AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6,6,6,4: ದಾಖಲೆಯ ಹಾಫ್ ಸೆಂಚುರಿ ಸಿಡಿಸಿದ ವೈದ್ಯಕೀಯ ವಿದ್ಯಾರ್ಥಿ!

Vitality T20 Blast: ಸ್ಟೆತಸ್ಕೋಪ್ ಹಿಡಿಯಬೇಕಾದ ಕೈಗಳು ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಏನಾಗಬಹುದು ಎಂಬುದಕ್ಕೆ ಇಂಗ್ಲೆಂಡ್‌ನ ವೈಟಾಲಿಟಿ ಟಿ20 ಬ್ಲಾಸ್ಟ್ ಟೂರ್ನಿ ಸಾಕ್ಷಿಯಾಗಿದೆ. ಈ ಟೂರ್ನಿಯಲ್ಲಿ ಕಣಕ್ಕಿಳಿದ 21 ವರ್ಷದ ವೈದ್ಯಕೀಯ ವಿದ್ಯಾರ್ಥಿ ಕಮ್ರಾನ್ ಧಾರಿವಾಲ್ ಸ್ಫೋಟಕ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

6,6,6,6,6,6,6,4: ದಾಖಲೆಯ ಹಾಫ್ ಸೆಂಚುರಿ ಸಿಡಿಸಿದ ವೈದ್ಯಕೀಯ ವಿದ್ಯಾರ್ಥಿ!
Kamran DhariwalImage Credit source: T20 Blast
ಝಾಹಿರ್ ಯೂಸುಫ್
|

Updated on: Jul 11, 2026 | 12:57 PM

Share

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವೈಟಾಲಿಟಿ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ದಾಖಲೆಯೊಂದು ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ವೈದ್ಯಕೀಯ ವಿದ್ಯಾರ್ಥಿ ಕಮ್ ಕ್ರಿಕೆಟರ್ ಕಮ್ರಾನ್ ಧಾರಿವಾಲ್. ಈ ಟೂರ್ನಿಯ 99ನೇ ಪಂದ್ಯದಲ್ಲಿ ವುಸ್ಟರ್‌ಶೈರ್ ಮತ್ತು ಗ್ಲಾಸ್ಟರ್‌ಶೈರ್ ತಂಡಗಳು ಮುಖಾಮುಖಿಯಾಗಿತ್ತು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ವುಸ್ಟರ್‌ಶೈರ್ ತಂಡದ ನಾಯಕ ಆ್ಯಡಂ ಹೋಸ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ವುಸ್ಟರ್‌ಶೈರ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಗ್ಲಾಸ್ಟರ್‌ಶೈರ್ ತಂಡವು ನಿರೀಕ್ಷಿತ ಆರಂಭ  ಪಡೆದಿರಲಿಲ್ಲ. ಕೇವಲ 73 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್​ಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮ್ರಾನ್ ಧಾರಿವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಕಮ್ರಾನ್ ವುಸ್ಟರ್‌ಶೈರ್ ಬೌಲರ್​ಗಳ ಬೆಂಡೆತ್ತಿದರು.

13 ಎಸೆತಗಳಲ್ಲಿ ಹಾಫ್ ಸೆಂಚುರಿ:

ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕಮ್ರಾನ್ ಧಾರಿವಾಲ್ ತಾನೆದುರಿಸಿದ ಮೊದಲ 13 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 1 ಫೋರ್ ಬಾರಿಸಿದರು. ಈ ಮೂಲಕ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವೈಟಾಲಿಟಿ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದರು.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ  ಕೇವಲ 22 ಎಸೆತಗಳನ್ನು ಎದುರಿಸಿದ ಕಮ್ರಾನ್ 8 ಭರ್ಜರಿ ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ  70 ರನ್ ಚಚ್ಚಿದರು. ಈ ಬಿರುಸಿನ ಬ್ಯಾಟಿಂಗ್ ಪರಿಣಾಮ ಗ್ಲಾಸ್ಟರ್‌ಶೈರ್ ತಂಡವು 19 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ 2 ವಿಕೆಟ್​ಗಳ ಜಯ ಸಾಧಿಸಿತು.

ವೈದ್ಯಕೀಯ ವಿದ್ಯಾರ್ಥಿ!

21 ವರ್ಷದ ಕಮ್ರಾನ್ ಧಾರಿವಾಲ್ ಅವರ ಈ ಸಾಧನೆ ಮತ್ತಷ್ಟು ವಿಶೇಷವಾಗಲು ಕಾರಣ ಅವರ ಹಿನ್ನೆಲೆ. ಅವರು ಕೇವಲ ಕ್ರಿಕೆಟರ್ ಮಾತ್ರವಲ್ಲ, ಪ್ರಸ್ತುತ ವೈದ್ಯಕೀಯ ವಿದ್ಯಾರ್ಥಿ ಕೂಡ ಆಗಿದ್ದಾರೆ. ಓದಿನ ಜೊತೆಗೆ ಕ್ರಿಕೆಟ್‌ನಲ್ಲೂ ಇಂತಹ ಅದ್ಭುತ ದಾಖಲೆ ಬರೆದಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಯೂನಿವರ್ಸಿಟಿ ಆಫ್ ಬ್ರಿಸ್ಟಲ್‌ನ ವಿದ್ಯಾರ್ಥಿಯಾಗಿರುವ ಕಮ್ರಾನ್ ಧಾರಿವಾಲ್ ಮೂಲತಃ ಭಾರತೀಯ. ಅಂದರೆ ಧಾರಿವಾಲ್ ಅವರ  ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ.

ಕಮ್ರಾನ್ ಅವರ ಪೋಷಕರು ಅಥವಾ ಪೂರ್ವಜರು ಭಾರತದಿಂದ ಬಂದು ಇಂಗ್ಲೆಂಡ್‌ನಲ್ಲಿ ನೆಲೆಸಿದವರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಇಂತಹ ಹಿನ್ನೆಲೆಯುಳ್ಳವರನ್ನು ‘ಬ್ರಿಟಿಷ್ ಏಷ್ಯನ್’ ಅಥವಾ ‘ಭಾರತೀಯ ಮೂಲದ ಬ್ರಿಟಿಷರು’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಅರ್ಜೆಂಟೀನಾ ಎಫ್​ಎ ವಿರುದ್ಧ ಗುಪ್ತಚರ ಸಂಸ್ಥೆಯಿಂದ ತನಿಖೆ!

ಇದೀಗ ವಿಸ್ಫೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ಕಮ್ರಾನ್ ಧಾರಿವಾಲ್ ಇಂಗ್ಲೆಂಡ್​ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ 21ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

Follow Us