
ದೇಶೀಯ ಅಂಗಳದ ಏಕದಿನ ಟೂರ್ನಿ ವಿಜಯ ಹಝಾರೆ ಟೂರ್ನಿಗೆ ಚಾಲನೆ ದೊರೆತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕಣಕ್ಕಿಳಿದಿದ್ದಾರೆ. ಇದಾಗ್ಯೂ ಜಸ್ಪ್ರೀತ್ ಬುಮ್ರಾ ಮಾತ್ರ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ಬುಮ್ರಾ ಈ ಬಾರಿ ಕೂಡ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.
ವಿಜಯ ಹಝಾರೆ ಟೂರ್ನಿಯಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿದ್ದಾರೆ. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಏಕದಿನ ಟೂರ್ನಿಯಲ್ಲಿ ಬುಮ್ರಾ ಕಾಣಿಸಿಕೊಳ್ಳುತ್ತಿಲ್ಲ.
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಟಿ20 ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಬುಮ್ರಾ ಮೂರು ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದರು. ಇದೀಗ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ಸಜ್ಜಾಗುತ್ತಿದೆ.
ನ್ಯೂಝಿಲೆಂಡ್ ವಿರುದ್ಧದ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ ಮೂರು ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ 5 ಮ್ಯಾಚ್ಗಳ ಟಿ20 ಸರಣಿ ನಡೆಯಲಿದೆ.
ಆದರೆ ಈ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆಯೂ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಟೀಮ್ ಇಂಡಿಯಾ ವೇಗಿ ಟಿ20 ಸರಣಿ ವೇಳೆ ಮತ್ತೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿ ಶುರುವಾಗುವುದು ಜನವರಿ 21 ರಿಂದ. ಅಲ್ಲಿಯವರೆಗೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಕಲ್ಪಿಸಲು ಟೀಮ್ ಇಂಡಿಯಾ ಆಯ್ಕೆ ಸಮಿತಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಪ್ರಮುಖ ವೇಗಿ. ಕಳೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಅವರು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ದೀರ್ಘಾವಧಿಯ ಪಂದ್ಯಗಳನ್ನಾಡುತ್ತಿರುವುದರಿಂದ ಅವರಿಗೆ ಈ ಸಮಸ್ಯೆ ಎದುರಾಗಿತ್ತು.
ಇದನ್ನೂ ಓದಿ: ಭಾರತದ ವಿರುದ್ಧದ ಸರಣಿಯಿಂದ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದೇಕೆ?
ಇದೇ ಕಾರಣದಿಂದ ಬುಮ್ರಾ ಅವರನ್ನು ಪ್ರಮುಖ ಸರಣಿಗಳಲ್ಲಿ ಮಾತ್ರ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್ಗೂ ಮುನ್ನ ಜಸ್ಪ್ರೀತ್ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಹೀಗಾಗಿ ವಿಜಯ ಹಝಾರೆ ಟೂರ್ನಿ ಹಾಗೂ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಟೀಮ್ ಇಂಡಿಯಾ ವೇಗಿಯನ್ನು ಹೊರಗಿಡಲಾಗಿದೆ.
Published On - 10:25 am, Wed, 24 December 25