BCCI: ಜೈ ಶಾಗೆ ಬಿಸಿಸಿಐ ಅಧ್ಯಕ್ಷ ಪಟ್ಟ! ಶ್ರೀಮಂತ ಕ್ರಿಕೆಟ್​ ಮಂಡಳಿಯಲ್ಲಿ ಮುಗಿಯಿತಾ ಗಂಗೂಲಿ ದಾದಾಗಿರಿ?

| Updated By: ಪೃಥ್ವಿಶಂಕರ

Updated on: Sep 15, 2022 | 2:41 PM

BCCI: ಮುಂದಿನ ತಿಂಗಳು ನಡೆಯಲ್ಲಿರುವ ಬಿಸಿಸಿಐ ಅಧ್ಯಕ್ಷ ಚುನಾವಣೆಯಲ್ಲಿ ದೇಶದ 15 ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ಗಳು ಜೈ ಶಾಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.

BCCI: ಜೈ ಶಾಗೆ ಬಿಸಿಸಿಐ ಅಧ್ಯಕ್ಷ ಪಟ್ಟ! ಶ್ರೀಮಂತ ಕ್ರಿಕೆಟ್​ ಮಂಡಳಿಯಲ್ಲಿ ಮುಗಿಯಿತಾ ಗಂಗೂಲಿ ದಾದಾಗಿರಿ?
Jay Shah and Sourav Ganguly
Follow us on

ಮೂರು ವರ್ಷಗಳಿಂದ ಬಿಸಿಸಿಐ (BCCI) ಕನಸಿನ ಕೂಸಿಗೆ ಸುಪ್ರೀಂ ಕೋರ್ಟ್​ ಸೆ.14 ರಂದು ಜೀವ ತುಂಬಿದೆ. ಗಂಗೂಲಿ- ಜೈ ಶಾರನ್ನು (Sourav Ganguly and Jay Shah) ಬಿಸಿಸಿಐನಲ್ಲಿ ಉಳಿಸಿಕೊಳ್ಳಲಂತಲೇ ಹೂಡಿದ್ದ ತಂತ್ರಕ್ಕೆ ಕೊನೆಗೂ ಜಯ ಸಿಕ್ಕಿದೆ. ಬಿಸಿಸಿಐನ ಸಂವಿಧಾನ ಬದಲಾವಣೆಗೆ ಸಂಬಂಧಿಸಿದಂತೆ ಮೂರು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ (Supreme Court) ಮಹತ್ವದ ತೀರ್ಪು ಅಂತಿಮವಾಗಿ ನಿನ್ನೆ ಹೊರಬಿದ್ದಿದೆ. ಮಂಡಳಿಯ ಅಧಿಕಾರಿಗಳ ಅಧಿಕಾರಾವಧಿ ಮತ್ತು ಕೂಲಿಂಗ್-ಆಫ್ ಅವಧಿಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಸಡಿಲಿಸಿ, ಬಿಸಿಸಿಐ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ತೀರ್ಪಿನ ಅನುಗುಣವಾಗಿ ಗಂಗೂಲಿ ಹಾಗೂ ಜೈ ಶಾ ಇನ್ನೂ ಮೂರು ವರ್ಷ ಬಿಸಿಸಿಐನಲ್ಲಿ ತಮ್ಮ ಆಡಳಿತವನ್ನು ನಡೆಸಬಹುದಾಗಿದೆ. ಆದರೆ ಸುಪ್ರೀಂ ತೀರ್ಪಿನ ಬಳಿಕವು ಬಿಸಿಸಿಐನಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸುತ್ತಿವೆ.

ಗಂಗೂಲಿ ಮುಂದುವರೆಯವ ಸಾಧ್ಯತೆಗಳು ಕಡಿಮೆ

2019ರಲ್ಲಿ ಮೊದಲ ಬಾರಿಗೆ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನಲಂಕರಿಸಿದರೆ, ಕ್ರೇಂದ್ರ ಗೃಹ ಸಚಿವ ಅಮಿತ್ ಶಾ ಮಗ ಜೈ ಶಾ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದರು. ಬಿಸಿಸಿಐನ ಹಿಂದಿನ ಸಂವಿಧಾನದ ಪ್ರಕಾರ ಈ ವರ್ಷಕ್ಕೆ ಈ ಇಬ್ಬರ ಅಧಿಕಾರಾವಧಿ ಬಿಸಿಸಿಐನಲ್ಲಿ ಅಂತ್ಯಗೊಳ್ಳುತ್ತಿತ್ತು. ಆದರೆ, ಸುಪ್ರೀಂ ನೀಡಿದ ತೀರ್ಪಿನಿಂದ ಬಿಸಿಸಿಐ ಬಿಗ್​ಬಾಸ್​ಗಳ ಅಧಿಕಾರಕ್ಕೆ ಇನ್ನೂ 3 ವರ್ಷ ಯಾವುದೇ ಭಂಗವಿಲ್ಲ. ಹೀಗಾಗಿ ಮುಂದಿನ ಮೂರು ವರ್ಷಗಳ ತನಕ ಈ ಇಬ್ಬರೇ ಆಯಾ ಹುದ್ದೆಗಳಲ್ಲಿ ಮುಂದುವರೆಯುತ್ತಾರೆ ಎಂದು ಲೆಕ್ಕಿಸಲಾಗಿತ್ತು. ಆದರೀಗ ಅಧ್ಯಕ್ಷ ಹುದ್ದೆಯಲ್ಲಿ ಗಂಗೂಲಿ ಮುಂದುವರೆಯವ ಸಾಧ್ಯತೆಗಳು ಕಡಿಮೆ ಎಂದು ವರದಿಯಾಗಿದೆ. ಮುಂಬರುವ ಬಿಸಿಸಿಐ ಚುನಾವಣೆಯಿಂದ ಗಂಗೂಲಿ ಹಿಂದೆ ಸರಿಯುವ ಸೂಚನೆಗಳಿದ್ದು, ಮಂಡಳಿಯ ಅಧ್ಯಕ್ಷರಾಗಲು ಜಯ್ ಶಾಗೆ ಬೆಂಬಲ ಹೆಚ್ಚುತ್ತಿದೆ.

ರಾಜ್ಯ ಕ್ರಿಕೆಟ್​ ಮಂಡಳಿಗಳ ಒಲವು ಜೈ ಶಾ ಮೇಲೆ

ಇಂಡಿಯನ್ ಎಕ್ಸ್​ಪ್ರೆಸ್ ವರದಿಯ ಪ್ರಕಾರ, ದೇಶದ ಎಲ್ಲಾ ರಾಜ್ಯ ಕ್ರಿಕೆಟ್​ ಮಂಡಳಿಗಳ ಒಲವು ಜೈ ಶಾ ಮೇಲಿದ್ದು, ಈ ಮಂಡಳಿಗಳು ಜೈ ಶಾರನ್ನು ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಲು ಉತ್ಸುಕವಾಗಿವೆ. ಮುಂದಿನ ತಿಂಗಳು ನಡೆಯಲ್ಲಿರುವ ಬಿಸಿಸಿಐ ಅಧ್ಯಕ್ಷ ಚುನಾವಣೆಯಲ್ಲಿ ದೇಶದ 15 ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ಗಳು ಜೈ ಶಾಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ. ಅಲ್ಲದೆ ಎಲ್ಲಾ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್ಗಳು ಜೈ ಶಾಗೆ ಬೆಂಬಲವಾಗಿ ನಿಲ್ಲಲ್ಲು ಸಿದ್ದವಾಗಿವೆ ಎಂದು ರಾಜ್ಯ ಕ್ರಿಕೆಟ್ ಸಂಘದ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೊನಾದಂತಹ ಪೀಡುಗಿನ ನಡುವೆಯೂ ಬಿಸಿಸಿಐ ಐಪಿಎಲ್ ಹಾಗೂ ಇತರೆ ದೇಶೀ ಪಂದ್ಯಾವಳಿಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿತ್ತು. ಇದಕ್ಕೆಲ್ಲ ಪ್ರಮುಖ ಕಾರಣ ಜೈ ಶಾ ಎಂಬುದು ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ಗಳ ಅಭಿಪ್ರಾಯವಾಗಿದೆ. ಅಲ್ಲದೆ ಐಪಿಎಲ್ ಇಷ್ಟೋಂದು ಜನಪ್ರಿಯತೆಗಳಿಸಲು ಹಾಗೂ ಮಾಧ್ಯಮ ಹಕ್ಕು ಹರಾಜಿನಲ್ಲೂ ಬಿಸಿಸಿಐಗೆ ಅಧಿಕ ಲಾಭ ಬರುವಲ್ಲಿಯೂ ಜೈ ಶಾ ಪ್ರಮುಖ ಕಾರಣರು ಎಂಬುದು ಮಂಡಳಿಗಳ ವಾದವಾಗಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಜೈ ಶಾ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದು ಖಚಿತವಾಗಿದೆ ಎಂದು ಮೂಲಗಳು ಹೇಳುತ್ತಿವೆ.

ಮುಂದಿನ ತಿಂಗಳು ಬಿಸಿಸಿಐ ಚುನಾವಣೆ?

ಈಗ ಇದೆಲ್ಲ ಸಾಧ್ಯವೋ ಇಲ್ಲವೋ ಎಂಬುದು ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಿಂದ ಗೊತ್ತಾಗಲಿದೆ. 2019 ರ ಅಕ್ಟೋಬರ್‌ನಲ್ಲಿ ಬಿಸಿಸಿಐನ ಜವಾಬ್ದಾರಿ ವಹಿಸಿಕೊಂಡ ಗಂಗೂಲಿ, ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರ ಅಧಿಕಾರಾವಧಿಯು ಈ ತಿಂಗಳು ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶೀಘ್ರದಲ್ಲೇ ವಾರ್ಷಿಕ ಸಾಮಾನ್ಯ ಸಭೆ ಆಯೋಜಿಸಬಹುದು, ನಂತರ ಮುಂದಿನ ತಿಂಗಳು ಚುನಾವಣೆ ನಡೆಸಬಹುದು. ಅಲ್ಲದೆ, ಈ ತಿಂಗಳ ಅಂತ್ಯದೊಳಗೆ ರಾಜ್ಯ ಅಸೋಸಿಯೇಷನ್ ​​ಚುನಾವಣೆಗಳು ಸಹ ನಡೆಯಬಹುದು.

Published On - 2:41 pm, Thu, 15 September 22