ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಅವರ ಸರ್ವಶ್ರೇಷ್ಠ ದಾಖಲೆ ಮುರಿಯಲಿದ್ದಾರೆ. ಹೀಗೆ ಹೇಳಿದ್ದು ಮತ್ಯಾರೂ ಅಲ್ಲ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ 32ನೇ ಟೆಸ್ಟ್ ಶತಕ ಪೂರೈಸಿರುವ ಜೋ ರೂಟ್ ಈಗ ರನ್ ಸರದಾರರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಅತ್ತ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಇಂಗ್ಲೆಂಡ್ ಬ್ಯಾಟರ್ಗೆ ಅತ್ಯುತ್ತಮ ಅವಕಾಶವಿದೆ ಎಂದು ಮೈಕೆಲ್ ವಾನ್ ಹೇಳಿದ್ದಾರೆ.
ವಾನ್ ಅವರ ಪ್ರಕಾರ, ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಬರೆದಿಟ್ಟಿರುವ ಅತೀ ಹೆಚ್ಚು ರನ್ಗಳ ದಾಖಲೆಯನ್ನು ಮುರಿಯುವುದು ಬಹುತೇಕ ಖಚಿತ. ಏಕೆಂದರೆ ಪ್ರಸ್ತುತ ರೂಟ್ ಅವರ ಫಾರ್ಮ್ ಗಮನಿಸಿದರೆ ಇದು ಅಸಾಧ್ಯವಂತು ಅಲ್ಲ ಎಂದೆನಿಸುತ್ತದೆ.
ಜೋ ರೂಟ್ ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಇದೇ ಫಾರ್ಮ್ನಲ್ಲಿ ಬ್ಯಾಟಿಂಗ್ ಮುಂದುವರೆಸಿದರೆ, ಖಂಡಿತವಾಗಿಯೂ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಬಹುದು. ಇತ್ತೀಚಿನ ದಿನಗಳಲ್ಲಿ ಅವರು ಅತ್ಯಂತ ಜಾಗರೂಕರಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಬೇಗನೆ ಸ್ಕೋರ್ ಮಾಡುತ್ತಿದ್ದಾರೆ. ಹೀಗಾಗಿ ಮುಂಬರುವ ಸರಣಿಗಳ ಮೂಲಕ ಸಚಿನ್ ಅವರ ಸರ್ವಶ್ರೇಷ್ಠ ದಾಖಲೆಯನ್ನು ರೂಟ್ ತಮ್ಮದಾಗಿಸಿಕೊಳ್ಳುವುದನ್ನು ಎದುರು ನೋಡಬಹುದು ಎಂದು ಮೈಕೆಲ್ ವಾನ್ ಹೇಳಿದ್ದಾರೆ.
33 ವರ್ಷದ ಜೋ ರೂಟ್ಗೆ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಟೆಸ್ಟ್ ರನ್ಗಳ ದಾಖಲೆ ಮುರಿಯಲು ಬೇಕಿರುವುದು ಕೇವಲ 3,982 ರನ್ಸ್ ಮಾತ್ರ. ಈಗಾಗಲೇ 32 ಶತಕ ಸಿಡಿಸಿರುವ ಜೋ ರೂಟ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದು, ಹೀಗಾಗಿ ಮುಂಬರುವ ಸರಣಿಗಳ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯತ್ತ ದಾಪುಗಾಲಿಟ್ಟರೂ ಅಚ್ಚರಿಪಡಬೇಕಿಲ್ಲ.
ಇದೀಗ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಜೋ ರೂಟ್ ಇಂಗ್ಲೆಂಡ್ ಪರ ಹೊಸ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲು ರೂಟ್ಗೆ ಬೇಕಿರುವುದು ಕೇವಲ 532 ರನ್ಗಳು ಮಾತ್ರ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಜಿ ನಾಯಕ ಅಲಿಸ್ಟರ್ ಕುಕ್. ಇಂಗ್ಲೆಂಡ್ ಪರ 291 ಇನಿಂಗ್ಸ್ ಆಡಿರುವ ಕುಕ್ ಒಟ್ಟು 12472 ರನ್ ಬಾರಿಸಿದ್ದಾರೆ. ಇದೀಗ 11940 ರನ್ ಕಲೆಹಾಕಿರುವ ರೂಟ್ಗೆ ಮುಂಬರುವ ಸರಣಿಗಳ ಮೂಲಕ ಜೋ ರೂಟ್ ಹೊಸ ಇತಿಹಾಸ ನಿರ್ಮಿಸುವ ನಿರೀಕ್ಷೆಯಿದೆ.