ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶೇಷ ಭಾರತ ಹಾಗೂ ಸೌರಾಷ್ಟ್ರ (Rest of India vs Saurashtra) ನಡುವಿನ ಇರಾನಿ ಕಪ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶೇಷ ಭಾರತ ತಂಡ ಬಿ ಸಾಯಿ ಸುದರ್ಶನ್ (B Sai Sudarshan) ಅವರ ಅರ್ಧಶತಕದ ನೆರವಿನಿಂದ 308 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲ ದಿನದಂದು 8 ವಿಕೆಟ್ ಕಳೆದುಕೊಂಡು 298 ರನ್ ಬಾರಿಸಿದ್ದ ಶೇಷ ಭಾರತ ತಂಡ ಎರಡನೇ ದಿನದಾಟದಲ್ಲಿ ಕೇವಲ 2 ರನ್ಗಳಿಸುವಷ್ಟರಲ್ಲಿ ಉಳಿದ ಇನ್ನೇರಡು ವಿಕೆಟ್ಗಳನ್ನು ಕಳೆದುಕೊಂಡು ಮೊದಲ ಇನ್ನಿಂಗ್ಸ್ ಮುಗಿಸಿದೆ. ಹಾಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ಪರ ಬೌಲಿಂಗ್ನಲ್ಲಿ ಮಿಂಚಿದ ಪಾರ್ಥ್ ಭಟ್ 5 ವಿಕೆಟ್ ಪಡೆದು ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರೆಸ್ಟ್ ಆಫ್ ಇಂಡಿಯಾ ತಂಡದ ಪರ ಸಾಯಿ ಸುದರ್ಶನ್ ಹೊರತುಪಡಿಸಿ, ಇತರ ಎಲ್ಲಾ ಬ್ಯಾಟ್ಸ್‌ಮನ್‌ಗಳು ಸೌರಾಷ್ಟ್ರದ ಸ್ಪಿನ್ನರ್‌ಗಳ ವಿರುದ್ಧ ರನ್ಗಳಿಸಲು ಹೆಣಗಾಡಿದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಸಾಯಿ ಸುದರ್ಶನ್ 165 ಎಸೆತಗಳಲ್ಲಿ 72 ರನ್‌ಗಳ ಇನ್ನಿಂಗ್ಸ್ ಆಡಿದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್ ಹಾಗೂ ಕನ್ನಡಿಗ ಮಯಾಂಕ್ ಅರ್ಗವಾಲ್ ಮೊದಲ ವಿಕೆಟ್ಗೆ 69 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 32 ರನ್ ಬಾರಿಸಿದ್ದ ಮಯಾಂಕ್, ಜಡೇಜಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಬಳಿಕ ಬಂದ ನಾಯಕ ಹನುಮ ವಿಹಾರಿ 33 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಈ ಎರಡು ವಿಕೆಟ್ ಪತನದ ಬಳಿಕ ತಂಡದ ಮಧ್ಯಮ ಕ್ರಮಾಂಕ ಅಲ್ಪ ಮೊತ್ತಕ್ಕೆ ಕುಸಿಯಿತು. ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಸರ್ಫರಾಜ್ ಖಾನ್ (17 ರನ್) ಮತ್ತು ಯಶ್ ಧುಲ್ (10 ರನ್) ಮತ್ತೊಮ್ಮೆ ರನ್ ಗಳಿಸುವಲ್ಲಿ ವಿಫಲರಾದರು.
Irani Trophy: ಮಿಂಚಿದ ಯಶಸ್ವಿ ಜೈಸ್ವಾಲ್; ಕನ್ನಡಿಗ ಮಯಾಂಕ್ ತಂಡಕ್ಕೆ ಇರಾನಿ ಕಪ್..!
ಇತ್ತೀಚೆಗೆ ಇಂಗ್ಲಿಷ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸರ್ರೆ ತಂಡದ ಪರ ಕಣಕ್ಕಿಳಿದು ಕೌಂಟಿ ಚಾಂಪಿಯನ್‌ಶಿಪ್ ಗೆದ್ದಿದ್ದ ಸಾಯಿ ಸುದರ್ಶನ್ ಸಂಯಮದಿಂದ ಆಡಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಸಾಯಿ ಸುದರ್ಶನ್ ಔಟಾದ ತಕ್ಷಣ ಶೇಷ ಭಾರತ ಕೇವಲ 22 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಕೆಳ ಕ್ರಮಾಂಕದಲ್ಲಿ ಶ್ರೀಕರ್ ಭರತ್ 36 ರನ್, ಶಮ್ಸ್ ಮುಲಾನಿ 32 ರನ್, ಸೌರಭ್ ಕುಮಾರ್ 39 ರನ್‌ಗಳ ಇನ್ನಿಂಗ್ಸ್ ಆಡಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು.
ಸೌರಾಷ್ಟ್ರ ತಂಡದ ಪರ ಪಾರ್ಥ್ ಭಟ್ 30 ಓವರ್ ಬೌಲಿ ಮಾಡಿ 94 ರನ್ ನೀಡಿ 5 ವಿಕೆಟ್ ಪಡೆದರೆ, ಧರ್ಮೇಂದ್ರಸಿನ್ಹ ಜಡೇಜಾ 90 ರನ್ ನೀಡಿ 3 ವಿಕೆಟ್ ಪಡೆದರು. ಈ ಇಬ್ಬರೊಂದಿಗೆ ಯುವರಾಜಸಿಂಹ ದೊಡಿಯಾ ಕೂಡ ಪ್ರಮುಖ 2 ವಿಕೆಟ್ ಪಡೆದು ಮಿಂಚಿದರು.
ಇನ್ನು ಶೇಷ ಭಾರತ ತಂಡ ನೀಡಿರುವ 308 ರನ್‌ಗಳ ಗುರಿ ಬೆನ್ನಟ್ಟಿರುವ ಸೌರಾಷ್ಟ್ರ ತಂಡ ಈ ಸುದ್ದಿ ಬರೆಯುವ ವೇಳೆಗೆ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ