AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜೆಂಟೀನಾ ಎಫ್​ಎ ವಿರುದ್ಧ ಗುಪ್ತಚರ ಸಂಸ್ಥೆಯಿಂದ ತನಿಖೆ!

ಈ ಬಾರಿಯ ವಿಶ್ವಕಪ್​ನಲ್ಲಿ ಕ್ವಾರ್ಟರ್ ಫೈನಲ್​​ಗೆ ತಲುಪಿರುವ ಅರ್ಜೆಂಟೀನಾ ಫುಟ್‌ಬಾಲ್ ತಂಡದ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಆರೋಪದ ಬೆನ್ನಲ್ಲೇ 'ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್' (AFA) ವಿರುದ್ಧ ಅಮೆರಿಕಾದ ಪ್ರಮುಖ ತನಿಖಾ ಸಂಸ್ಥೆಯಾದ ಎಫ್‌ಬಿಐ ತನಿಖೆ ಆರಂಭಿಸಿದೆ.

ಅರ್ಜೆಂಟೀನಾ ಎಫ್​ಎ ವಿರುದ್ಧ ಗುಪ್ತಚರ ಸಂಸ್ಥೆಯಿಂದ ತನಿಖೆ!
Argentina Image Credit source: GettyImages
ಝಾಹಿರ್ ಯೂಸುಫ್
|

Updated on: Jul 11, 2026 | 11:22 AM

Share

ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (AFA) ಈಗ ಅಮೆರಿಕಾದ ಗುಪ್ತಚರ ಸಂಸ್ಥೆಯಾದ ಎಫ್‌ಬಿಐ (FBI) ಮತ್ತು ಅಲ್ಲಿನ ನ್ಯಾಯಾಂಗ ಇಲಾಖೆಯ ತನಿಖೆಯ ಸುಳಿಯಲ್ಲಿದೆ. ಕೋಟ್ಯಂತರ ಡಾಲರ್ ಹಣದ ಅಕ್ರಮ ವರ್ಗಾವಣೆ ಮತ್ತು ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದೆ. ಈ ಹಗರಣದ ಪ್ರಮುಖ ವಿವರಗಳು ಈ ಕೆಳಗಿನಂತಿದೆ…

ಅಕ್ರಮ ಹಣ ವರ್ಗಾವಣೆ:

ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್‌ನ ಜಾಗತಿಕ ಪ್ರಾಯೋಜಕತ್ವ ಮತ್ತು ಪ್ರಸಾರ ಹಕ್ಕುಗಳ ಹಣವನ್ನು ಅಮೆರಿಕಾದ ಫ್ಲೋರಿಡಾದಲ್ಲಿರುವ TourProdEnter LLC ಎಂಬ ಕಂಪನಿಯ ಮೂಲಕ ವರ್ಗಾಯಿಸಲಾಗಿದೆ. ಈ ಮೂಲಕ 260 ಮಿಲಿಯನ್ ಡಾಲರ್ ವ್ಯವಹಾರ ನಡೆಸಿದೆ ಎಂದು ತಿಳಿದು ಬಂದಿದೆ.

ಈ ಒಟ್ಟು ಮೊತ್ತದಲ್ಲಿ ಸುಮಾರು 57 ಮಿಲಿಯನ್ ಡಾಲರ್ ಹಣವನ್ನು ಯಾವುದೇ ಸ್ಪಷ್ಟ ಆರ್ಥಿಕ ಅಥವಾ ಕಾರ್ಯಾಚರಣೆಯ ಕಾರಣವಿಲ್ಲದೆ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಎಫ್‌ಬಿಐ ಸಂಶಯ ವ್ಯಕ್ತಪಡಿಸಿದೆ.

ನಕಲಿ ಕಂಪನಿಗಳು:

ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ವರ್ಗಾವಣೆಯಾದ ಕೋಟ್ಯಂತರ ರೂಪಾಯಿ ಹಣವು ಅರ್ಜೆಂಟೀನಾದಲ್ಲಿ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಮೇಲೆ ಅವಲಂಬಿತವಾಗಿರುವ ಅತ್ಯಂತ ಬಡ ಜನರ ಹೆಸರಿನಲ್ಲಿರುವ ನಕಲಿ ಕಂಪನಿಗಳ ಖಾತೆಗಳಿಗೆ ತಲುಪಿದೆ. ಇದು ಕಪ್ಪು ಹಣವನ್ನು ಬಿಳಿ ಮಾಡುವ ತಂತ್ರ ಎಂದು ಶಂಕಿಸಲಾಗಿದೆ.

ತನಿಖಾ ಸಂಸ್ಥೆಗಳು ಪತ್ತೆಹಚ್ಚಿರುವ ಪ್ರಕಾರ, ಈ ಅಕ್ರಮ ಹಣದ ಚಾನೆಲ್‌ಗಳಿಂದ ಸುಮಾರು 16.5 ಮಿಲಿಯನ್ ಡಾಲರ್ ಹಣವನ್ನು ನೇರವಾಗಿ ಐಷಾರಾಮಿ ವಸ್ತುಗಳ ಖರೀದಿಗೆ ಬಳಸಲಾಗಿದೆ.

ಅಷ್ಟೇ ಅಲ್ಲದೆ, ಫುಟ್‌ಬಾಲ್ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರ “ಆಧ್ಯಾತ್ಮಿಕ ಗುರು” ಕುಟುಂಬಕ್ಕೆ ನಿಯಮ ಬಾಹಿರವಾಗಿ ಸುಮಾರು 3,40,000 ಡಾಲರ್ ಹಣವನ್ನು ನೀಡಲಾಗಿದೆ.

ರಾಜಕೀಯ ಒತ್ತಡ?

ಅರ್ಜೆಂಟೀನಾದ ಫುಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಕ್ಲಾಡಿಯೊ “ಚಿಕಿ” ಟಾಪಿಯಾ ಈಗಾಗಲೇ ಅರ್ಜೆಂಟೀನಾ ಸರ್ಕಾರ ಮತ್ತು ಅಧ್ಯಕ್ಷ ಜೇವಿಯರ್ ಮೈಲಿ ಅವರೊಂದಿಗೆ ರಾಜಕೀಯ ಸಂಘರ್ಷ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಎಫ್‌ಬಿಐ ತನಿಖೆ ಆರಂಭವಾಗಿರುವುದು ಟಾಪಿಯಾ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.

ಅರ್ಜೆಂಟೀನಾದಲ್ಲೂ ಈ ಸಂಸ್ಥೆಯ ಪ್ರಾಯೋಜಕತ್ವ ಹೊಂದಿರುವ ಹಣಕಾಸು ಸಂಸ್ಥೆಗಳ ಮೇಲೆ ದೇಶೀಯ ತೆರಿಗೆ ವಂಚನೆ ಪ್ರಕರಣದ ಅಡಿಯಲ್ಲಿ ದಾಳಿಗಳು ನಡೆದಿವೆ.

ಪ್ರಸ್ತುತ ಎಫ್‌ಬಿಐ ಪ್ರಕರಣದ ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಪ್ರಮುಖ ಕ್ರೀಡಾ ಉದ್ಯಮಿಗಳ ವಿಚಾರಣೆ ನಡೆಸುತ್ತಿದೆ. ಆದರೆ ಇದುವರೆಗೆ ಫುಟ್‌ಬಾಲ್ ಸಂಸ್ಥೆಯ ಮೇಲಾಗಲಿ ಅಥವಾ ಅದರ ಅಧಿಕಾರಿಗಳ ಮೇಲಾಗಲಿ ಯಾವುದೇ ಅಧಿಕೃತ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ.

ವಿಶ್ವಕಪ್ ಪಂದ್ಯಗಳಿಗೆ ಯಾವುದೇ ಅಡ್ಡಿಯಿಲ್ಲ!

ಪ್ರಸ್ತುತ ಅರ್ಜೆಂಟೀನಾ ತಂಡವು 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದು, ಕ್ವಾರ್ಟರ್ ಫೈನಲ್ ತಲುಪಿದೆ. ಈ ಎಫ್‌ಬಿಐ ತನಿಖೆಯಿಂದ ತಂಡವು ಟೂರ್ನಿಯಿಂದ ಹೊರಬೀಳುವ ಅಥವಾ ಆಟಗಾರರ ಮೇಲೆ ಕ್ರಮ ಜರುಗಿಸುವ ಯಾವುದೇ ಸಾಧ್ಯತೆಗಳಿಲ್ಲ.

ಇದನ್ನೂ ಓದಿ: ಮೇಜರ್ ಸರ್ಜರಿ… ಟೀಮ್ ಇಂಡಿಯಾದಿಂದ ಕೋಚ್​ ಒಬ್ಬರಿಗೆ ಗೇಟ್​ ಪಾಸ್!

ತನಿಖೆಯು ಕೇವಲ ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್‌ನ (AFA) ಉನ್ನತ ಅಧಿಕಾರಿಗಳು ಮತ್ತು ಹಣಕಾಸು ವ್ಯವಹಾರ ನಡೆಸುವ ಕಂಪನಿಗಳ ನಡುವಿನ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ. ಹೀಗಾಗಿ ಈ ತನಿಖೆಯು ಅರ್ಜೆಂಟೀನಾ ತಂಡದ ಮೇಲಾಗಲಿ ಅಥವಾ ವಿಶ್ವಕಪ್​ ಪಂದ್ಯಗಳಿಗೆಯಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ.

Follow Us