2019 ರ ವಿಶ್ವಕಪ್​ ಹೀರೋ​, ಈ ಬಾರಿ ಮೀಸಲು ಆಟಗಾರ..!

| Updated By: ಝಾಹಿರ್ ಯೂಸುಫ್

Updated on: Sep 19, 2023 | 11:00 PM

ODI World Cup 2023: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

2019 ರ ವಿಶ್ವಕಪ್​ ಹೀರೋ​, ಈ ಬಾರಿ ಮೀಸಲು ಆಟಗಾರ..!
England Team
Follow us on

ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಬಹುತೇಕ ತಂಡಗಳು ಪ್ರಕಟವಾಗಿದ್ದು, ಕೆಲ ಸ್ಟಾರ್ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಅತ್ತ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದಲ್ಲೂ ಮಹತ್ವದ ಬದಲಾವಣೆ ಕಂಡು ಬಂದಿದೆ. ಈ ಬದಲಾವಣೆಯಲ್ಲಿ ಪ್ರಮುಖ ವೇಗಿ ಜೋಫ್ರಾ ಆರ್ಚರ್ 15 ಸದಸ್ಯರ ಬಳಗದಿಂದ ಹೊರಬಿದ್ದಿರುವುದು.

ಅಂದರೆ 2019 ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಆರ್ಚರ್ ಪ್ರಮುಖ ಪಾತ್ರವಹಿಸಿದ್ದರು. 11 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಜೋಫ್ರಾ ಒಟ್ಟು 20 ವಿಕೆಟ್ ಕಬಳಿಸಿ ಮಿಂಚಿದ್ದರು.

ಕಳೆದ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡಿದ್ದ ಜೋಫ್ರಾ ಆರ್ಚರ್ ಈ ಬಾರಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರ್ಚರ್ ಅವರ ಫಿಟ್​​ನೆಸ್ ಸಮಸ್ಯೆ.

ಆರ್ಚರ್ ಕಳೆದ ಕೆಲ ತಿಂಗಳುಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಾಗ್ಯೂ ಕೆಲ ತಿಂಗಳ ಹಿಂದೆಯಷ್ಟೇ ಅವರು ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಂಪೂರ್ಣ ಫಿಟ್​​ನೆಸ್ ಸಾಧಿಸಿಲ್ಲ. ಹೀಗಾಗಿಯೇ ಆರ್ಚರ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮೀಸಲು ಆಟಗಾರರ ಪಟ್ಟಿಯಲ್ಲಿರಿಸಿದ್ದಾರೆ.

ಅಲ್ಲದೆ ಏಕದಿನ ವಿಶ್ವಕಪ್​ ವೇಳೆ ಅವರು ಭಾರತದಲ್ಲಿ ರಿಹ್ಯಾಬ್ ಮುಂದುವರೆಸಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಹೀಗಾಗಿ ಏಕದಿನ ವಿಶ್ವಕಪ್​​ನ ದ್ವಿತೀಯಾರ್ಧದ ವೇಳೆ ಜೋಫ್ರಾ ಆರ್ಚರ್ ಸಂಪೂರ್ಣ ಗುಣಮುಖರಾಗಬಹುದು. ಇದಾದ ಬಳಿಕ ಯಾವುದಾದರು ಬೌಲರ್ ತಂಡದಿಂದ ಹೊರಗುಳಿದರೆ ಆರ್ಚರ್​ಗೆ ಚಾನ್ಸ್ ಸಿಗಬಹುದು.

ಇದನ್ನೂ ಓದಿ: ಏಕದಿನ ವಿಶ್ವಕಪ್ ಗೆಲ್ಲಬಲ್ಲ 5 ತಂಡಗಳನ್ನು ಹೆಸರಿಸಿದ ಸುರೇಶ್ ರೈನಾ

ಇಂಗ್ಲೆಂಡ್ ಏಕದಿನ ವಿಶ್ವಕಪ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್. ಜೋಫ್ರಾ ಆರ್ಚರ್ (ಮೀಸಲು ಆಟಗಾರ).

ಏಕದಿನ ವಿಶ್ವಕಪ್ ಯಾವಾಗ ಶುರು?

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ವಿಶ್ವಕಪ್​ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.