
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗದ ದಾಳಿಯನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಇಲ್ಲಿಯವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ 24.08 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 2 ಬಾರಿ ಇನ್ನಿಂಗ್ಸ್ವೊಂದರಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಹೊಸ ಚೆಂಡಿನಲ್ಲಿ ಬುಮ್ರಾ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಯಾವುದೇ ಬೌಲರ್ ಹೊಸ ಚೆಂಡಿನಿಂದ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವುದು ಮತ್ತು ಅವರ ವಿಕೆಟ್‌ಗಳನ್ನು ಪಡೆಯುವುದು ಬಹಳ ಮುಖ್ಯ. ಆದಾಗ್ಯೂ, ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಇದನ್ನು ಮಾಡಲು ಸಾಧ್ಯವಾಗಿಲ್ಲ. ಈ ಟೆಸ್ಟ್ ಸರಣಿಯಲ್ಲಿ ಇದುವರೆಗೆ ಬುಮ್ರಾ 7 ಬಾರಿ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸಿದ್ದಾರೆ. ಈ ಪೈಕಿ, ಅವರು 5 ಬಾರಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.
ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಹೊಸ ಚೆಂಡಿನಲ್ಲಿ 39 ಓವರ್ ಬೌಲಿಂಗ್ ಮಾಡಿದ್ದಾರೆ. ಈ ಅವಧಿಯಲ್ಲಿ ಅವರು 130 ರನ್ ಬಿಟ್ಟುಕೊಟ್ಟು ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಅಂದರೆ 12 ವಿಕೆಟ್‌ಗಳಲ್ಲಿ ಅವರು ಹೊಸ ಚೆಂಡಿನಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಬುಮ್ರಾ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ಅವರು, ಎರಡನೇ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ಪುನರಾಗಮನ ಮಾಡಿದ ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದರು. ಇದರ ಲಾಭ ಪಡೆದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸುಲಭವಾಗಿನ ಗುರಿ ಬೆನ್ನಟ್ಟಿದರು.
IND vs ENG: ಮ್ಯಾಂಚೆಸ್ಟರ್ನಲ್ಲಿ ಇಮ್ರಾನ್ ಖಾನ್ ದಾಖಲೆಯನ್ನು ಮುರಿಯುತ್ತಾರಾ ಬುಮ್ರಾ?
ಇಂಗ್ಲೆಂಡ್ ವಿರುದ್ಧದ 12 ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ 25.73 ಸರಾಸರಿಯಲ್ಲಿ 49 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಮ್ಯಾಂಚೆಸ್ಟರ್ನಲ್ಲಿ ಬುಮ್ರಾ ಒಂದು ವಿಕೆಟ್ ಪಡೆದರೆ ಇಂಗ್ಲೆಂಡ್‌ನಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಲಿದ್ದಾರೆ. ಇದರೊಂದಿಗೆ, ಬುಮ್ರಾ ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ಬೌಲರ್ ಆಗಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 25 July 25