ಟೀಮ್ ಇಂಡಿಯಾ ಪಾಲಿಗೆ ತಲೆನೋವಾದ ಶುಭ್ಮನ್ ಗಿಲ್
Asia Cup 2025: ಭಾರತ ಏಷ್ಯಾಕಪ್ ತಂಡದಲ್ಲಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ತಂಡದಲ್ಲಿ ಆರಂಭಿಕ ದಾಂಡಿಗರ ದಂಡೇ ಇದ್ದು, ಹೀಗಾಗಿ ಗಿಲ್ ಅವರನ್ನು ಟೀಮ್ ಇಂಡಿಯಾದಿಂದ ಕೈ ಬಿಡಲು ಆಯ್ಕೆ ಸಮಿತಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಏಷ್ಯಾಕಪ್ ಭಾರತ ತಂಡದಲ್ಲಿ ಗಿಲ್ ಕಾಣಿಸಿಕೊಳ್ಳದಿದ್ದರೂ ಅಚ್ಚರಿಪಡಬೇಕಿಲ್ಲ.

2025 ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ತಿಳಿದುಬಂದಿದೆ. ಅಂದರೆ ಈ ಹಿಂದೆ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದ ತಂಡವನ್ನೇ ಏಷ್ಯಾಕಪ್ನಲ್ಲೂ ಮುಂದುವರೆಸಲು ಬಯಸಿದೆ. ಆದರೆ ಅತ್ತ ಟೀಮ್ ಇಂಡಿಯಾದ ಸ್ಟಾರ್ ಆಟಗಾರನಾಗಿರುವ ಶುಭ್ಮನ್ ಗಿಲ್ ಅವರನ್ನು ಕೈ ಬಿಡುವುದೇಗೆ ಎಂಬ ಚಿಂತೆಯೊಂದು ಆಯ್ಕೆ ಸಮಿತಿಗೆ ಎದುರಾಗಿದೆ.
ಏಕೆಂದರೆ ಶುಭ್ಮನ್ ಗಿಲ್ ಕಳೆದ ವರ್ಷ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಟಿ20 ತಂಡದ ಉಪನಾಯಕರಾಗಿದ್ದರು. ಅಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಮ್ ಇಂಡಿಯಾದ ಉಪನಾಯಕರಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಇದೀಗ ಭಾರತ ಟೆಸ್ಟ್ ತಂಡದ ನಾಯಕರಾಗಿಯೂ ಹೊಸ ಇನಿಂಗ್ಸ್ ಶುರು ಮಾಡಿದ್ದಾರೆ.
ಹೀಗೆ ಮೂರು ಮಾದರಿಯಲ್ಲೂ ಪ್ರಮುಖ ಹುದ್ದೆ ಅಲಂಕರಿಸಿರುವ ಶುಭ್ಮನ್ ಗಿಲ್ ಅವರನ್ನು ಏಕಾಏಕಿ ಟಿ20 ತಂಡದಿಂದ ಕೈ ಬಿಡುವುದೇ ಆಯ್ಕೆ ಸಮಿತಿ ಮುಂದಿರುವ ದೊಡ್ಡ ಸವಾಲು. ಏಕೆಂದರೆ ಗಿಲ್ ಕಳೆದ ಐಪಿಎಲ್ ಸೀಸನ್ನಲ್ಲಿ ಬರೋಬ್ಬರಿ 650 ರನ್ ಕಲೆಹಾಕಿದ್ದಾರೆ. ಅದು ಸಹ 155 ರ ಸ್ಟ್ರೈಕ್ ರೇಟ್ನಲ್ಲಿ. ಅಂದರೆ ಗಿಲ್ ಭಾರತ ಟಿ20 ತಂಡದ ಆಯ್ಕೆಗೆ ಅರ್ಹರು.
ಆದರೆ ಇಲ್ಲಿ ಶುಭ್ಮನ್ ಗಿಲ್ ಅವರನ್ನು ಯಾವ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬುದೇ ಪ್ರಶ್ನೆ. ತಂಡದಲ್ಲಿ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಇದ್ದಾರೆ. ಇತ್ತ ಗಿಲ್ ಅವರನ್ನು ಹೆಚ್ಚುವರಿ ಬ್ಯಾಟರ್ ಆಗಿ ಆಯ್ಕೆ ಮಾಡಿ ಬೆಂಚ್ ಕಾಯಿಸುವಂತಿಲ್ಲ. ಇನ್ನು ಯಶಸ್ವಿ ಜೈಸ್ವಾಲ್ ಕೂಡ ಆರಂಭಿಕನ ಸ್ಥಾನದ ರೇಸ್ನಲ್ಲಿದ್ದಾರೆ.
ಮತ್ತೊಂದೆಡೆ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಇದ್ದಾರೆ. ಅವರು ಸಹ ಕಳೆದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕಕ್ಕೆ ನಾಯಕ ಸೂರ್ಯಕುಮಾರ್ ಯಾದವ್. ಇದಕ್ಕಿಂತ ಕೆಳ ಕ್ರಮಾಂಕದಲ್ಲಿ ಗಿಲ್ ಅವರನ್ನು ಆಡಿಸುವುದು ಸೂಕ್ತವಲ್ಲ. ಹೀಗಾಗಿ ಏಷ್ಯಾಕಪ್ ತಂಡದಿಂದ ಶುಭ್ಮನ್ ಗಿಲ್ ಅವರನ್ನು ಕೈ ಬಿಡುವ ಬಗ್ಗೆ ಚರ್ಚೆ ನಡೆದಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮಂಗಳವಾರ (ಆಗಸ್ಟ್ 19) ಮುಂಬೈನಲ್ಲಿ ನಡೆಯುವ ಸಭೆಯ ಮೊದಲು ಶುಭ್ಮನ್ ಗಿಲ್ ಅವರನ್ನು ತಂಡದಿಂದ ಕೈ ಬಿಡುವ ತಮ್ಮ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉನ್ನತ ಅಧಿಕಾರಿಗಳಿಗೆ ತಿಳಿಸಲಿದೆ. ಇದಾದ ಬಳಿಕ ಮತ್ತೊಂದು ಸುತ್ತಿನ ಚರ್ಚೆ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು
ಈ ಚರ್ಚೆಗಳ ಬಳಿಕ ಶುಭ್ಮನ್ ಗಿಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಿದ್ದಾರಾ ಎಂಬುದೇ ಪ್ರಶ್ನೆ. ಆಯ್ಕೆ ಮಾಡುವುದಿದ್ದರೂ ಯಾವ ಕ್ರಮಾಂಕಕ್ಕೆ ಎಂಬುದು ಮತ್ತೊಂದು ಪ್ರಶ್ನೆ. ಹೀಗಾಗಿಯೇ ಶುಭ್ಮನ್ ಗಿಲ್ ಅವರ ಆಯ್ಕೆಯು ಟೀಮ್ ಇಂಡಿಯಾ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.
Published On - 10:54 am, Mon, 18 August 25
