ಜೆಮಿಮಾ ಅರ್ಧಶತಕ: ಫೈನಲ್ಗೆ ಪ್ರವೇಶಿಸಿದ TKR
Womens Caribbean Premier League 2024: ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು ಮೂರು ತಂಡಗಳು ಕಣಕ್ಕಿಳಿದಿವೆ. ಈ ತಂಡಗಳಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ಟೀಮ್ ಈಗಾಗಲೇ ಎಲಿಮಿನೇಟ್ ಆಗಿದ್ದು, ಇದೀಗ ಬಾರ್ಬಡೋಸ್ ರಾಯಲ್ಸ್ ಹಾಗೂ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡಗಳು ಫೈನಲ್ಗೆ ಪ್ರವೇಶಿಸಿದೆ.
ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನ 6ನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸುವ ಮೂಲಕ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡ ಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದ ಗೆಲುವಿನ ರೂವಾರಿ ಟೀಮ್ ಇಂಡಿಯಾ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಎಂಬುದು ವಿಶೇಷ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾರ್ಬಡೋಸ್ ರಾಯಲ್ಸ್ ತಂಡವು ಚಾಮರಿ ಅಥಾಪತ್ತು (70) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿತು.
131 ರನ್ಗಳ ಗುರಿ ಬೆನ್ನತ್ತಿದ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 18 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಟಿಕೆಆರ್ ತಂಡಕ್ಕೆ ಜೆಮಿಮಾ ರೊಡ್ರಿಗಸ್ ಆಸರೆಯಾಗಿ ನಿಂತರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಜೆಮಿಮಾ ರನ್ ಪೇರಿಸುತ್ತಾ ಸಾಗಿದರೆ, ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಿತ್ತು.
ಇದಾಗ್ಯೂ ಕ್ರೀಸ್ ಕಚ್ಚಿ ನಿಂತ ಜೆಮಿಮಾ 50 ಎಸೆತಗಳಲ್ಲಿ 4 ಫೋರ್ಗಳೊಂದಿಗೆ ಅಜೇಯ 59 ರನ್ ಬಾರಿಸಿದರು. ಈ ಮೂಲಕ 19.4 ಓವರ್ಗಳಲ್ಲಿ ತಂಡವನ್ನು ಗೆಲುವಿನ ಗುರಿ ತಲುಪಿಸುವ ಮೂಲಕ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ಗೆ ಪ್ರವೇಶಿಸಿದೆ. ಇನ್ನು ಆಗಸ್ಟ್ 30 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಬಾರ್ಬಡೋಸ್ ರಾಯಲ್ಸ್ ಹಾಗೂ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ.
Published On - 2:56 pm, Wed, 28 August 24