AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BPL: ಕೊನೆಯ ಓವರ್​ನಲ್ಲಿ 30 ರನ್ ಬಾರಿಸಿ ರೋಚಕ ಜಯ ತಂದುಕೊಟ್ಟ ನಾಯಕ; ವಿಡಿಯೋ

BPL: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ 2025 ರ 13 ನೇ ಪಂದ್ಯದಲ್ಲಿ, ರಂಗ್‌ಪುರ್ ರೈಡರ್ಸ್ ತಂಡ 3 ವಿಕೆಟ್‌ಗಳಿಂದ ಫಾರ್ಚೂನ್ ಬಾರಿಶಾಲ್ ತಂಡವನ್ನು ರೋಚಕ ರೀತಿಯಲ್ಲಿ ಸೋಲಿಸಿದೆ. ವಿಸ್ಮಯಕಾರಿ ಸಂಗತಿಯೆಂದರೆ ರಂಗಪುರ್ ರೈಡರ್ಸ್ ಈ ಪಂದ್ಯವನ್ನು ಕೊನೆಯ ಎಸೆತದಲ್ಲಿ ಗೆದ್ದುಕೊಂಡಿತು. ತಂಡದ ನಾಯಕ ನೂರುಲ್ ಹಸನ್ ಅದ್ಭುತವಾಗಿ ಬ್ಯಾಟ್ ಬೀಸಿ ಕೊನೆಯ ಓವರ್ ನಲ್ಲಿ 30 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

BPL: ಕೊನೆಯ ಓವರ್​ನಲ್ಲಿ 30 ರನ್ ಬಾರಿಸಿ ರೋಚಕ ಜಯ ತಂದುಕೊಟ್ಟ ನಾಯಕ; ವಿಡಿಯೋ
ನೂರುಲ್ ಹಸನ್
ಪೃಥ್ವಿಶಂಕರ
|

Updated on: Jan 09, 2025 | 8:07 PM

Share

ಗುರುವಾರ ಸಿಲ್ಹೆಟ್‌ನಲ್ಲಿ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಫಾರ್ಚೂನ್ ಬಾರಿಶಾಲ್ ವಿರುದ್ಧ ರಂಗ್‌ಪುರ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ನೂರುಲ್ ಹಸನ್ ಕೊನೆಯ ಓವರ್‌ನಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ವಾಸ್ತವವಾಗಿ ಒಂದು ಹಂತದಲ್ಲಿ ರಂಗ್​ಪುರ್ ರೈಡರ್ಸ್ ತಂಡ ಸೋಲುವುದು ಖಚಿತ ಎಂದು ತೋರುತ್ತಿತ್ತು. ಆದರೆ ಕೊನೆಯ ಓವರ್‌ನಲ್ಲಿ ತಂಡ ನಾಯಕ ನೂರುಲ್ ಹಸನ್ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೆಯ ಓವರ್‌ನಲ್ಲಿ ರಂಗ್‌ಪುರ್ ರೈಡರ್ಸ್‌ ಗೆಲುವಿಗೆ 26 ರನ್‌ಗಳ ಅಗತ್ಯವಿತ್ತು. ಕ್ರೀಸ್​ನಲ್ಲಿದ್ದ ನಾಯಕ ನೂರುಲ್ ಹಸನ್ 30 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

19ನೇ ಓವರ್​ನಲ್ಲಿ 3 ವಿಕೆಟ್ ಪತನ

ಫಾರ್ಚೂನ್ ಬಾರಿಶಾಲ್ ನೀಡಿದ 197 ರನ್​ಗಳ ಗುರಿ ಬೆನ್ನಟ್ಟಿದ ರಂಗ್‌ಪುರ್ ರೈಡರ್ಸ್ ತಂಡದ ಪರ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ನೂರುಲ್ ಹಸನ್, ಇನ್ನಿಂಗ್ಸ್​ನ 18ನೇ ಓವರ್‌ನಲ್ಲಿ 2 ರನ್ ಗಳಿಸಿದ್ದರು. ಆದರೆ ರಂಗ್‌ಪುರ ರೈಡರ್ಸ್ 19ನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡಿತ್ತು. ಜಹಂದಾದ್ ಖಾನ್ ಅವರ ಈ ಓವರ್‌ನಲ್ಲಿ ರಂಗ್‌ಪುರ್ ರೈಡರ್ಸ್ ಬ್ಯಾಟ್ಸ್‌ಮನ್‌ಗಳಾದ ಖುಶ್ದಿಲ್ ಶಾ, ಮೆಹದಿ ಹಸನ್ ಮತ್ತು ಮೊಹಮ್ಮದ್ ಸೈಫುದ್ದೀನ್ ಔಟಾದರು.

20ನೇ ಓವರ್​ನಲ್ಲಿ ರನ್​ಗಳ ಮಳೆ

ಹೀಗಾಗಿ ಕೊನೆಯ ಓವರ್‌ನಲ್ಲಿ ರಂಗ್‌ಪುರ್ ರೈಡರ್ಸ್ ಗೆಲ್ಲಲು 26 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ಮಾಡುವ ಜವಬ್ದಾರಿಯನ್ನು ವಿಂಡೀಸ್ ಆಲ್​ರೌಂಡರ್ ಕೈಲ್ ಮೇಯರ್ಸ್ ತೆಗೆದುಕೊಂಡರೆ, ಇತ್ತ ನೂರುಲ್ ಹಸನ್ ಸ್ಟ್ರೈಕ್‌ನಲ್ಲಿದ್ದರು. ಮೈಯರ್ಸ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ನೂರುಲ್ ನಂತರದ ಎರಡು ಎಸೆತಗಳಲ್ಲಿ 2 ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಮತ್ತೊಮ್ಮೆ ಸಿಕ್ಸರ್ ಬಾರಿಸಿದ ನೂರುಲ್ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಕೊನೆಯ ಓವರ್​ನಲ್ಲಿ 30 ರನ್ ಕಲೆಹಾಕುವ ಮೂಲಕ ನೂರುಲ್ ಹಸನ್ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಪುರುಷರ ಟಿ20ಯಲ್ಲಿ ಕೊನೆಯ ಓವರ್‌ನಲ್ಲಿ ಇದು ಮೂರನೇ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2015ರಲ್ಲಿ ನಡೆದಿದ್ದ ಟಿ20 ಬ್ಲಾಸ್ಟ್‌ನಲ್ಲಿ ಕೆಂಟ್ ತಂಡದ ವಿರುದ್ಧ ಸೋಮರ್‌ಸೆಟ್ 34 ರನ್ ಗಳಿಸಿತ್ತು. ಆದರೆ ಕೊನೆಯ ಓವರ್​ನಲ್ಲಿ ಬರೋಬ್ಬರಿ 9 ಎಸೆತಗಳನ್ನು ಬೌಲ್ ಮಾಡಲಾಗಿತ್ತು. ಆದಾಗ್ಯೂ ಸೋಮರ್‌ಸೆಟ್ 22 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತ್ತು.

ನೂರುಲ್ ಹಸನ್ ಯಾರು?

ನೂರುಲ್ ಹಸನ್ ಬಾಂಗ್ಲಾದೇಶದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್. ಈ ಆಟಗಾರ ಬಾಂಗ್ಲಾದೇಶ ಪರ 11 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೇ 46 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಇದುವರೆಗೆ 3 ಅರ್ಧಶತಕ ಸಿಡಿಸಿರುವ ಹಸನ್ ಅವರ ಏಕದಿನ ಸರಾಸರಿ 82 ಕ್ಕಿಂತ ಹೆಚ್ಚು. ಪ್ರಸ್ತುತ ಈ ಆಟಗಾರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ರಂಗ್‌ಪುರ್ ರೈಡರ್ಸ್ ತಂಡದ ನಾಯಕರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ