The Hundred 2024: ಬೌಲರ್ಗಳ ಪರಾಕ್ರಮ: ಓವಲ್ ಇನ್ವಿನ್ಸಿಬಲ್ಸ್ ಶುಭಾರಂಭ
The Hundred 2024: ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ 100 ಎಸೆತಗಳ ದಿ ಹಂಡ್ರೆಡ್ ಲೀಗ್ ಟೂರ್ನಿಗೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲೇ ಮೊಯೀನ್ ಅಲಿ ನಾಯಕತ್ವದ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವನ್ನು ಮಣಿಸುವ ಮೂಲಕ ಹಾಲಿ ಚಾಂಪಿಯನ್ ಓವಲ್ ಇನ್ವಿನ್ಸಿಬಲ್ಸ್ ತಂಡವು ಶುಭಾರಂಭ ಮಾಡಿದೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನ ಮೊದಲ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಭರ್ಜರಿ ಜಯ ಸಾಧಿಸಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಮತ್ತು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ನಾಯಕ ಮೊಯೀನ್ ಅಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಫೀನಿಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಡೊನಾಲ್ಡ್ (1) ಬೇಗನೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ಲಿಯಾಮ್ ಲಿವಿಂಗ್‌ಸ್ಟೋನ್ (0) ಶೂನ್ಯಕ್ಕೆ ಔಟಾದರು. ಇನ್ನು ನಾಯಕ ಮೊಯೀನ್ ಅಲಿ 1 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಇನ್ನೊಂದೆಡೆ ರಿಷಿ ಪಟೇಲ್ 25 ರನ್ಗಳಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದರು. ಹಾಗೆಯೇ ಅಂತಿಮ ಹಂತದಲ್ಲಿ ಹಾವೆಲ್ 13 ಎಸೆತಗಳಲ್ಲಿ 24 ರನ್ ಬಾರಿಸಿದರು. ಇದಾಗ್ಯೂ 81 ಎಸೆತಗಳಲ್ಲಿ 89 ರನ್ಗಳಿಸಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವು ಆಲೌಟ್ ಆಯಿತು.
ಬೌಲರ್ಗಳ ಪರಾಕ್ರಮ:
ಓವಲ್ ಇನ್ವಿನ್ಸಿಬಲ್ಸ್ ಪರ ಬೌಲರ್ಗಳು ಸಂಘಟಿತ ಪ್ರದರ್ಶನ ನೀಡಿದ್ದು ವಿಶೇಷ. ಎಡಗೈ ವೇಗಿ ಮೊಹಮ್ಮದ್ ಅಮೀರ್ 15 ಎಸೆತಗಳಲ್ಲಿ ಕೇವಲ 7 ರನ್ ನೀಡಿ 2 ವಿಕೆಟ್ ಪಡೆದರೆ, ಸಾಕಿಬ್ ಮಹಮೂದ್ 15 ಎಸೆತಗಳಲ್ಲಿ 25 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಆ್ಯಡಂ ಝಂಪಾ 20 ಎಸೆತಗಳಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಉರುಳಿಸಿದರು. ಹಾಗೆಯೇ ವಿಲ್ ಜ್ಯಾಕ್ಸ್ 10 ಎಸೆತಗಳಲ್ಲಿ 8 ರನ್ ನೀಡಿ 2 ವಿಕೆಟ್ ಪಡೆದರು.
ಓವಲ್ ಇನ್ವಿನ್ಸಿಬಲ್ಸ್ಗೆ ಭರ್ಜರಿ ಜಯ:
100 ಎಸೆತಗಳಲ್ಲಿ 90 ರನ್ಗಳ ಗುರಿ ಪಡೆದ ಓವಲ್ ಇನ್ವಿನ್ಸಿಬಲ್ಸ್ ಪರ ವಿಲ್ ಜ್ಯಾಕ್ಸ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ 7 ಎಸೆತಗಳಲ್ಲಿ 6 ರನ್ಗಳಿಸಿ ಜ್ಯಾಕ್ಸ್ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಾವಂಡ ಮುಯ್ಯೆ 14 ಎಸೆತಗಳಲ್ಲಿ 23 ರನ್ ಸಿಡಿಸಿ ಔಟಾದರು.
ಇದಾಗ್ಯೂ ಮತ್ತೊಂದೆಡೆ ಡೇವಿಡ್ ಮಲಾನ್ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಅಜೇಯ 24 ರನ್ ಬಾರಿಸಿದರು. ಉತ್ತಮ ಸಾಥ್ ನೀಡಿದ ನಾಯಕ ಸ್ಯಾಮ್ ಬಿಲ್ಲಿಂಗ್ಸ್ 28 ಎಸೆತಗಳಲ್ಲಿ 31 ರನ್ ಬಾರಿಸುವ ಮೂಲಕ 69 ಎಸೆತಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡವು ಮೊದಲ ಪಂದ್ಯದಲ್ಲೇ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಓವಲ್ ಇನ್ವಿನ್ಸಿಬಲ್ಸ್ ಪ್ಲೇಯಿಂಗ್ 11: ವಿಲ್ ಜ್ಯಾಕ್ಸ್ , ಡೇವಿಡ್ ಮಲಾನ್ , ಟಾವಾಂಡ ಮುಯೆಯೆ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ) , ಸ್ಯಾಮ್ ಕರನ್ , ಡೊನೊವನ್ ಫೆರೇರಾ , ಟಾಮ್ ಲ್ಯಾಮನ್ಬಿ , ನಾಥನ್ ಸೌಟರ್ , ಆ್ಯಡಂ ಝಂಪಾ , ಸಾಕಿಬ್ ಮಹಮೂದ್ , ಮೊಹಮ್ಮದ್ ಅಮೀರ್.
ಇದನ್ನೂ ಓದಿ: The Hundred 2024: ಇಂದಿನಿಂದ ದಿ ಹಂಡ್ರೆಡ್ ಲೀಗ್ ಶುರು: ಈ ಟೂರ್ನಿಯ ನಿಯಮಗಳೇನು?
ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಪ್ಲೇಯಿಂಗ್ 11: ಅನ್ಯೂರಿನ್ ಡೊನಾಲ್ಡ್ , ರಿಷಿ ಪಟೇಲ್ , ಲಿಯಾಮ್ ಲಿವಿಂಗ್‌ಸ್ಟೋನ್ , ಡಾನ್ ಮೌಸ್ಲಿ , ಮೊಯೀನ್ ಅಲಿ (ನಾಯಕ) , ಜಾಕೋಬ್ ಬೆಥೆಲ್ , ಬೆನ್ನಿ ಹೋವೆಲ್ , ಸೀನ್ ಅಬಾಟ್ , ಆ್ಯಡಂ ಮಿಲ್ನ್ , ಟಾಮ್ ಹೆಲ್ಮ್ , ಟಿಮ್ ಸೌಥಿ.