ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದಿಂದಲೂ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದಾರೆ. ತೊಡೆಸಂದು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಮುಂಬೈನಲ್ಲಿ ನಡೆಯಲಿರುವ 3ನೇ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ತೃತೀಯ ಟೆಸ್ಟ್ ಪಂದ್ಯವು ನವೆಂಬರ್ 1 ರಿಂದ ಶುರುವಾಗಲಿದೆ. ಈ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೀಗ ಈ ಪಂದ್ಯಕ್ಕೆ ವಿಲಿಯಮ್ಸನ್ ಅಲಭ್ಯರಾಗಿರುವ ಕಾರಣ ವಿಲ್ ಯಂಗ್ ತಂಡದಲ್ಲೇ ಮುಂದುವರೆಯಲಿದ್ದಾರೆ.
ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿರುವ ನ್ಯೂಝಿಲೆಂಡ್ ತಂಡಕ್ಕೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ. ಇತ್ತ ಸರಣಿ ಸೋತಿರುವ ಭಾರತ ತಂಡವು ಅವಮಾನಕರ ಸೋಲಿನಿಂದ ಪಾರಾಗಬೇಕಿದ್ದರೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕು. ಹೀಗಾಗಿ ಭಾರತ ತಂಡಕ್ಕೆ ಮುಂಬೈ ಟೆಸ್ಟ್ ಪಂದ್ಯವು ತುಂಬಾ ಮಹತ್ವದ್ದಾಗಿದೆ ಮಾರ್ಪಟ್ಟಿದೆ.
ಕಳೆದ 40 ವರ್ಷಗಳಲ್ಲಿ ಭಾರತ ತಂಡವನ್ನು ತವರಿನಲ್ಲಿ 3-0 ಅಂತರದಿಂದ ಯಾವುದೇ ತಂಡ ಸೋಲಿಸಿಲ್ಲ. ಇದೀಗ ಅಂತಹದೊಂದು ಅವಕಾಶ ನ್ಯೂಝಿಲೆಂಡ್ ಮುಂದಿದೆ. ಒಂದು ವೇಳೆ ಅಂತಿಮ ಪಂದ್ಯದಲ್ಲೂ ಕಿವೀಸ್ ಜಯ ಸಾಧಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಏಕೆಂದರೆ ಭಾರತ ತಂಡವು ತವರಿನಲ್ಲಿ 3-0 ಅಂತರದಿಂದ ಸೋತಿದ್ದು ಕೇವಲ 2 ಬಾರಿ ಮಾತ್ರ. 1958-59 (ಐದು ಟೆಸ್ಟ್‌ಗಳು) ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಜಯಗೊಂಡಿದ್ದ ಭಾರತ, 1983-84 (ಆರು ಟೆಸ್ಟ್) ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಿಂದ ಸೋಲುಂಡಿತ್ತು. ಇದೀಗ ಮೂರನೇ ಬಾರಿ ಭಾರತ ತಂಡಕ್ಕೆ ಹೀನಾಯ ಸೋಲುಣಿಸುವ ಅವಕಾಶ ನ್ಯೂಝಿಲೆಂಡ್ ತಂಡದ ಮುಂದಿದೆ.
ಆದರೆ ಈ ಹೀನಾಯ ಸೋಲಿನಿಂದ ಪಾರಾಗಲು ಟೀಮ್ ಇಂಡಿಯಾ ಕೂಡ ಪ್ಲ್ಯಾನ್ ರೂಪಿಸುತ್ತಿದ್ದು, ಅದಕ್ಕಾಗಿ ಮುಂಬೈ ಅಂಗಳದಲ್ಲಿ ಭಾರತ ತಂಡವು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸುವ ನಿರೀಕ್ಷೆಯಿದೆ. ಈ ನಿರೀಕ್ಷೆಯೊಂದಿಗೆ ಭಾರತ ತಂಡವು ಸರಣಿಯನ್ನು 2-1 ಅಂತರದಿಂದ ಕೊನೆಗೊಳಿಸುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: IPL 2025: LSG ರಿಟೈನ್ ಮಾಡಿಕೊಂಡಿರುವ 5 ಆಟಗಾರರು ಇವರೇ
ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಜೇಕೊಬ್ ಡಫಿ, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ, ಕೇನ್ ವಿಲಿಯಮ್ಸನ್ (ಅಲಭ್ಯ).