ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ (Jos Buttler) ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿದ್ದಾರೆ. ಇಂಜುರಿಯಿಂದಾಗಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಬಟ್ಲರ್, ವಿಶ್ವಕಪ್ ನಡೆಯಲ್ಲಿರುವ ಆಸ್ಟ್ರೇಲಿಯಾದಲ್ಲೇ ಆಸೀಸ್ ತಂಡದ ಬೌಲರ್ಗಳನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಭಾನುವಾರ ಪರ್ತ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (England and Australia) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಬಟ್ಲರ್ ಅರ್ಧಶತಕ ಬಾರಿಸಿದ್ದಾರೆ. 32 ಎಸೆತಗಳನ್ನು ಎದುರಿಸಿದ ಬಟ್ಲರ್ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 68 ರನ್‌ಗಳ ಈ ಅರ್ಧಶತಕದ ಇನ್ನಿಂಗ್ಸ್ ಆಡಿದರು. 212.50 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಬಟ್ಲರ್ 11 ನೇ ಓವರ್‌ನ ಎರಡನೇ ಎಸೆತದಲ್ಲಿ ನಾಥನ್ ಎಲ್ಲಿಸ್ಗೆ ಬಲಿಯಾದರು.
ದಾಖಲೆಯ ಜೊತೆಯಾಟ
ತಮ್ಮ ಅಬ್ಬರದ ಇನಿಂಗ್ಸ್ ಜೊತೆಗೆ ಬಟ್ಲರ್ ತನ್ನ ಆರಂಭಿಕ ಜೊತೆಗಾರ ಅಲೆಕ್ಸ್ ಹೇಲ್ಸ್ ಜೊತೆಗೆ ಶತಕದ ಜೊತೆಯಾಟವನ್ನು ಮಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 132 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್‌ಗೆ ಬಲಿಷ್ಠ ಆರಂಭ ನೀಡಿದರು. ಪುರುಷರ ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಇದು ಎರಡನೇ ಅತ್ಯಧಿಕ ಆರಂಭಿಕ ಜೊತೆಯಾಟವಾಗಿದೆ. 2013 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ವಿಕೆಟ್‌ಗೆ 143 ರನ್ ಗಳಿಸಿದ ಅಲೆಕ್ಸ್ ಹೇಲ್ಸ್ ಮತ್ತು ಮೈಕೆಲ್ ಲಂಬ್ ಜೋಡಿ ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಹೆಲ್ಮ್ಸ್ ಆಕರ್ ಕ್ರೇಗ್ ಕ್ವಿಸ್ವಿಟ್ಟರ್ ಜೊತೆಯಾಟವಿದೆ. ಈ ಜೋಡಿ 2011ರಲ್ಲಿ 128 ರನ್‌ಗಳ ಜೊತೆಯಾಟ ನಡೆಸಿತ್ತು. 2013ರಲ್ಲಿ ಹೇಲ್ಸ್ ಮತ್ತು ಲ್ಯಾಂಬ್ ಜೋಡಿ ಆಸ್ಟ್ರೇಲಿಯಾ ವಿರುದ್ಧ 111 ರನ್ ಗಳಿಸಿದ್ದರು.
ಇಂಜುರಿಯಿಂದ ಚೇತರಸಿಕೊಂಡಿರುವ ಬಟ್ಲರ್
ಇಂಜುರಿಯಿಂದ ಚೇತರಿಸಿಕೊಂಡು ತಂಡಕ್ಕೆ ಎಂಟ್ರಿಕೊಟ್ಟಿರುವ ಬಟ್ಲರ್, ಈ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕಾಲಿಗೆ ಗಾಯವಾಗಿದ್ದರಿಂದ ಪಾಕಿಸ್ತಾನ ಪ್ರವಾಸಕ್ಕೂ ಬಟ್ಲರ್ ಹೋಗಿರಲಿಲ್ಲ. ಆದರೆ ಇಂದು ಅವರ ಬ್ಯಾಟಿಂಗ್ ನೋಡಿದವರಿಗೆ ಬಟ್ಲರ್ ಇಂಜುರಿಯಿಂದ ಚೇತರಿಸಿಕೊಂಡು ಹಲವು ದಿನಗಳ ಬಳಿಕ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಎಲ್ಲೂ ಅನಿಸಲಿಲ್ಲ. ಇದಕ್ಕೆ ಪೂರಕವೆಂಬಂತೆ ಇನ್ನಿಂಗ್ಸ್ನ ಐದನೇ ಓವರ್ ಐದನೇ ಎಸೆತದಲ್ಲಿ ಬಟ್ಲರ್ ಬಾರಿಸಿದ ಅದ್ಭುತ ಶಾಟ್ ನೋಡುಗರಲ್ಲಿ ಅಚ್ಚರಿ ಮೂಡಿಸಿತು.
Buttler! ?#AUSvENG pic.twitter.com/rNm7rUIxdh
— cricket.com.au (@cricketcomau) October 9, 2022
ಹೇಲ್ಸ್ ಅರ್ಧಶತಕ
ಬಟ್ಲರ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಮತ್ತೊಬ್ಬ ಆಟಗಾರ ಅಲೆಕ್ಸ್ ಹೇಲ್ಸ್ ಕೂಡ 51 ಎಸೆತಗಳಲ್ಲಿ ವಿಧ್ವಂಸಕ ದಾಳಿ ನಡೆಸಿ ಆಸ್ಟ್ರೇಲಿಯಾ ಬೌಲರ್‌ಗಳ ಬೆಂಡೆತ್ತಿದರು. ಕೇವಲ 51 ಎಸೆತಗಳನ್ನು ಎದುರಿಸಿದ ಹೇಲ್ಸ್, 84 ರನ್ ಚಚ್ಚಿದರು. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು.
Published On - 4:23 pm, Sun, 9 October 22