
ದುಲೀಪ್ ಟ್ರೋಫಿ ಟೂರ್ನಿಯಿಂದ ಇಶಾನ್ ಕಿಶನ್ ಹೊರಬಿದ್ದಿದ್ದಾರೆ. ಪೂರ್ವ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಕಿಶನ್ ಗಾಯದ ಕಾರಣ ಹೊರಗುಳಿದಿದ್ದು, ಅವರ ಬದಲಿಗೆ ಅಭಿಮನ್ಯು ಈಶ್ವರನ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಇನ್ನು ಇಶಾನ್ ಕಿಶನ್ ಸ್ಥಾನಕ್ಕೆ ಯುವ ವಿಕೆಟ್ ಕೀಪರ್ ಬ್ಯಾಟರ್ ಆಶೀರ್ವಾದ್ ಸ್ವೈನ್ ಆಯ್ಕೆಯಾಗಿದ್ದಾರೆ.
ಒಡಿಶಾದ 20 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಶಿರ್ವಾದ್ ಸ್ವೈನ್ ಇದುವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 21 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು 30.75 ಸರಾಸರಿಯಲ್ಲಿ ಒಟ್ಟು 615 ರನ್ ಗಳಿಸಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪಿಂಗ್ನಲ್ಲಿ 32 ಕ್ಯಾಚ್‌ಗಳು ಮತ್ತು 3 ಸ್ಟಂಪಿಂಗ್‌ಗಳನ್ನು ಸಹ ಮಾಡಿದ್ದಾರೆ. ಈ ಪ್ರದರ್ಶನದ ಫಲವಾಗಿ ಇದೀಗ ಯುವ ವಿಕೆಟ್ ಕೀಪರ್ ಬ್ಯಾಟರ್ನನ್ನು ಪೂರ್ವ ವಲಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ದುಲೀಪ್ ಟ್ರೋಫಿಗೆ ಪೂರ್ವ ವಲಯ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಆಶೀರ್ವಾದ್ ಸ್ವೈನ್ (ವಿಕೆಟ್ ಕೀಪರ್), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡ್ಯಾನಿಶ್ ದಾಸ್, ಶ್ರೀದಾಮ್ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಆಕಾಶ್ ದೀಪ್ ಮತ್ತು ಮೊಹಮ್ಮದ್ ಶಮಿ.
ಸ್ಟ್ಯಾಂಡ್‌ಬೈ: ಮುಖ್ತಾರ್ ಹುಸೇನ್, ವೈಭವ್ ಸೂರ್ಯವಂಶಿ, ಸ್ವಸ್ತಿಕ್ ಸಮಲ್, ಸುದೀಪ್ ಕುಮಾರ್ ಘರಾಮಿ ಮತ್ತು ರಾಹುಲ್ ಸಿಂಗ್.
ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು
ದುಲೀಪ್ ಟ್ರೋಫಿ ಎಂಬುದು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.