- Kannada News Photo gallery Cricket photos Ramiz Raja blames Indian Batters for Pakistan's shameful defeat vs Bangladesh
‘ಟೀಂ ಇಂಡಿಯಾದಿಂದ ಪಾಕ್ ವೇಗಿಗಳಿಗೆ ಬೆಲೆ ಇಲ್ಲದಂತಾಯಿತು’; ಮಾಜಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ
PAK vs BAN: ಬಾಂಗ್ಲಾದೇಶ ವಿರುದ್ಧದ ಪಾಕ್ ತಂಡದ ಸೋಲಿನ ವಿಶ್ಲೇಷಣೆ ಮಾಡಿರುವ ರಮೀಜ್ ರಾಜಾ, ‘ಮೊದಲನೆಯದಾಗಿ ತಂಡದ ಆಯ್ಕೆಯಲ್ಲಿ ತಪ್ಪಾಗಿದೆ. ಸ್ಪಿನ್ನರ್ ಇಲ್ಲದೆ ತಂಡವನ್ನು ಕಣಕ್ಕಿಳಿಸಲಾಗಿತ್ತು. ಎರಡನೆಯದಾಗಿ, ನಮ್ಮ ವೇಗದ ಬೌಲರ್‌ಗಳು ಗಳಿಸಿದ್ದ ಖ್ಯಾತಿ ಈಗ ಇಲ್ಲವಾಗಿದೆ. ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ, ನಮ್ಮ ವೇಗದ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸಿದ್ದೆ ಇದಕ್ಕೆಲ್ಲ ಕಾರಣ ಎಂದಿದ್ದಾರೆ.
Updated on: Aug 28, 2024 | 5:03 PM

ಪ್ರಸ್ತುತ ಪಾಕಿಸ್ತಾನ ತಂಡ ತನ್ನ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳಿಂದ ಸೋತಿರುವ ಪಾಕ್ ತಂಡ ತನ್ನ ದೇಶದಲ್ಲೇ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿದೆ. ತಂಡದ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ತಮ್ಮದೇ ಆಟಗಾರರು ಮತ್ತು ತಂಡವನ್ನು ಟೀಕಿಸುತ್ತಿದ್ದಾರೆ.

ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅಚ್ಚರಿಯ ಹೇಳಿಕೆ ನೀಡಿದ್ದು, ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನದ ಸೋಲಿಗೆ ಟೀಂ ಇಂಡಿಯಾವೇ ಕಾರಣ ಎಂದು ಆರೋಪಿಸಿದ್ದಾರೆ. ಕಳೆದ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳು, ಪಾಕಿಸ್ತಾನದ ಬೌಲಿಂಗ್ ವಿಭಾಗವನ್ನು ಬೆಂಡೆತ್ತಿದ್ದೆ ಕಾರಣ ಎಂದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಾಕ್ ತಂಡದ ಸೋಲಿನ ವಿಶ್ಲೇಷಣೆ ಮಾಡಿರುವ ರಮೀಜ್ ರಾಜಾ, ‘ಮೊದಲನೆಯದಾಗಿ ತಂಡದ ಆಯ್ಕೆಯಲ್ಲಿ ತಪ್ಪಾಗಿದೆ. ಸ್ಪಿನ್ನರ್ ಇಲ್ಲದೆ ತಂಡವನ್ನು ಕಣಕ್ಕಿಳಿಸಲಾಗಿತ್ತು. ಎರಡನೆಯದಾಗಿ, ನಮ್ಮ ವೇಗದ ಬೌಲರ್‌ಗಳು ಗಳಿಸಿದ್ದ ಖ್ಯಾತಿ ಈಗ ಇಲ್ಲವಾಗಿದೆ. ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ, ನಮ್ಮ ವೇಗದ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸಿತ್ತು.

ಆ ನಂತರವೇ ನಮ್ಮ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆ ಎದುರಾಯಿತು. ಹೀಗಾಗಿ ತಂಡ ಸತತ ಸೋಲುಗಳಿಗೆ ಗುರಿಯಾಯಿತು. ಕಳೆದ ಏಷ್ಯಾಕಪ್‌ನಲ್ಲಿ ಅದರಲ್ಲೂ ವೇಗದ ಬೌಲಿಂಗ್‌ಗೆ ಅನುಕೂಲಕರವಾದ ಪರಿಸ್ಥಿತಿಗಳಲ್ಲಿ ಟೀಂ ಇಂಡಿಯಾ ನಮ್ಮ ಬೌಲರ್ಗಳ ಮೇಲೆ ಪ್ರತಿ ದಾಳಿ ನಡೆಸಿತು. ಅದಕ್ಕೂ ಮುನ್ನ ನಮ್ಮ ಬೌಲರ್‌ಗಳನ್ನು ಎದುರಿಸುವುದು ಜಗತ್ತಿಗೆ ನಿಗೂಢವಾಗಿತ್ತು.

ಆದರೆ ಪಾಕ್ ಬೌಲರ್‌ಗಳನ್ನು ದಂಡಿಸಲು ಇರುವ ಮಾರ್ಗವೆಂದರೆ ಅದು ಕೇವಲ ಪ್ರತಿದಾಳಿ/ ಆಕ್ರಮಣಕಾರಿ ಬ್ಯಾಟಿಂಗ್ ಎಂಬುದನ್ನು ಟೀಂ ಇಂಡಿಯಾ ಇಡೀ ಜಗತ್ತಿಗೆ ತೋರಿಸಿಕೊಟ್ಟಿತು. ಇದರ ಜೊತೆಗೆ ನಮ್ಮ ಬೌಲರ್‌ಗಳು ಎಸೆಯುವ ವೇಗ ಕಡಿಮೆಯಾಗಿದೆ ಮತ್ತು ಅವರ ಕೌಶಲ್ಯವೂ ಕಡಿಮೆಯಾಗಿದೆ ಎಂದು ರಮೀಜ್ ರಾಜಾ ದೂರಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ವೇಗದ ಬೌಲರ್‌ಗಳು ಹೆಚ್ಚು ಆಕ್ರಮಣಕಾರಿಯಾಗಿ ಕಾಣುತ್ತಿದ್ದರು. ಆದರೆ ನಮ್ಮ ಬೌಲರ್‌ಗಳಲ್ಲಿ ಅದು ಕಾಣಲಿಲ್ಲ. ಜೊತೆಗೆ ನಾಯಕ ಶಾನ್ ಮಸೂದ್ ಕೂಡ ಪರಿಸ್ಥಿತಿಗಳನ್ನು, ಅರ್ಥಮಾಡಿಕೊಳ್ಳುವಲ್ಲಿ ಎಡವಿದರು. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಸೋಲಲು ಅಲ್ಲಿನ ಪರಿಸ್ಥಿತಿಗಳು ಕಾರಣ ಎಂಬುದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ.

ಆದರೆ ಈಗ ನೀವು ತವರಿನ ಪರಿಸ್ಥಿತಿಯಲ್ಲಿ ಸೋಲುತ್ತಿರುವಿರಿ ಮತ್ತು ಅದು ಕೂಡ ಬಾಂಗ್ಲಾದೇಶದಂತಹ ತಂಡದ ವಿರುದ್ಧ ಎಂಬುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಶಾನ್ ಮಸೂದ್ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿಲ್ಲ ಎಂದು ನಾನು ಭಾವಿಸುತ್ತೇನೆ. ಮಸೂದ್ ತನ್ನ ಬ್ಯಾಟಿಂಗ್ ಅನ್ನು ಸುಧಾರಿಸಬೇಕು ಮತ್ತು ನಿಮಗೆ ಆಟದ ಬಗ್ಗೆ ಸ್ವಲ್ಪ ಜ್ಞಾನವಿದೆ ಎಂದು ತೋರಿಸಬೇಕು ಎಂದರು.




