ್ ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 pm, Thu, 30 April 26