ಆ್ಯಶಸ್ ಸರಣಿಯಿಂದ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಔಟ್

Australia vs England: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಆ್ಯಶಸ್ ಸರಣಿಯ ಮೊದಲೆರಡು ಮ್ಯಾಚ್​ಗಳು ಮುಗಿದಿವೆ. ಈ ಎರಡೂ ಪಂದ್ಯಗಳಲ್ಲೂ ಆತಿಥೇಯ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಇನ್ನು ಈ ಸರಣಿಯ ಮೂರನೇ ಪಂದ್ಯವು ಡಿಸೆಂಬರ್ 17 ರಿಂದ ಶುರುವಾಗಲಿದೆ. ಈ ಪಂದ್ಯಕ್ಕೆ ಆಸ್ಟ್ರೇಲಿಯಾದ ಪ್ರಮುಖ ವೇಗಿ ಅಲಭ್ಯರಾಗಿದ್ದಾರೆ.

ಆ್ಯಶಸ್ ಸರಣಿಯಿಂದ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಔಟ್
Australia

Updated on: Dec 09, 2025 | 12:58 PM

ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಯಿಂದ ಆಸ್ಟ್ರೇಲಿಯಾ ವೇಗಿ ಜೋಶ್ ಹೇಝಲ್​ವುಡ್ ಹೊರಬಿದ್ದಿದ್ದಾರೆ. ಸ್ನಾಯು ಸೆಳೆತ ಮತ್ತು ಅಕಿಲೀಸ್ ಗಾಯದಿಂದ ಬಳಲುತ್ತಿರುವ ಹೇಝಲ್​ವುಡ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕಿದೆ. ಹೀಗಾಗಿ ಸಂಪೂರ್ಣ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇದಕ್ಕೂ ಮುನ್ನ ಜೋಶ್ ಹೇಝಲ್​ವುಡ್ ಆಸ್ಟ್ರೇಲಿಯಾ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರು ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ ಮೂರನೇ ಪಂದ್ಯದ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದ ಹೇಝಲ್​ವುಡ್​ ಅವರ ಗಾಯವು ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಮುಂದಿನ ಮೂರು ಪಂದ್ಯಗಳಿಂದಲೂ ಹೊರಗುಳಿದಿದ್ದಾರೆ.

ಇನ್ನು ಬೆನ್ನು ನೋವಿನ ಸಮಸ್ಯೆಯಿಂದಾಗಿ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಅದರಂತೆ ಅಡಿಲೇಡ್​ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಮಿನ್ಸ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಮೊದಲೆರಡು ಮ್ಯಾಚ್​ಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಸ್ಟೀವ್ ಸ್ಮಿತ್ ಉಪನಾಯಕನ ಜವವಾಬ್ದಾರಿ ನಿರ್ವಹಿಸುವ ಸಾಧ್ಯತೆಯಿದೆ.

ಸರಣಿ ನಿರ್ಣಾಯಕ ಪಂದ್ಯ:

ಆ್ಯಶಸ್ ಸರಣಿಯ ಮೊದಲೆರಡು ಮ್ಯಾಚ್​ಗಳಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್​ಗಳ ಗೆಲುವು ದಾಖಲಿಸಿದ್ದ ಆಸ್ಟ್ರೇಲಿಯಾ ದ್ವಿತೀಯ ಪಂದ್ಯದಲ್ಲೂ 8 ವಿಕೆಟ್​ಗಳ ಜಯ ಸಾಧಿಸಿದೆ. ಈ ಮೂಲಕ 5 ಮ್ಯಾಚ್​ಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಇನ್ನು ಮೂರನೇ ಪಂದ್ಯವು ಅಡಿಲೇಡ್​ನಲ್ಲಿ ಡಿಸೆಂಬರ್ 17 ರಿಂದ ಶುರುವಾಗಲಿದೆ. ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಅಂದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಲು ಇಂಗ್ಲೆಂಡ್ ತಂಡ ಅಡಿಲೇಡ್ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು.

ಒಂದು ವೇಳೆ ಮೂರನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದರೆ, 3-0 ಅಂತರದಿಂದ ಸರಣಿ ಆಸೀಸ್ ಪಡೆ ಪಾಲಾಗಲಿದೆ. ಹೀಗಾಗಿ ಅಡಿಲೇಡ್ ಟೆಸ್ಟ್ ಪಂದ್ಯವು ಇಂಗ್ಲೆಂಡ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

ಇದನ್ನೂ ಓದಿ: IPL 2026: ಐಪಿಎಲ್​ನಿಂದ ಹೊರಬಿದ್ದ 1005 ಆಟಗಾರರು..!

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.