ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 ಗೆ (IPL 2021) ಇಂದು ತೆರೆ ಬೀಳಲಿದೆ. ಇದರ ಬೆನ್ನಲ್ಲೇ ಐಪಿಎಲ್ ಸೀಸನ್ 15ಗಾಗಿ ಬಿಸಿಸಿಐ ಸಿದ್ದತೆಗಳನ್ನು ಆರಂಭಿಸಿದೆ. ಇತ್ತ ಆರ್ಸಿಬಿ ತಂಡವು ಮುಂದಿನ ಸೀಸನ್ಗಾಗಿ ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಬಾರಿಯ ಐಪಿಎಲ್ ಮೂಲಕ ತಂಡದ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ಘೋಷಿಸಿದ್ದು, ಹೀಗಾಗಿ ಮುಂದಿನ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ. ಆದರೆ ಆ ನಾಯಕ ಯಾರಾಗಲಿದ್ದಾರೆ ಎಂಬುದೇ ಕುತೂಹಲ. ಏಕೆಂದರೆ ಆರ್ಸಿಬಿ ಫ್ರಾಂಚೈಸಿ ಮುಂದಿನ ಸೀಸನ್ಗಾಗಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಅಂದರೆ ಈ ಅತಿರಥ ಮಹಾರಥರನ್ನು ಮುನ್ನಡೆಸುವ ಒಬ್ಬ ಅತ್ಯುತ್ತಮ ನಾಯಕನ ಅವಶ್ಯಕತೆ ಆರ್ಸಿಬಿಗಿದೆ. ಹೀಗಾಗಿಯೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಆ ಸ್ಥಾನವನ್ನು ಜೋಸ್ ಬಟ್ಲರ್ ತುಂಬಲಿದ್ದಾರೆ ಎಂದಿದ್ದಾರೆ.
ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿರುವ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಅವರನ್ನು ಆರ್ಸಿಬಿ ನಾಯಕನಾಗಿ ಆಯ್ಕೆ ಮಾಡುವುದು ಸೂಕ್ತ ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ. ಬಟ್ಲರ್ ಪ್ರಸ್ತುತ ಇಂಗ್ಲೆಂಡ್ ತಂಡದ ಉಪನಾಯಕ. ಮಹೇಂದ್ರ ಸಿಂಗ್ ಧೋನಿಯಂತೆ ಅವರು ಕೂಡ ಅತ್ಯುತ್ತಮ ನಾಯಕನಾಗಲಿದ್ದಾರೆ ಎಂದು ವಾನ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮೈಕೆಲ್ ವಾನ್, ಜೋಸ್ ಬಟ್ಲರ್, ಧೋನಿಯಂತೆ ವಿಕೆಟ್ ಕೀಪಿಂಗ್ ಜೊತೆ ನಾಯಕತ್ಬವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಆಟಗಾರ. ಒಂದು ವೇಳೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬಟ್ಲರ್ ಅನ್ನು ಬಿಡುಗಡೆ ಮಾಡಿದರೆ, ಅವರನ್ನು ಆರ್ಸಿಬಿ ಖರೀದಿಸಬೇಕು. ಈ ಮೂಲಕ ನಾಯಕನ್ನಾಗಿ ಮಾಡುವುದು ಉತ್ತಮ. ಬಟ್ಲರ್ ಕೂಡ ಧೋನಿಯಂತೆ ಯಶಸ್ವಿ ನಾಯಕ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ಮೈಕಲ್ ವಾನ್.
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
(Jos Buttler should be RCB’s next captain says Michael Vaughan)