ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಭಾರತ ತಂಡಕ್ಕೆ ಶೀಘ್ರದಲ್ಲೇ ಕಂಬ್ಯಾಕ್ ಮಾಡುವುದನ್ನು ಘೋಷಿಸಿದ್ದಾರೆ. ಅದು ಕೂಡ ಖ್ಯಾತ ಗಾಯಕಿ ಸ್ಕೈಲರ್ ಗ್ರೇ ಅವರ ಕಮಿಂಗ್ ಹೋಮ್…ಗೀತೆಯ ಮೂಲಕ ಎಂಬುದು ವಿಶೇಷ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬುಮ್ರಾ ಹಂಚಿಕೊಂಡಿದ್ದು, ಈ ಮೂಲಕ ಶೀಘ್ರದಲ್ಲೇ ತಂಡಕ್ಕೆ ಪುನರಾಗಮನ ಮಾಡುವುದಾಗಿ ತಿಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಕೊನೆಯ ಬಾರಿ ಕಣಕ್ಕಿಳಿದಿದ್ದು ಸೆಪ್ಟೆಂಬರ್ 19, 2022. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅವರು ಬೆನ್ನು ನೋವಿಗೆ ತುತ್ತಾಗಿದ್ದರು. ಇದಾದ ಬಳಿಕ ಬುಮ್ರಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇದರಿಂದಾಗಿ ಪ್ರಮುಖ ಟೂರ್ನಿಗಳಾದ ಏಷ್ಯಾಕಪ್, ಟಿ20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಗಳನ್ನು ಜಸ್ಪ್ರೀತ್ ಬುಮ್ರಾ ತಪ್ಪಿಸಿಕೊಂಡಿದ್ದರು. ಇದೀಗ ಟೀಮ್ ಇಂಡಿಯಾ ಮತ್ತೊಂದು ಏಷ್ಯಾಕಪ್ ಹೊಸ್ತಿಲಲ್ಲಿದೆ.
ಆಗಸ್ಟ್ 31 ರಿಂದ ಏಷ್ಯಾಕಪ್ 2023 ಶುರುವಾಗಲಿದ್ದು, ಅದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ನೆಸ್ ಸಾಧಿಸಿರುವುದು ಶುಭ ಸುದ್ದಿ ಎನ್ನಬಹುದು. ಏಕೆಂದರೆ ಏಷ್ಯಾಕಪ್ ಬೆನ್ನಲ್ಲೇ ಏಕದಿನ ವಿಶ್ವಕಪ್ ಕೂಡ ಶುರುವಾಗಲಿದೆ.
ಅದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ. ಇತ್ತ ಯಾರ್ಕರ್ ಸ್ಪೆಷಲಿಸ್ಟ್ ಆಗಮನದೊಂದಿಗೆ ಟೀಮ್ ಇಂಡಿಯಾದ ಬೌಲಿಂಗ್ ಲೈನಪ್ ಕೂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಹೀಗಾಗಿಯೇ ಜಸ್ಪ್ರೀತ್ ಬುಮ್ರಾ ಕಂಬ್ಯಾಕ್ ಅನ್ನು ಅಭಿಮಾನಿಗಳು ಕೂಡ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ 10 ತಂಡಗಳು ಫೈನಲ್
ಐರ್ಲೆಂಡ್ ಸರಣಿಯಲ್ಲಿ ಕಂಬ್ಯಾಕ್?
ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ ಶುರು ಮಾಡಿರುವ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಆಗಸ್ಟ್ 18 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು ಟಿ20 ಪಂದ್ಯಗಳನ್ನಾಡಲಿದೆ. ಹೀಗಾಗಿ ಏಷ್ಯಾಕಪ್ಗೂ ಮುನ್ನ ಬುಮ್ರಾ ಐರ್ಲೆಂಡ್ ಸರಣಿಯಲ್ಲಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.