
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮ್ಯಾಚ್ ಮಾರ್ಚ್ 7 ರಿಂದ ಶುರುವಾಗಲಿದೆ. ಧರ್ಮಶಾಲಾದ ಹೆಚ್ಪಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿಶ್ವ ದಾಖಲೆ ಬರೆಯುವ ಅವಕಾಶ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಮುಂದಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಈಗಾಗಲೇ 698 ವಿಕೆಟ್ಗಳನ್ನು ಕಬಳಿಸಿರುವ ಅ್ಯಂಡರ್ಸನ್ ಇನ್ನೆರಡು ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 700 ವಿಕೆಟ್ ಕಬಳಿಸಿದ ಮೊದಲ ವೇಗಿ ಎನಿಸಿಕೊಳ್ಳಲಿದ್ದಾರೆ.
41ನೇ ಹಿರಿ ವಯಸ್ಸಿನಲ್ಲೂ ಕರಾರುವಾಕ್ ದಾಳಿ ಸಂಘಟಿಸುತ್ತಿರುವ ಜೇಮ್ಸ್ ಅ್ಯಂಡರ್ಸನ್ ಇನ್ನೊಂದೆರೆಡು ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಇದರ ನಡುವೆ 11 ವಿಕೆಟ್ ಕಬಳಿಸಿದರೆ ಶೇನ್ ವಾರ್ನ್ (708) ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ನಿರ್ಮಿಸಬಹುದು.
ಇದನ್ನೂ ಓದಿ: James Anderson: 1111 ವಿಕೆಟ್ಸ್: ಸಾಟಿಯಿಲ್ಲದ ಸರದಾರ ಜೇಮ್ಸ್ ಅ್ಯಂಡರ್ಸನ್
ಜೇಮ್ಸ್ ಅ್ಯಂಡರ್ಸನ್ಗೆ ಇದು ಭಾರತದಲ್ಲಿನ ಕೊನೆಯ ಟೆಸ್ಟ್ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಇಂಗ್ಲೆಂಡ್ ತಂಡ ಭಾರತದಲ್ಲಿ ತನ್ನ ಮುಂದಿನ ಟೆಸ್ಟ್ ಸರಣಿಯನ್ನು 2027-28 ರಲ್ಲಿ ಆಡಲಿದೆ. ಈ ವೇಳೆಗೆ ಜೇಮ್ಸ್ ಅ್ಯಂಡರ್ಸನ್ ತಂಡದಲ್ಲಿರುವುದು ಅನುಮಾನ. ಹೀಗಾಗಿಯೇ ಭಾರತದಲ್ಲೇ ವಿಶ್ವ ದಾಖಲೆ ನಿರ್ಮಿಸಲು ಇದು ಜೇಮ್ಸ್ ಅ್ಯಂಡರ್ಸನ್ ಅವರಿಗೆ ಕೊನೆಯ ಅವಕಾಶ. ಅದರಂತೆ ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ಮೂಲಕ ಅ್ಯಂಡರ್ಸನ್ 700 ವಿಕೆಟ್ಗಳ ಸಾಧನೆ ಮಾಡಲಿದ್ದಾರಾ ಕಾದು ನೋಡಬೇಕಿದೆ.