2024 ರ ಟಿ20 ವಿಶ್ವಕಪ್ನ (T20 World Cup 2024) ಆತಿಥ್ಯದ ಜವಬ್ದಾರಿ ವಹಿಸಿಕೊಂಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ (Cricket West Indies) ಬಿಗ್ ಶಾಕ್ ಎದುರಾಗಿದೆ. ಈ ಚುಟುಕು ಸಮರಕ್ಕೆ ಇನ್ನೇನೂ ಕೆಲವೇ ತಿಂಗಳುಗಳಿರುವಾಗ ವಿಂಡೀಸ್ ತಂಡದ ಮೂವರು ಸ್ಟಾರ್ ಕ್ರಿಕೆಟಿಗರು ಕೇಂದ್ರ ಒಪ್ಪಂದಿಂದ ಹಿಂದೆ ಸರಿದಿದ್ದಾರೆ. ವಾಸ್ತವವಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 2023-2024ರ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದೆ. ಆದರೆ ಈ ಕೇಂದ್ರ ಒಪ್ಪಂದವನ್ನು ಮಾಜಿ ನಾಯಕ ಜೇಸನ್ ಹೋಲ್ಡರ್, ನಿಕೋಲಸ್ ಪೂರನ್ (Nicholas Pooran and Jason Holder) ಮತ್ತು ಆಲ್ ರೌಂಡರ್ ಕೈಲ್ ಮೇಯರ್ಸ್ ತಿರಸ್ಕರಿಸಿದ್ದಾರೆ. ಟಿ20 ವಿಶ್ವಕಪ್ ಆಯೋಜಿಸುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಇದು ಹೊಡೆತ ನೀಡಿದೆ. ಆದರೆ ಸಮಾಧಾನಕರ ಸಂಗತಿಯೆಂದರೆ, ಈ ಮೂವರು ಕ್ರಿಕೆಟಿಗರು ರಾಷ್ಟ್ರೀಯ ತಂಡದ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಉಳಿದಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು 14 ಪುರುಷ ಮತ್ತು 15 ಮಹಿಳಾ ಆಟಗಾರರನ್ನು ಕೇಂದ್ರ ಒಪ್ಪಂದಕ್ಕೆ ಆಯ್ಕೆ ಮಾಡಿದೆ. ಇದರಲ್ಲಿ ಅಲಿಕ್ ಅಥಾನಾಸೆ, ಕೇಸಿ ಕಾರ್ಟಿ, ತೇಜ್ನಾರಾಯಣ ಚಂದ್ರಪಾಲ್ ಮತ್ತು ಸ್ಪಿನ್ನರ್ ಗುಡಾಕೇಶ್ ಮೋತಿ ಅವರನ್ನು ಮೊದಲ ಬಾರಿಗೆ ಪುರುಷರ ಕೇಂದ್ರ ಗುತ್ತಿಗೆಯಲ್ಲಿ ಸೇರಿಸಲಾಗಿದೆ.
WI vs ENG: 2 ವರ್ಷಗಳ ಬಳಿಕ ವಿಂಡೀಸ್ ಟಿ20 ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ಎಂಟ್ರಿ..!
ಟಿ20 ಫ್ರಾಂಚೈಸಿ ಲೀಗ್ ಯುಗದಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಕೇಂದ್ರ ಒಪ್ಪಂದವನ್ನು ತಿರಸ್ಕರಿಸಿದ್ದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಕೀರಾನ್ ಪೊಲಾರ್ಡ್, ಡ್ವೇನ್ ಬ್ರಾವೋ ಮತ್ತು ಕ್ರಿಸ್ ಗೇಲ್ ಕೂಡ 2010 ರಿಂದ ಈ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಕೇಂದ್ರ ಒಪ್ಪಂದಿಂದ ಹಿಂದೆ ಸರಿದಿರುವ ಜೇಸನ್ ಹೋಲ್ಡರ್ ವೆಸ್ಟ್ ಇಂಡೀಸ್ ಪರ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಅವರು 37 ಟೆಸ್ಟ್ ಮತ್ತು 86 ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದಾರೆ. ಇನ್ನು ಯಾವುದೇ ಟೆಸ್ಟ್ ಪಂದ್ಯವನ್ನಾಡದ ನಿಕೋಲಸ್ ಪೂರನ್, 17 ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ನಾಯಕತ್ವ ವಹಿಸಿದ್ದಾರೆ. ಹಾಗೆಯೇ ಬಾಂಗ್ಲಾದೇಶ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಕೈಲ್ ಮೇಯರ್ಸ್ ವೆಸ್ಟ್ ಇಂಡೀಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ವಾಸ್ತವವಾಗಿ ಈ ಮೂವರು ಕ್ರಿಕೆಟಿಗರ ಈ ನಿರ್ಧಾರಕ್ಕೆ ಕಾರಣವೂ ಇದೆ. ಅದೆನೆಂದರೆ ಕೇಂದ್ರ ಒಪ್ಪಂದಕ್ಕೆ ಒಳಪಡುವ ಆಟಗಾರರು ಮಂಡಳಿಯ ನಿಯಮಕ್ಕೆ ಒಳಪಟ್ಟಿರುತ್ತಾರೆ. ಅದರ ಪ್ರಕಾರ ಕೇಂದ್ರ ಒಪ್ಪಂದಕ್ಕೆ ಒಳಪಟ್ಟ ಆಟಗಾರ ಮಂಡಳಿ ಯಾವುದೇ ಸರಣಿಗೆ ತನ್ನನ್ನು ಆಯ್ಕೆ ಮಾಡಿದರೆ ಆತ ಆ ಸರಣಿಯಲ್ಲಿ ಆಡಲೇಬೇಕು. ಆದರೆ ಕೇಂದ್ರ ಗುತ್ತಿಗೆಗೆ ಒಳಪಡದ ಆಟಗಾರಿರಿಗೆ ಕಡ್ಡಾಯವಾಗಿ ಆಡಬೇಕೆನ್ನುವ ನಿಯಮವಿರುವುದಿಲ್ಲ. ಹೀಗಾಗಿ ವಿಶ್ವದ ಇತರ ಟಿ20 ಲೀಗ್ಗಳಲ್ಲಿ ಬ್ಯುಸಿಯಾಗಿರುವ ಈ ಸ್ಟಾರ್ ಆಟಗಾರರು ಕೇಂದ್ರ ಗುತ್ತಿಗೆಗೆ ಒಲ್ಲೆ ಎಂದಿದ್ದಾರೆ.
ಇನ್ನು ಕೈಲ್ ಮೇಯರ್ಸ್ ಮತ್ತು ನಿಕೋಲಸ್ ಪೂರನ್ ಐಪಿಎಲ್ನಲ್ಲಿ ಆಡುತ್ತಾರೆ. ಈ ಇಬ್ಬರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಉಳಿಸಿಕೊಂಡಿದೆ. ಆದರೆ ಜೇಸನ್ ಹೋಲ್ಡರ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಬಿಡುಗಡೆ ಮಾಡಿದೆ. ಜನವರಿಯಲ್ಲಿ ಪ್ರಾರಂಭವಾಗುವ ಟಿ20 ಸೀಸನ್ನಲ್ಲಿ ಪೂರನ್ ಬಿಡುವಿಲ್ಲದ ವೇಳಾಪಟ್ಟಿ ಹೊಂದಿದ್ದಾರೆ. ಅವರು SA20 ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಲಿದ್ದಾರೆ. ಅಲ್ಲದೆ ಅವರನ್ನು ILT20 ಗಾಗಿ MI ಎಮಿರೇಟ್ಸ್ ತಂಡ ಉಳಿಸಿಕೊಂಡಿದೆ. ಇದಾದ ನಂತರ ಐಪಿಎಲ್ ಇದೆ. ಇದರ ನಂತರ ಅವರು 2024 ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.
ಪುರುಷ ಆಟಗಾರರು: ಅಲಿಕ್ ಅಥಾನಾಸೆ, ಕ್ರೈಗ್ ಬ್ರಾಥ್‌ವೈಟ್, ಕೇಸಿ ಕಾರ್ಟಿ, ತೇಜ್ನಾರಾಯಣ ಚಂದ್ರಪಾಲ್, ಜೋಶುವಾ ಡಾ ಸಿಲ್ವಾ, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಗುಡಕೇಶ್ ಮೋತಿ, ರೋವ್‌ಮನ್ ಪೊವೆಲ್, ಕೆಮರ್ ರೋಚ್, ಜೇಡನ್ ಶೆಫರ್ಡ್, ರೊಮರಿಯೊ ಶೆಫರ್ಡ್.
ಮಹಿಳಾ ಆಟಗಾರ್ತಿಯರು: ಆಲಿಯಾ ಅಲೀನ್, ಶಮೈನ್ ಕ್ಯಾಂಪ್‌ಬೆಲ್, ಶಾಮಿಲಿಯಾ ಕಾನ್ನೆಲ್, ಅಫಿ ಫ್ಲೆಚರ್, ಚೆರಿ-ಆನ್ ಫ್ರೇಸರ್, ಶಬಿಕಾ ಘಜ್ನಬಿ, ಜೆನಿಲಿಯಾ ಗ್ಲಾಸ್ಗೋ, ಶೆನೆಟ್ಟಾ ಗ್ರಿಮಂಡ್, ಚಿನೆಲ್ಲೆ ಹೆನ್ರಿ, ಜಡಾ ಜೇಮ್ಸ್, ಮ್ಯಾಂಡಿ ಮಾಂಗ್ರು, ಹೇಲಿ ಮ್ಯಾಥ್ಯೂಸ್, ಕರಿಶ್ಮಾನಿ ಟರೀಮ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ