Jonty Rhodes: ಟೀಮ್ ಇಂಡಿಯಾಗೆ ಜಾಂಟಿ ರೋಡ್ಸ್​ ಎಂಟ್ರಿ..?

|

Updated on: Jun 18, 2024 | 10:53 PM

Jonty Rhodes: ಸೌತ್ ಆಫ್ರಿಕಾ ಪರ 52 ಟೆಸ್ಟ್ ಪಂದ್ಯಗಳನ್ನಾಡಿರುವ ಜಾಂಟಿ ರೋಡ್ಸ್ 34 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಇದೇ ವೇಳೆ 5 ರನೌಟ್​ಗಳನ್ನು ಸಹ ಮಾಡಿದ್ದಾರೆ. ಹಾಗೆಯೇ 245 ಏಕದಿನ ಪಂದ್ಯಗಳಲ್ಲಿ 105 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಅಲ್ಲದೆ ಈ ವೇಳೆ 51 ರನೌಟ್​ಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಜಾಂಟಿ ರೋಡ್ಸ್ ಅವರನ್ನು ವಿಶ್ವದ ಅತ್ಯುತ್ತಮ ಫೀಲ್ಡರ್ ಎಂದು ಪರಿಗಣಿಸಲಾಗುತ್ತದೆ.

Jonty Rhodes: ಟೀಮ್ ಇಂಡಿಯಾಗೆ ಜಾಂಟಿ ರೋಡ್ಸ್​ ಎಂಟ್ರಿ..?
Jonty Rhodes
Follow us on

ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡದ ಸಿಬ್ಬಂದಿ ವರ್ಗದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಏಕೆಂದರೆ ಶೀಘ್ರದಲ್ಲೇ ಟೀಮ್ ಇಂಡಿಯಾಗೆ  ಹೊಸ ಕೋಚ್ ನೇಮಕವಾಗಲಿದ್ದು, ಇದರ ಜೊತೆಗೆ ಇತರೆ ಕೋಚ್ ಹುದ್ದೆಗಳಲ್ಲೂ ಹೊಸ ವ್ಯಕ್ತಿಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಬದಲಾವಣೆ ಸುದ್ದಿ ಬೆನ್ನಲ್ಲೇ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ನೇಮಕವಾಗಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ವಿಶ್ವದ ಅತ್ಯುತ್ತಮ ಫೀಲ್ಡರ್​ಗಳಲ್ಲಿ ಗುರುತಿಸಿಕೊಂಡಿದ್ದ ಸೌತ್ ಆಫ್ರಿಕಾದ ಮಾಜಿ ಆಟಗಾರ ರೋಡ್ಸ್​ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದಕ್ಕೂ ಮುನ್ನ ಅವರು 9 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡ ಭಾಗವಾಗಿದ್ದರು. ಅಲ್ಲದೆ 2019 ರಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಿಸಿಸಿಐ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ.

ಇದೀಗ ನೂತನ ಕೋಚ್ ಆಯ್ಕೆ ಸುದ್ದಿ ಬೆನ್ನಲ್ಲೇ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಹೆಸರು ಮುನ್ನಲೆಗೆ ಬಂದಿದೆ. ಹೀಗಾಗಿ ಟೀಮ್ ಇಂಡಿಯಾ ಜೊತೆ ಮುಂಬರುವ ದಿನಗಳಲ್ಲಿ ಜಾಂಟಿ ಕೂಡ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಅರ್ಜಿ ಸಲ್ಲಿಸಿರುವ ಜಾಂಟಿ ರೋಡ್ಸ್:

ಭಾರತ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದಾಗಿ ಜಾಂಟಿ ರೋಡ್ಸ್ ಕೂಡ ಖಚಿತಪಡಿಸಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಭಾರತವನ್ನು ತುಂಬಾ ಪ್ರೀತಿಸುತ್ತೇವೆ. ಈ ದೇಶವು ನಮಗೆ ತುಂಬಾ ನೀಡಿದೆ. ಹೀಗಾಗಿ ಟೀಮ್ ಇಂಡಿಯಾ ಜೊತೆ ಕಾರ್ಯ ನಿರ್ವಹಿಸುವುದನ್ನು ಎದುರು ನೋಡುತ್ತಿರುವುದಾಗಿ ಜಾಂಟಿ ರೋಡ್ಸ್ ತಿಳಿಸಿದ್ದಾರೆ.

ಭಾರತ ತಂಡದ ಫೀಲ್ಡಿಂಗ್ ಕೋಚ್ ಯಾರು?

ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿ ಟಿ. ದಿಲೀಪ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯದೊಂದಿಗೆ ದಿಲೀಪ್ ಕೂಡ ಕಾರ್ಯಾವಧಿ ಮುಗಿಯಲಿದೆ. ಹೀಗಾಗಿಯೇ ನೂತನ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್​ ಅವರ ಆಯ್ಕೆಗೆ ಬಿಸಿಸಿಐ ಆಸಕ್ತಿ ಹೊಂದಿದೆ.

ಇದನ್ನೂ ಓದಿ: Nicholas Pooran: ಪೂರನ್​ ಸಿಡಿಲಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

ಜಾಂಟಿ ಜಾದು:

ಸೌತ್ ಆಫ್ರಿಕಾ ಪರ 52 ಟೆಸ್ಟ್ ಪಂದ್ಯಗಳನ್ನಾಡಿರುವ ಜಾಂಟಿ ರೋಡ್ಸ್ 34 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಇದೇ ವೇಳೆ 5 ರನೌಟ್​ಗಳನ್ನು ಸಹ ಮಾಡಿದ್ದಾರೆ.
ಹಾಗೆಯೇ 245 ಏಕದಿನ ಪಂದ್ಯಗಳಲ್ಲಿ 105 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಅಲ್ಲದೆ ಈ ವೇಳೆ 51 ರನೌಟ್​ಗಳನ್ನು ಮಾಡಿದ್ದಾರೆ.