420ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಜೇಸನ್ ಹೋಲ್ಡರ್

West Indies vs Sri Lanka: ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಟಿ20 ಸರಣಿಯು ಮುಕ್ತಾಯಗೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ ತಂಡ ಜಯ ಸಾಧಿಸಿತ್ತು. ಇದೀಗ ಮೂರನೇ ಮ್ಯಾಚ್​ನಲ್ಲಿ ಜಯ ಸಾಧಿಸಿ ವೆಸ್ಟ್ ಇಂಡೀಸ್ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

420ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಜೇಸನ್ ಹೋಲ್ಡರ್
Jason Holder
Image Credit source: Espn

Updated on: Jun 15, 2026 | 12:52 PM

ವೆಸ್ಟ್ ಇಂಡೀಸ್ ತಂಡವು ಕೊನೆಗೂ ಟಿ20 ಸರಣಿ ಗೆದ್ದುಕೊಂಡಿದೆ. ಅದು ಸಹ ಒಂದು ವರ್ಷಗಳ ಬಳಿಕ. ಅಂದರೆ ಕಳೆದುಕೊಂದು ವರ್ಷದಿಂದ ವಿಂಡೀಸ್ ಪಾಲಿಗೆ ಮರೀಚಿಕೆಯಾಗಿದ್ದ ಟಿ20 ಸರಣಿ ಗೆಲುವು ಕೊನೆಗೂ 2-1 ಅಂತರದಿಂದ ದಕ್ಕಿದೆ. ಜಮೈಕಾದ ಸೆಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 169 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 53 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ಶೆರ್ಫೇನ್ ರದರ್​ಫೋರ್ಡ್​ ಹಾಗೂ ರೋವ್​ಮನ್ ಪೊವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ 33 ರನ್​ ಬಾರಿಸಿ ಪೊವೆಲ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಕೊನೆಯ 12 ಎಸೆತಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 29 ರನ್​ಗಳ ಅವಶ್ಯಕತೆಯಿತ್ತು.

ಈ ವೇಳೆ ಕ್ರೀಸ್​ಗೆ ಆಗಮಿಸಿದ ಜೇಸನ್ ಹೋಲ್ಡರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದುಷ್ಮಂತ ಚಮೀರಾ ಎಸೆದ 19ನೇ ಓವರ್​ಗಳಲ್ಲಿ 6 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಹೋಲ್ಡರ್ 20 ರನ್​ ಚಚ್ಚಿದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಅದರಂತೆ ಅಂತಿಮ ಓವರ್​ನಲ್ಲಿ 6 ರನ್​ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡವು 19.4 ಓವರ್​ಗಳಲ್ಲಿ 170 ರನ್​ ಬಾರಿಸುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

420ರ ಸ್ಟ್ರೈಕ್​ ರೇಟ್​:

ಈ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಎದುರಿಸಿದ್ದು ಕೇವಲ 5 ಎಸೆತಗಳನ್ನು ಮಾತ್ರ. ಈ ಐದು ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್​ಗಳೊಂದಿಗೆ 21 ರನ್ ಬಾರಿಸಿದ್ದರು. ಅಂದರೆ ಬರೋಬ್ಬರಿ 420 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ದೌರ್ಬಲ್ಯ ಬಹಿರಂಗ? ಮತ್ತೆ ವಿಫಲನಾದ ವೈಭವ್ ಸೂರ್ಯವಂಶಿ..!

ಶ್ರೀಲಂಕಾ ಕಾಯುವಿಕೆ ಮುಂದುವರಿಕೆ:

ಈ ಸೋಲಿನೊಂದಿಗೆ ಕೆರಿಬಿಯನ್ ದ್ವೀಪದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಗೆಲ್ಲುವ ಶ್ರೀಲಂಕಾ ತಂಡದ ಅತೀ ದೊಡ್ಡ ಕನಸು ಮುಂದುವರೆದಿದೆ. ಅಂದರೆ ವೆಸ್ಟ್ ಇಂಡೀಸ್ ನೆಲದಲ್ಲಿ ವಿಂಡೀಸ್ ಪಡೆಯ ವಿರುದ್ಧ ಶ್ರೀಲಂಕಾ ತಂಡ ಈವರೆಗೆ ಒಂದೇ ಒಂದು ಟಿ20 ಸರಣಿ ಗೆದ್ದಿಲ್ಲ. ಈ ಬಾರಿ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ 19ನೇ ಓವರ್​ನಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿ ಜೇಸನ್ ಹೋಲ್ಡರ್ ಶ್ರೀಲಂಕಾ ತಂಡದ ಕನಸನ್ನು ಭಗ್ನಗೊಳಿಸಿದ್ದಾರೆ.

 

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us