AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 59 ಫೌಲ್​​ಗಳು… ಅರ್ಜೆಂಟೀನಾ ಬಂಡವಾಳ ಬಯಲು!

FIFA World Cup 2026: ಫಿಫಾ ವಿಶ್ವಕಪ್ ನಿರ್ಣಾಯಕ ಹಂತಕ್ಕೆ ತಲುಪುತ್ತಿದ್ದಂತೆ ಮೈದಾನದ ಒಳಗೆ ಮತ್ತು ಹೊರಗೆ ವಿವಾದಗಳ ಕಿಡಿ ಹೊತ್ತಿಕೊಂಡಿದೆ. ಪ್ರಸಕ್ತ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಈವರೆಗೆ ಆಡಿರುವ ಪಂದ್ಯಗಳಲ್ಲಿ ಬರೋಬ್ಬರಿ 59 ಫೌಲ್‌ಗಳನ್ನು ಎಸಗಿದ್ದರೂ, ರೆಫರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಇದೀಗ ಜಗಜ್ಜಾಹೀರಾಗಿದೆ.

ಬರೋಬ್ಬರಿ 59 ಫೌಲ್​​ಗಳು... ಅರ್ಜೆಂಟೀನಾ ಬಂಡವಾಳ ಬಯಲು!
ArgentinaImage Credit source: GettyImages
ಝಾಹಿರ್ ಯೂಸುಫ್
|

Updated on:Jul 09, 2026 | 12:28 PM

Share

ಫಿಫಾ ವಿಶ್ವಕಪ್​​ 2026 ರಲ್ಲಿ ರೆಫರಿಗಳು ಪಕ್ಷಪಾತ ತೋರುತ್ತಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಅರ್ಜೆಂಟೀನಾ ಪಂದ್ಯಗಳ ವೇಳೆ ರೆಫರಿಗಳು ನೀಡುತ್ತಿರುವ ತೀರ್ಪುಗಳು. ಏಕೆಂದರೆ ಈ ಬಾರಿ ಅರ್ಜೆಂಟೀನಾ ಆಡಿದ ಬಹುತೇಕ ಪಂದ್ಯಗಳು ರೆಫರಿಗಳ ತೀರ್ಪಿನಿಂದ ವಿವಾದಕ್ಕೀಡಾಗಿದೆ.

  • ಅಲ್ಜೀರಿಯಾ ವಿರುದ್ಧದ ಪಂದ್ಯದಲ್ಲಿ ಐಸ್ಸಾ ಮಂಡಿ ಅವರ ಹಿಮ್ಮಡಿಯ ಭಾಗಕ್ಕೆ ಲಿಯೋನೆಲ್ ಮೆಸ್ಸಿ ಬಲವಾಗಿ ಒದ್ದಿದ್ದರೂ ಕನಿಷ್ಠ ಯೆಲ್ಲೋ ಕಾರ್ಡ್ ಕೂಡ ನೀಡಿರಲಿಲ್ಲ. ಈ ಬಗ್ಗೆ ಅಲ್ಹೀರಿಯಾ ಫಿಫಾಗೆ ದೂರು ನೀಡಿದೆ.
  • ಕೇಪ್ ವರ್ಡೆ ವಿರುದ್ಧದ ಪಂದ್ಯದಲ್ಲೂ ರೆಫರಿ ಪೆನಾಲ್ಟಿ ಅವಕಾಶವನ್ನು ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
  • ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲೂ ಅರ್ಜೆಂಟೀನಾ ಆಟಗಾರರು ಕ್ಲಿಯರ್ ಫೌಲ್​ ಮಾಡಿದರೂ ರೆಫರಿ ಕಾಣದಂತೆ ನಟಿಸಿದ್ದರು.
  • ಈಜಿಪ್ಟ್​ ವಿರುದ್ಧದ ಪಂದ್ಯದಲ್ಲೂ ರೆಫರಿಗಳು ಜಾಣ ಕುರುಡು ಪ್ರದರ್ಶಿಸಿರುವುದು ಇದೀಗ ಜಗಜ್ಜಾಹೀರಾಗಿದೆ. ಈ ಬಗ್ಗೆ ಕೂಡ ದೂರು ದಾಖಲಾಗಿದೆ.

ರೆಫರಿಗಳ ಜಾಣ ಕುರುಡು:

ಈ ಬಾರಿಯ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಮ್ಯಾಚ್​ಗಳಲ್ಲಿ ಮೆಸ್ಸಿ ಪಡೆ ಮಾಡಿರುವ ಫೌಲ್​ಗಳ ಒಟ್ಟು ಸಂಖ್ಯೆ 59. ಈ ಐವತ್ತೊಂಬತ್ತು ಫೌಲ್​ಗಳ ವೇಳೆ ಅರ್ಜೆಂಟೀನಾ ತಂಡಕ್ಕೆ ನೀಡಲಾಗಿರುವ ಯೆಲ್ಲೋ ಕಾರ್ಡ್​ಗಳ ಸಂಖ್ಯೆ ಕೇವಲ 3 ಎಂದರೆ ನಂಬಲೇಬೇಕು.

ಅಂದರೆ  ಅರ್ಜೆಂಟೀನಾ ಪ್ರತಿ 19.7 ಫೌಲ್‌ಗಳಿಗೆ ಕೇವಲ ಒಂದು ಹಳದಿ ಕಾರ್ಡ್ ಪಡೆದಿದೆ. ಇದಕ್ಕೆ ತದ್ವಿರುದ್ಧವಾಗಿ, ಇಂಗ್ಲೆಂಡ್ ತಂಡದ ಆಟಗಾರರು ಪ್ರತಿ 7.7 ಫೌಲ್‌ಗಳಿಗೆ ಒಂದು ಕಾರ್ಡ್ ಪಡೆಯುತ್ತಿದ್ದಾರೆ. ಅಂದರೆ ಅರ್ಜೆಂಟೀನಾ ತಂಡಕ್ಕಿಂತ ಮೂರು ಪಟ್ಟು ವೇಗವಾಗಿ ಇಂಗ್ಲೆಂಡ್ ಆಟಗಾರರಿಗೆ ಶಿಕ್ಷೆ ವಿಧಿಸಲಾಗುತ್ತಿದೆ.

ತಾರತಮ್ಯದ ಆರೋಪ!

ಅರ್ಜೆಂಟೀನಾ ತಂಡಕ್ಕೆ ಮ್ಯಾಚ್ ರೆಫರಿಗಳು ಯೆಲ್ಲೋ ಕಾರ್ಡ್ ನೀಡುವಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಇತ್ತ ಅರ್ಜೆಂಟೀನಾ ಆಟಗಾರರು ಎದುರಾಳಿ ತಂಡಗಳ ಅಪಾಯಕಾರಿ ಕೌಂಟರ್-ಅಟ್ಯಾಕ್‌ಗಳನ್ನು ತಡೆಯಲು ಫೌಲ್‌ಗಳನ್ನು ಮಾಡುತ್ತಿದ್ದರೂ, ರೆಫರಿಗಳು ಇವುಗಳನ್ನು ಕೇವಲ ಸಾಮಾನ್ಯ ಫೌಲ್ ಎಂದು ಪರಿಗಣಿಸಿ ಹಳದಿ ಕಾರ್ಡ್ ನೀಡದೆ ಬಿಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಈಜಿಪ್ಟ್ ವಿರುದ್ಧದ ಪಂದ್ಯ.

  • ಈಜಿಪ್ಟ್ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರರು ಮಾಡಿದ ಒಟ್ಟು ಫೌಲ್​ಗಳ ಸಂಖ್ಯೆ 13 .
  • ಈ 13 ಫೌಲ್​ಗಳಿಗೆ ಒಂದೇ ಒಂದು ಯೆಲ್ಲೋ ಕಾರ್ಡ್ ನೀಡಿರಲಿಲ್ಲ.
  • ಇದೇ ಮಾದರಿಯ ತಪ್ಪುಗಳನ್ನು ಮಾಡಿದ ಈಜಿಪ್ಟ್​ಗೆ 5 ಯೆಲ್ಲೋ ಕಾರ್ಡ್ ನೀಡಲಾಗಿತ್ತು.

ಈ ಫೌಲ್​ಗಳ ನಡುವೆ ಈಜಿಪ್ಟ್​ ತಂಡಕ್ಕೆ ಅರ್ಹ ಪೆನಾಲ್ಟಿಯನ್ನೂ ಕೂಡ ನಿರಾಕರಿಸಿರುವುದು ಇದೀಗ ಜಾಗತಿಕ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದ ಕೊನೆಯ ಕ್ಷಣಗಳಲ್ಲಿ ಈಜಿಪ್ಟ್ ತಂಡ ಗೋಲು ಗಳಿಸಲು ಅರ್ಜೆಂಟೀನಾದ ಪೆನಾಲ್ಟಿ ಬಾಕ್ಸ್‌ನೊಳಗೆ ತೀವ್ರ ಪ್ರಯತ್ನ ನಡೆಸುತ್ತಿತ್ತು.

ಈ ವೇಳೆ ಈಜಿಪ್ಟ್‌ನ ಮುಂಚೂಣಿ ಆಟಗಾರ ಹಮ್ದಿ ಫಾತಿ ಗೋಲು ಬಾರಿಸಲು ಮುಂದಾಗಿದ್ದರು. ಈ ವೇಳೆ ಅರ್ಜೆಂಟೀನಾದ ಮಿಡ್‌ಫೀಲ್ಡರ್ ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್, ಹಮ್ದಿ ಫಾತಿ ಅವರ ಶರ್ಟ್ ಅನ್ನು ಹಿಂದಿನಿಂದ ಬಲವಾಗಿ ಎಳೆದು ಕೆಳಗೆ ಬೀಳಿಸಿದ್ದರು.

ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಶರ್ಟ್ ಎಳೆದಾಡಿದರೂ ಈಜಿಪ್ಟ್‌ಗೆ ಪೆನಾಲ್ಟಿ ನೀಡದಿರುವುದು ಪ್ರಸ್ತುತ 2026ರ ಫಿಫಾ ವಿಶ್ವಕಪ್‌ನ ಅತ್ಯಂತ ವಿವಾದಾತ್ಮಕ ಅಂಶವಾಗಿದೆ. ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಮತ್ತು ಟಿವಿ ರಿಪ್ಲೇಗಳಲ್ಲಿ ಸ್ಪಷ್ಟವಾಗಿ ಕಂಡರೂ ರೆಫರಿ ಮತ್ತು VAR (ವಿಡಿಯೋ ಅಸಿಸ್ಟೆಂಟ್ ರೆಫರಿ) ಈ ನಿರ್ಧಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಈಜಿಪ್ಟ್ ನಾಯಕ ಮೊಹಮ್ಮದ್ ಸಲಾಹ್​ ಅವರನ್ನು ಅರ್ಜೆಂಟೀನಾ ಆಟಗಾರರು ನೇರವಾಗಿ ಟಾರ್ಗೆಟ್ ಮಾಡಿರುವ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಾಗ್ಯೂ ರೆಫರಿ ಒಂದೇ ಒಂದು ಯೆಲ್ಲೋ ಕಾರ್ಡ್ ನೀಡದಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

View this post on Instagram

A post shared by Zahir_tv9 (@zahir_tv9)

ಕನಿಷ್ಠ 8 ಯೆಲ್ಲಾ ಕಾರ್ಡ್ ಸಿಗಬೇಕಿತ್ತು!

ಫುಟ್‌ಬಾಲ್ ವಿಶ್ಲೇಷಕರು ಮತ್ತು ಟೂರ್ನಿಯ ಇತರ ತಂಡಗಳ ಶಿಸ್ತಿನ ನಿಯಮಗಳನ್ನು ಹೋಲಿಸಿ ನೋಡಿದರೆ, ಅರ್ಜೆಂಟೀನಾ ತಂಡಕ್ಕೆ ಕನಿಷ್ಠ 8 ರಿಂದ 10 ಯೆಲ್ಲೋ ಕಾರ್ಡ್‌ಗಳನ್ನು ನೀಡಬೇಕಾಗಿತ್ತು. ಅದರಲ್ಲೂ ಈಜಿಪ್ಟ್ ವಿರುದ್ಧದ ಪಂದ್ಯದಲ್ಲೇ ಅರ್ಜೆಂಟೀನಾಗೆ ಕನಿಷ್ಠ 3 ಹಳದಿ ಕಾರ್ಡ್‌ಗಳು ಸಿಗಬೇಕಿತ್ತು ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಇದಾಗ್ಯೂ 59 ಫೌಲ್‌ಗಳಿಗೆ ಅರ್ಜೆಂಟೀನಾ ಪಡೆದಿರುವುದು ಕೇವಲ 3 ಯೆಲ್ಲೋ ಕಾರ್ಡ್‌ಗಳು. ಮ್ಯಾಚ್ ರೆಫರಿಗಳ ಈ ಜಾಣ ಕುರುಡಿನ ಬಗ್ಗೆ ಇದೀಗ ಜಾಗತಿಕ ಫುಟ್‌ಬಾಲ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಫಿಫಾ, ಹಾಲಿ ಚಾಂಪಿಯನ್ನರನ್ನು ಟೂರ್ನಿಯಲ್ಲಿ ಉಳಿಸಿಕೊಳ್ಳಲು ಕಣ್ಣು ಮುಚ್ಚಿ ಕುಳಿತಿದೆಯೇ ಎಂಬ ಸಾರ್ವಜನಿಕ ಅನುಮಾನಗಳು ದಟ್ಟವಾಗತೊಡಗಿವೆ.

ಇದನ್ನೂ ಓದಿ: ನಿರ್ಣಾಯಕ ಪಂದ್ಯಕ್ಕೆ 5 ಅರ್ಜೆಂಟೀನಾ ರೆಫರಿ: ಫ್ರಾನ್ಸ್​ಗೆ ಆತಂಕ!

ಒಟ್ಟಾರೆಯಾಗಿ ಹೇಳುವುದಾದರೆ, ಕ್ರೀಡಾಂಗಣದಲ್ಲಿ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿದ್ದರೂ, ಅಂತಿಮವಾಗಿ ಮೈದಾನದ ರೆಫರಿಗಳ ನಿರ್ಧಾರಗಳೇ ಪಂದ್ಯದ ಹಣೆಬರಹವನ್ನು ನಿರ್ಧರಿಸುತ್ತಿವೆ ಎಂಬುದಕ್ಕೆ ಅರ್ಜೆಂಟೀನಾ ಮತ್ತು ಈಜಿಪ್ಟ್ ನಡುವಿನ ಪಂದ್ಯವೇ ಸಾಕ್ಷಿ. ಇಂತಹ ವಿವಾದಗಳಿಂದಲೇ ಈ ಬಾರಿಯ ವಿಶ್ವಕಪ್ ಕೊನೆಗೊಳ್ಳದಿರಲಿ ಎಂಬುದು ಫುಟ್‌ಬಾಲ್ ಪ್ರೇಮಿಗಳ ಆಶಯ.

Published On - 12:17 pm, Thu, 9 July 26

Follow Us