ಬಾಂಗ್ಲಾದೇಶ ಪ್ರವಾಸದಲ್ಲಿ ಮೊದಲೆರಡು ಏಕದಿನ ಪಂದ್ಯಗಳನ್ನು ಸೋಲುವುದರೊಂದಿಗೆ ಸರಣಿ ಕಳೆದುಕೊಂಡಿದ್ದ ಟೀಂ ಇಂಡಿಯಾ (India vs Bangladesh) ಕೊನೆಯ ಏಕದಿನ ಪಂದ್ಯವನ್ನು 227 ರನ್‌ಗಳ ಬೃಹತ್ ಅಂತರದಲ್ಲಿ ಗೆಲ್ಲುವುದರೊಂದಿಗೆ ಏಕದಿನ ಸರಣಿಗೆ ಸಮಾಧಾನಕರ ವಿದಾಯ ಹೇಳಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಇಶಾನ್ ಕಿಶನ್ (Ishan Kishan) ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದಲ್ಲದೆ, ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿ ಕೂಡ ಆದರು. ಹಾಗೆಯೇ ಕಿಶನ್ಗೆ ಸಖತ್ ಸಾಥ್ ನೀಡಿದ ಕಿಂಗ್ ಕೊಹ್ಲಿ (Virat Kohli) ಕೂಡ ವರ್ಷಗಳ ನಂತರ ಏಕದಿನ ಕ್ರಿಕೆಟ್ನಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಇಬ್ಬರ ದಾಖಲೆಯ ಜೊತೆಯಾಟ ನೆರವಿನಿಂದ ಟೀಂ ಇಂಡಿಯಾ 410 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ ಪಡೆ ಕೇವಲ 182 ರನ್ಗಳಿಗೆ ಆಲ್ಔಟ್ ಆಯಿತು.
ಇಶಾನ್- ವಿರಾಟ್ ಜೊತೆಯಾಟ
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 3 ರನ್ ಗಳಿಸಿ ಧವನ್ ಪೆವಿಲಿಯನ್ ಹಾದಿ ಹಿಡಿದರು. ಆರಂಭದಲ್ಲೇ ವಿಕೆಟ್ ಪಡೆದಿದ್ದರಿಂದ ಪಂದ್ಯದಲ್ಲಿ ಹಿಡಿತ ಸಾಧಿಸಬಹುದೆಂದುಕೊಂಡಿದ್ದ ಬಾಂಗ್ಲಾ ಪಡೆಗೆ ಕೊಹ್ಲಿ- ಕಿಶನ್ ಜೋಡಿ ಸರಿಯಾಗಿ ತಿರುಗೇಟು ನೀಡಿತು. ಈ ಇಬ್ಬರು ಎರಡನೇ ವಿಕೆಟ್‌ಗೆ ದಾಖಲೆಯ ದ್ವಿಶತಕದ ಜೊತೆಯಾಟ ನಡೆಸಿದರು. ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ಕಿಶನ್ ಕೇವಲ 126 ಎಸೆತಗಳಲ್ಲಿ ಏಕದಿನ ಇತಿಹಾಸದಲ್ಲೇ ಅತಿ ವೇಗದ ದ್ವಿಶತಕ ಪೂರೈಸಿದರು.
ತಮ್ಮ ಪೂರ್ಣ ಇನ್ನಿಂಗ್ಸ್‌ನಲ್ಲಿ 131 ಎಸೆತಗಳನ್ನು ಎದುರಿಸಿದ ಕಿಶನ್ 24 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡಂತೆ 210 ರನ್ ಗಳಿಸಿ ಟಸ್ಕಿನ್ಗೆ ಬಲಿಯಾದರು. ಒಂದು ವೇಳೆ ಕಿಶನ್ ಇಷ್ಟು ರನ್ಗಳಿಗೆ ವಿಕೆಟ್ ಒಪ್ಪಿಸದೆ ಇದ್ದಿದ್ದರೆ, ಟೀಂ ಇಂಡಿಯಾ 500 ರ ಗಡಿ ದಾಟುವ ಸಾಧ್ಯತೆಯೂ ಇತ್ತು. ಹಾಗೆಯೇ ಕಿಶನ್ ಕೂಡ ರೋಹಿತ್ ಶರ್ಮಾ ದಾಖಲೆಯನ್ನು ಸುಲಭವಾಗಿಯೇ ಮುರಿಯುತ್ತಿದ್ದರು.
Ishan Kishan: ಗೇಲ್ ದಾಖಲೆ ಉಡೀಸ್; ಅಬ್ಬರದ ದ್ವಿಶತಕ ಸಿಡಿಸಿ ಬರೋಬ್ಬರಿ 10 ದಾಖಲೆ ನಿರ್ಮಿಸಿದ ಕಿಶನ್..!
ಈ ಪಂದ್ಯದಲ್ಲಿ ಇಶಾನ್ ಹೊರತುಪಡಿಸಿ, ವಿರಾಟ್ ಕೊಹ್ಲಿ ಕೂಡ ತಮ್ಮ ಏಕದಿನ ವೃತ್ತಿಜೀವನದ 44 ನೇ ಶತಕ ಸಿಡಿಸಿ ಮಿಂಚಿದರು. ಕೊಹ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ 91 ಎಸೆತಗಳನ್ನು ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಂತೆ 113 ರನ್ ಬಾರಿಸಿದರು. ಇವರಿಬ್ಬರ ನಡುವೆ ಎರಡನೇ ವಿಕೆಟ್‌ಗೆ 190 ಎಸೆತಗಳಲ್ಲಿ 290 ರನ್‌ಗಳ ಜೊತೆಯಾಟವಿತ್ತು.
ಈ ಜೋಡಿಯ ಜೊತೆಯಾಟ ಕೊನೆಗೊಂಡ ಬಳಿಕ ಟೀಂ ಇಂಡಿಯಾದಿಂದ ಮತ್ತ್ಯಾವ ಆಟಗಾರನು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಕೊನೆಯಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 27 ಎಸೆತಗಳಲ್ಲಿ 37 ರನ್ ಬಾರಿಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಅಂತಿಮವಾಗಿ 8 ವಿಕೆಟ್ಗಳನ್ನು ಕಳೆದುಕೊಂಡು ಟೀಂ ಇಂಡಿಯಾ 409 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು.
ಬಾಂಗ್ಲಾ ಪಂದ್ಯದಲ್ಲಿಯೇ ಇರಲಿಲ್ಲ
ಈ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಆರಂಭಿಕರಿಬ್ಬರೂ ವೇಗವಾಗಿ ರನ್ ಗಳಿಸಲು ಮುಂದಾದರಾದರೂ, ಅನಾಮುಲ್ 8 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಶಕೀಬ್, ನಾಯಕ ಲಿಟನ್ ಜತೆಗೂಡಿ ತಂಡದ ಮೊತ್ತವನ್ನು ಅರ್ಧಶತಕದ ಗಡಿ ದಾಟಿಸಿದರು. ಈ ವೇಳೆ ದಾಳಿಗಿಳಿದ ಸಿರಾಜ್, ದಾಸ್ ವಿಕೆಟ್ ಉರುಳಿಸುವುದರೊಂದಿಗೆ ಈ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಕೊಂಚ ಪ್ರತಿರೋಧ ತೋರಿದ ಶಕೀಬ್, 50 ಎಸೆತಗಳಲ್ಲಿ 43 ರನ್ ಬಾರಿಸಿ ಕುಲ್ದೀಪ್ಗೆ ಬಲಿಯಾದರು. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಯಾಸಿರ್ ಅಲಿ (25 ರನ್) ಹಾಗೂ ಮಹಮ್ಮದುಲ್ಲಾ (20 ರನ್) ಬಿಟ್ಟರೆ ಮತ್ತ್ಯಾವ ಬಾಂಗ್ಲಾ ಆಟಗಾರನು ಗೆಲುವಿಗಾಗಿ ಹೋರಾಟ ನಡೆಸಲಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ಸೋಲಿಗೆ ಕಾರಣರಾಗಿದ್ದ ಹಸನ್ ಕೂಡ ಈ ಪಂದ್ಯದಲ್ಲಿ ಕೇವಲ 3 ರನ್ಗಳಿಗೆ ಸುಸ್ತಾದರು. ಅಂತಿಮವಾಗಿ ಬಾಂಗ್ಲಾ ತಂಡ 34 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 182 ರನ್ಗಳಿಸಲಷ್ಟೇ ಶಕ್ತವಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Sat, 10 December 22