ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ: ಕೇವಲ 7 ರನ್​​ಗೆ ಆಲೌಟ್

|

Updated on: Nov 26, 2024 | 11:16 AM

T20 Records: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ಹೀನಾಯ ದಾಖಲೆ ಮಂಗೋಲಿಯಾ ತಂಡದ ಹೆಸರಿನಲ್ಲಿತ್ತು. ಇದೀಗ ಒಂದಂಕಿ ಮೊತ್ತಕ್ಕೆ ಸರ್ವಪತನ ಕಾಣುವ ಮೂಲಕ ಐವರಿ ಕೋಸ್ಟ್ ತಂಡದ ಅತ್ಯಂತ ಕಳಪೆ ದಾಖಲೆ ನಿರ್ಮಿಸಿದೆ.

ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ: ಕೇವಲ 7 ರನ್​​ಗೆ ಆಲೌಟ್
Ivory Coast-Nigeria
Follow us on

ಟಿ20 ವಿಶ್ವಕಪ್​​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡವು ಕೇವಲ 7 ರನ್​ಗೆ ಆಲೌಟ್ ಆಗಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೂಡಿಬಂದ ಅತ್ಯಂತ ಕಡಿಮೆ ಸ್ಕೋರ್ ಎಂಬುದು ವಿಶೇಷ. ಲಾಗೋಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ನೈಜಿರೀಯಾ ಹಾಗೂ ಐವರಿ ಕೋಸ್ಟ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನೈಜೀರಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ನೈಜಿರೀಯಾ ತಂಡಕ್ಕೆ ಸೆಲಿಮ್ ಸಲಾವ್ ಹಾಗೂ ಸುಲೈಮಾನ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​​ಗೆ 128 ರನ್​ಗಳ ಜೊತೆಯಾಟವಾಡಿದ ಬಳಿಕ ಸುಲೈಮಾನ್ (50) ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಸೆಲಿಮ್ ಸಲಾವ್ 53 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಫೋರ್​ಗಳೊಂದಿಗೆ 112 ರನ್​ಗಳ ಶತಕ ಸಿಡಿಸಿದರು. ಆ ಬಳಿಕ ಬಂದ ಐಸಾಕ್ ಒಕ್ಪೆ 23 ಎಸೆತಗಳಲ್ಲಿ 6 ಸಿಕ್ಸ್​ಗಳೊಂದಿಗೆ 65 ರನ್ ಬಾರಿಸಿದರು. ಈ ಮೂಲಕ ನೈಜಿರೀಯಾ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 271 ರನ್​ ಕಲೆಹಾಕಿತು.

272 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಐವರಿ ಕೋಸ್ಟ್ ತಂಡದ ಬ್ಯಾಟರ್​​ಗಳು ಬಂದ ವೇಗದಲ್ಲೇ ಹಿಂತಿರುಗಿದ್ದರು. ಆರಂಭಿಕ ಆಟಗಾರ ಕೋನ ಅಜೀಜ್ ಅವರ ಶೂನ್ಯದೊಂದಿಗೆ ಆರಂಭವಾದ ಪೆವಿಲಿಯನ್ ಪರೇಡ್ ಪಂಬಾ ಡಿಮಿಟ್ರಿ ವಿಕೆಟ್​​ನೊಂದಿಗೆ ಅಂತ್ಯವಾಯಿತು. ಇದರ ನಡುವೆ ಐವರಿ ಕೋಸ್ಟ್ ತಂಡದ 7 ಬ್ಯಾಟರ್​​ಗಳು ಸೊನ್ನೆ ಸುತ್ತಿದ್ದರು.

ಪರಿಣಾಮ ಐವರಿ ಕೋಸ್ಟ್ ತಂಡವು 7.3 ಓವರ್​ಗಳಲ್ಲಿ ಕೇವಲ 7 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ನೈಜಿರೀಯಾ ತಂಡವು 264 ರನ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನೊಂದಿಗೆ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಬೃಹತ್ ರನ್​ಗಳ ಅಂತರದಿಂದ ಗೆದ್ದ ದಾಖಲೆ ಪಟ್ಟಿಯಲ್ಲಿ ನೈಜಿರೀಯಾ ಮೂರನೇ ಸ್ಥಾನಕ್ಕೇರಿದೆ.

ಅತ್ಯಂತ ಕಳಪೆ ದಾಖಲೆ:

ಐವರಿ ಕೋಸ್ಟ್ ತಂಡವು ಕೇವಲ 7 ರನ್​ಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಕೋರ್​​ಗೆ ಆಲೌಟ್ ಆದ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಮಂಗೋಲಿಯಾ ತಂಡದ ಹೆಸರಿನಲ್ಲಿತ್ತು.

ಇದನ್ನೂ ಓದಿ: IPL 2025: ಅಣ್ಣ ಅನ್​ಸೋಲ್ಡ್​, ತಮ್ಮನಿಗೆ ಖುಲಾಯಿಸಿದ ಅದೃಷ್ಟ

ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ಕೇವಲ 10 ರನ್​​ಗೆ ಆಲೌಟ್ ಆಗಿ ಮಂಗೋಲಿಯಾ ಈ ಅನಗತ್ಯ ದಾಖಲೆ ನಿರ್ಮಿಸಿತ್ತು. ಇದೀಗ ಕೇವಲ 7 ರನ್​ಗಳೊಂದಿಗೆ ಇನಿಂಗ್ಸ್​ ಅಂತ್ಯಗೊಳಿಸುವ ಮೂಲಕ ಐವರಿ ಕೋಸ್ಟ್ ಈ ಕಳಪೆ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.