
ರಣಜಿ ಟೂರ್ನಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ತಂಡ ಫೈನಲ್ಗೆ ಪ್ರವೇಶಿಸಿದೆ. ಕಳೆದ 55 ವರ್ಷಗಳಿಂದ ರಣಜಿ ಪಂದ್ಯವಾಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಈ ಹಿಂದೆ ಹಲವು ಬಾರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದರೂ ಸೆಮಿಫೈನಲ್ ಎಂಬುದು ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಆಖಿಬ್ ನಬಿಯ ಮಾರಕ ದಾಳಿ ನೆರವಿನೊಂದಿಗೆ ಕಾಶ್ಮೀರಿ ಪಡೆ ಸೆಮಿಫೈನಲ್ಗೆ ಲಗ್ಗೆಯಿಟ್ಟಿತ್ತು. ಇದೀಗ ಸೆಮಿಫೈನಲ್ನಲ್ಲಿ ಬಲಿಷ್ಠ ಬಂಗಾಳ ತಂಡವನ್ನು ಬಗ್ಗು ಬಡಿದು ಫೈನಲ್ಗೆ ಎಂಟ್ರಿ ಕೊಟ್ಟಿದೆ.
ಬೆಂಗಾಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು-ಕಾಶ್ಮೀರ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡಕ್ಕೆ ಆಖಿಬ್ ನಬಿ ಮಾರಕವಾಗಿ ಪರಿಣಮಿಸಿದರು. ಕರಾರುವಾಕ್ ದಾಳಿ ಸಂಘಟಿಸಿದ ನಬಿ 26 ಓವರ್ಗಳಲ್ಲಿ 87 ರನ್ ನೀಡಿ 5 ವಿಕೆಟ್ ಉರುಳಿಸಿದರು. ಪರಿಣಾಮ ಬಂಗಾಳ ತಂಡವು 328 ರನ್ಗಳಿಸಿ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಜಮ್ಮು-ಕಾಶ್ಮೀರ ತಂಡಕ್ಕೆ ಮೊಹಮ್ಮದ್ ಶಮಿ ಆಘಾತದ ಮೇಲೆ ಆಘಾತ ನೀಡಿದ್ದರು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ಜಮ್ಮು-ಕಾಶ್ಮೀರ ತಂಡವು 302 ರನ್ಗಳಿಸಿ ಆಲೌಟ್ ಆಗಿದೆ. ಬಂಗಾಳ ಪರ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಶಮಿ 22.1 ಓವರ್ಗಳಲ್ಲಿ 90 ರನ್ ನೀಡಿ ಬರೋಬ್ಬರಿ 8 ವಿಕೆಟ್ ಕಬಳಿಸಿದ್ದರು.
ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಂಗಾಳ ತಂಡವನ್ನು ಕೇವಲ 99 ರನ್ಗಳಿಗೆ ಆಲೌಟ್ ಮಾಡುವಲ್ಲಿ ಜಮ್ಮು-ಕಾಶ್ಮೀರ ವೇಗಿಗಳು ಯಶಸ್ವಿಯಾಗಿದ್ದಾರೆ. ಜಮ್ಮು-ಕಾಶ್ಮೀರ ಪರ ಆಖಿಬ್ ನಬಿ ಹಾಗೂ ಸುನಿಲ್ ಕುಮಾರ್ ತಲಾ 4 ವಿಕೆಟ್ ಪಡೆದು ಮಿಂಚಿದರು.
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 126 ರನ್ಗಳ ಗುರಿ ಪಡೆದ ಜಮ್ಮು-ಕಾಶ್ಮೀರ ತಂಡ ಕೂಡ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 50 ರನ್ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್ಗಳನ್ನು ಕಳೆದುಕೊಂಡಿದ್ದರು.
ಈ ಹಂತದಲ್ಲಿ ಜೊತೆಗೂಡಿದ ವಂಶಜ್ ಶರ್ಮಾ (43) ಹಾಗೂ ಅಬ್ದುಲ್ ಸಮದ್ (30) ಅರ್ಧಶತಕದ ಜೊತೆಯಾಟವಾಡಿದರು. ಈ ಮೂಲಕ 126 ರನ್ ಬಾರಿಸಿ ಜಮ್ಮು-ಕಾಶ್ಮೀರ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಜಮ್ಮು-ಕಾಶ್ಮೀರ ತಂಡ ಚೊಚ್ಚಲ ಬಾರಿಗೆ ರಣಜಿ ಟೂರ್ನಿಯ ಫೈನಲ್ಗೇರಿದೆ.
ಜಮ್ಮು- ಕಾಶ್ಮೀರ ಪ್ಲೇಯಿಂಗ್ 11: ಶುಭಂ ಖಜುರಿಯಾ , ಯಾವರ್ ಹಸನ್ , ಶುಭಂ ಪುಂಡಿರ್ , ಪರಾಸ್ ಡೋಗ್ರಾ (ನಾಯಕ) , ಅಬ್ದುಲ್ ಸಮದ್ , ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್ , ಆಖಿಬ್ ನಬಿ ದಾರ್ , ವಂಶಜ್ ಶರ್ಮಾ , ಯುಧ್ವೀರ್ ಸಿಂಗ್ ಚರಕ್ , ಸುನಿಲ್ ಕುಮಾರ್.
ಇದನ್ನೂ ಓದಿ: ಒಂದು ಶತಕದೊಂದಿಗೆ 4 ವಿಶ್ವ ದಾಖಲೆ ಬರೆದ ಯುವರಾಜ್
ಬಂಗಾಳ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ (ನಾಯಕ) , ಸುದೀಪ್ ಚಟರ್ಜಿ , ಸುದೀಪ್ ಕುಮಾರ್ ಘರಾಮಿ , ಅನುಸ್ತುಪ್ ಮಜುಂದಾರ್ , ಸುಮಂತ ಗುಪ್ತಾ , ಶಕೀರ್ ಹಬೀಬ್ ಗಾಂಧಿ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಸೂರಜ್ ಸಿಂಧು ಜೈಸ್ವಾಲ್ , ಆಕಾಶ್ ದೀಪ್ , ಮೊಹಮ್ಮದ್ ಶಮಿ , ಮುಖೇಶ್ ಕುಮಾರ್.