ಫೆಬ್ರವರಿಯಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಜನವರಿಯ ಕೊನೆಯ ವಾರದಿಂದ ಆರಂಭವಾಗಿರುವ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಟೀಂ ಇಂಡಿಯಾವನ್ನು ಇನ್ನು ಕೆಲವೇ ಗಂಟೆಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ವರದಿ ಪ್ರಕಾರ, ಜನವರಿ 11 ರೊಳಗೆ ಈ ಎರಡು ಪಂದ್ಯಾವಳಿಗಾಗಿ ಟೀಂ ಇಂಡಿಯಾವನ್ನು ಪ್ರಕಟಿಸಲಾಗುವುದು. ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿ ಟೀಂ ಇಂಡಿಯಾಕ್ಕೆ ಚಾಂಪಿಯನ್ಸ್ ಟ್ರೋಫಿಯ ತಯಾರಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಈ ಎರಡು ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯ ತಂಡದಲ್ಲಿ ಯಾರಿಗೆ ಸ್ಥಾನ ಸಿಗಲಿದೆ, ಯಾರಿಗೆ ಸ್ಥಾನ ಸಿಗುವುದಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ನಡುವೆ ಕನ್ನಡಿಗ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಿಂದ ರಾಹುಲ್‌ಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಆದರೆ, ಇದರ ಹೊರತಾಗಿಯೂ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿರುವ ತಂಡದಲ್ಲಿ ರಾಹುಲ್‌ಗೆ ಸ್ಥಾನ ಸಿಗಲಿದೆ ಎಂದು ಆಯ್ಕೆ ಸಮಿತಿ ಭರವಸೆ ನೀಡಿದೆ. ಇದರರ್ಥ ರಾಹುಲ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮತ್ತು ಏಕದಿನ ಸರಣಿಯನ್ನು ಆಡದೆ ಚಾಂಪಿಯನ್ಸ್ ಟ್ರೋಫಿಗೆ ಕಾಲಿಡಲಿದ್ದಾರೆ.
ಆಯ್ಕೆ ಸಮಿತಿಯ ಈ ನಿರ್ಧಾರ ಆಘಾತಕಾರಿಯಾಗಿದೆ. ಏಕೆಂದರೆ ರಾಹುಲ್ ದೀರ್ಘಕಾಲ ಟಿ20 ತಂಡದ ಭಾಗವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟಿ20 ಸರಣಿಗೆ ಅವರು ಆಯ್ಕೆಯಾಗುವ ನಿರೀಕ್ಷೆ ಇರಲಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ನಡೆಯುವ ಏಕದಿನ ಸರಣಿಯಿಂದ ರಾಹುಲ್‌ಗೆ ವಿಶ್ರಾಂತಿ ನೀಡುವ ನಿರ್ಧಾರ ಖಂಡಿತವಾಗಿಯೂ ಅಚ್ಚರಿ ಮೂಡಿಸುತ್ತದೆ. ಏಕೆಂದರೆ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾದಿಂದ ವಾಪಸಾಗಿದ್ದು, ಫೆಬ್ರವರಿ 6 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್‌ಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯವಿದೆ.
ಹೀಗಿರುವಾಗ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವುದು ಖಚಿತ ಎಂದಾದ ಮೇಲೆ ರಾಹುಲ್, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಆಡಿದ್ದರೆ ತಯಾರಿಯ ದೃಷ್ಟಿಯಿಂದ ಅವರಿಗೆ ಹಾಗೂ ತಂಡಕ್ಕೆ ಉತ್ತಮವಾಗಿರುತ್ತಿತ್ತು. ಆದರೆ ಅವರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಟೂರ್ನಿಗೆ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಪ್ರವೇಶಿಸುವುದು ರಾಹುಲ್ ಅವರ ಮೇಲೆ ಒತ್ತಡವನ್ನುಂಟು ಮಾಡಬಹುದು. ಏಕೆಂದರೆ ಒಂದು ವೇಳೆ ಟೂರ್ನಿಯಲ್ಲಿ ರಾಹುಲ್ ಕಳಪೆ ಪ್ರದರ್ಶನ ನೀಡಿದರೆ ಅದು ಅವರಿಗೆ ಮಾತ್ರವಲ್ಲದೆ ತಂಡದ ಮೇಲೆಯೂ ಪರಿಣಾಮ ಬೀರಲಿದೆ.
ರಾಹುಲ್‌ಗೆ ಆಯ್ಕೆ ಮಂಡಳಿ ವಿಶ್ರಾಂತಿ ನೀಡಲು ಕಾರಣವೂ ಇದ್ದು, ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿರುವ ಕಾರಣ ಬಿಸಿಸಿಐನಿಂದ ವಿರಾಮ ಕೇಳಿರುವ ಸಾಧ್ಯತೆಯೂ ಇದೆ. ರಾಹುಲ್ ಮತ್ತು ಅಥಿಯಾ ಮೊದಲ ಮಗುವಿನ ನಿರೀಕ್ಷೆಯಲಿದ್ದು, ಈ ವಿಶೇಷ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರಲು ರಾಹುಲ್ ಬಯಸಿರುವ ಸಾಧ್ಯತೆಯಿದೆ. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. 2023 ರ ವಿಶ್ವಕಪ್‌ನಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದ ಕಾರಣದಿಂದ ಆಯ್ಕೆ ಸಮಿತಿಯು ಈಗಾಗಲೇ ರಾಹುಲ್ ಅವರನ್ನು ಮುಖ್ಯ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲು ನಿರ್ಧರಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ, ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಅವರಲ್ಲಿ ಒಬ್ಬರಿಗೆ ಏಕದಿನ ಸರಣಿಯಲ್ಲಿ ಅವಕಾಶ ನೀಡುವ ಮೂಲಕ ಬ್ಯಾಕಪ್ ವಿಕೆಟ್ ಕೀಪರ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ