ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಆವೃತ್ತಿ (Indian Premier League) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ತಿಂಗಳು ಮಾರ್ಚ್ 26 ರಂದು ಈ ಮಿಲಿಯನ್ ಡಾಲರ್ ಐಪಿಎಲ್ 2022 ಟೂರ್ನಿಗೆ ಚಾಲನೆ ಸಿಗಲಿದ್ದು, ಮೇ 29 ರಂದು ಫೈನಲ್ ಪಂದ್ಯ ಏರ್ಪಡಿಸಲಾಗಿದೆ. 2022ರ ಐಪಿಎಲ್ (IPL 2022) 10 ತಂಡಗಳ ಸೀಸನ್ ಆಗಿರಲಿದ್ದು, 74 ಪಂದ್ಯಗಳು ನಡೆಯಲಿದೆ. ಮುಂಬೈ ಮತ್ತು ಪುಣೆಯ ನಾಲ್ಕು ಸ್ಥಳಗಳಲ್ಲಿ 70 ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲಾಗಿದೆ. ಎರಡು ಹೊಸ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೊದಲ ಬಾರಿಗೆ ಅಗ್ನಿ ಪರೀಕ್ಷೆಗೆ ಒಳಗಾಗಲಿದೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ಗೆ ಹೊಸ ತಂಡವಾಗಿ ಕಾಲಿಟ್ಟಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ದೊಡ್ಡ ಆಘಾತ ಉಂಟಾಗಿದೆ. 2 ಕೋಟಿ ಕೊಟ್ಟು ಖರೀದಿ ಮಾಡಿದ್ದ ಸ್ಟಾರ್ ಆಟಗಾರ ನಾನು ಐಪಿಎಲ್ನಲ್ಲಿ ಆಡುವುದಿಲ್ಲ ಎಂದು ಐಪಿಎಲ್ 2022 ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ.
ಐಪಿಎಲ್ 2022 ಮೆಗಾ ಹರಾಜಿನಲ್ಲಿ 1.5 ಕೋಟಿ ಮೂಲಬೆಲೆ ಹೊಂದಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಓಪನರ್ ಜೇಸನ್ ರಾಯ್ ಅವರು ಐಪಿಎಲ್ 2022 ರಿಂದ ಹಿಂದೆ ಸರಿದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡ ಇವರನ್ನು 2 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಇವರನ್ನ ಗುಜರಾತ್ ಶುಭ್ಮನ್ ಗಿಲ್ ಜೊತೆ ಓಪನರ್ ಆಗಿ ಕಣಕ್ಕಿಳಿಸುವ ಪ್ಲಾನ್ನಲ್ಲಿತ್ತು. ಆದರೀಗ ಟೂರ್ನಿ ಆರಂಭದಕ್ಕೆ ಕೆಲವು ದಿನಗಳಿವೆ ಎನ್ನುವಷ್ಟರಲ್ಲಿ ರಾಯ್ ವೈಯಕ್ತಿಕ ಕಾರಣ ನೀಡಿ ಐಪಿಎಲ್ 2022 ಆಡುವುದಿಲ್ಲ ಎಂದಿದ್ದಾರೆ.
ಇತ್ತೀಚೆಗಷ್ಟೆ ಜೇಸನ್ ರಾಯ್ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಪಾಲ್ಗೊಂಡಿದ್ದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್ಮನ್ ಆಗಿದ್ದರು. ಒಂದು ಶತಕ, ಎರಡು ಅರ್ಧಶತಕದಿಂದ 303 ರನ್ ಗಳಿಸಿ 170.22 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಸತತವಾಗಿ ಬಯೋ ಬಬಲ್ನಲ್ಲಿ ಇರುತ್ತಿರುವ ಕಾರಣ ವಿಶ್ರಾಂತಿಗಾಗಿ ಐಪಿಎಲ್ ತೊರೆದಿದ್ದಾರೆ ಎಂದು ಹೇಳಲಾಗಿದೆ. ಅಂತಿಮ ಹಂತದಲ್ಲಿ ರಾಯ್ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಐಪಿಎಲ್ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಇವರನ್ನು ಮೂಲಬೆಲೆ 1.5 ಕೋಟಿಗೆ ಖರೀದಿ ಮಾಡಿತ್ತು. ಆಗ ಕೂಡ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹೊರಗುಳಿದಿದ್ದರು.
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ವೇಗಿ ಲಾಕಿ ಫರ್ಗ್ಯುಸನ್ ಅವರನ್ನು 10 ಕೋಟಿ ನೀಡಿ ಖರೀದಿಸಿದರೆ, ಆಲ್ ರೌಂಡರ್ ರಾಹುಲ್ ತೆವಾಟಿಯಾಗೆ 9 ಕೋಟಿ ಹೂಡಿಕೆ ಮಾಡಿತ್ತು. ಇನ್ನುಳಿದಂತೆ ಮೊಹಮ್ಮದ್ ಶಮಿ 6.25 ಕೋಟಿ, ಅಭಿನವ್ ಸದರಾಂಗಣಿ 2.6 ಕೋಟಿ, ನೂರ್ ಅಹ್ಮದ್ 30 ಲಕ್ಷ, ಸಾಯಿ ಕಿಶೋರ್ 3 ಕೋಟಿ, ಡೊಮಿನಿಕ್ ಡ್ರೆಕ್ಸ್ 1.1 ಕೋಟಿ, ವಿಜಯ್ ಶಂಕರ್ 1.4 ಕೋಟಿ, ಜಯಂತ್ ಯಾದವ್ 1.7 ಕೋಟಿ, ದರ್ಶನ್ ನಲ್ಕಂಡೆ 20 ಲಕ್ಷ, ಯಶ್ ದಯಾಳ್ 3.2 ಕೋಟಿ, ಅಲ್ಜಾರಿ ಜೋಸೆಫ್ 2.4 ಕೋಟಿ, ಪ್ರದೀಪ್ ಸಾಂಗ್ವಾನ್ 20 ಲಕ್ಷ, ಗುರುಕೀರತ್ ಸಿಂಗ್ 50 ಲಕ್ಷ, ವರುಣ್ ಆ್ಯರೋನ್ 50 ಲಕ್ಷ, ಡೇವಿಡ್ ಮಿಲ್ಲರ್ 3 ಕೋಟಿ, ವೃದ್ಧಿಮಾನ್ ಸಾಹ 1.9 ಕೋಟಿ ಮತ್ತು ಮ್ಯಾಥ್ಯೂ ವೇಡ್ 2.4 ಕೋಟಿ ಪಡೆದು ಸೇರ್ಪಡೆಗೊಂಡಿದ್ದರು.
ಗುಜರಾತ್ ಟೈಟಾನ್ಸ್ ಈಗ ಒಟ್ಟು 21 ಆಟಗಾರರನ್ನು ಹೊಂದಿದ್ದು, ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ಹಾರ್ದಿಕ್ ಪಾಂಡ್ಯ (ನಾಯಕ), ರಶೀದ್ ಖಾನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ಜೋಸೆಫ್ ದಯಾಳ್, ಪ್ರದೀಪ್, ಅಲ್ಜಾರಿ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ವರುಣ್ ಆರೋನ್ ಮತ್ತು ಬಿ ಸಾಯಿ ಸುದರ್ಶನ್.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ರಷ್ಯಾವನ್ನು ಹೊರಗಿಡುವಂತೆ ಕ್ರೀಡಾ ಒಕ್ಕೂಟಗಳಿಗೆ IOC ಶಿಫಾರಸು..!
Published On - 7:36 am, Tue, 1 March 22