ಕರ್ನಾಟಕ ಟೆಸ್ಟ್ ತಂಡ ಪ್ರಕಟ

Karnataka Squad 2026: ರಣಜಿ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳು ಜನವರಿ 22 ರಿಂದ ಶುರುವಾಗಲಿದೆ. ಬೆಂಗಳೂರಿನ ಅಲೂರಿನಲ್ಲಿರುವ ಕೆಎಸ್​ಸಿಎ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕರ್ನಾಟಕ ಮತ್ತು ಮಧ್ಯ ಪ್ರದೇಶ್ ತಂಡಗಳು ಮುಖಾಮುಖಿಯಾಗಲಿದೆ. ಇದಾದ ಬಳಿಕ ಜನವರಿ 29 ರಿಂದ ಕರ್ನಾಟಕ ಮತ್ತು ಪಂಜಾಬ್ ತಂಡಗಳು ಸೆಣಸಲಿದೆ.

ಕರ್ನಾಟಕ ಟೆಸ್ಟ್ ತಂಡ ಪ್ರಕಟ
Karnataka

Updated on: Jan 18, 2026 | 12:10 PM

ಜನವರಿ 22 ರಿಂದ ಶುರುವಾಗಲಿರುವ ರಣಜಿ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಇನ್ನು ಮೊದಲ ಸುತ್ತಿನಲ್ಲಿ ಕರ್ನಾಟಕ ಪರ ಕಣಕ್ಕಿಳಿದಿದ್ದ ಸ್ಮರಣ್ ರವಿಚಂದ್ರನ್ ಈ ಬಾರಿ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ವಿಜಯ ಹಝಾರೆ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸ್ಮರಣ್ ರವಿಚಂದ್ರನ್ ಅವರ ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ವಿಜಯ ಹಝಾರೆ ಟೂರ್ನಿಯ ಸೆಮಿಫೈನಲ್ ಮ್ಯಾಚ್​ನಲ್ಲಿ ಅವರು ಕಣಕ್ಕಿಳಿದಿರಲಿಲ್ಲ.

ಇದೇ ಗಾಯದ ಕಾರಣ ಸ್ಮರಣ್ ರವಿಚಂದ್ರನ್ ಅವರನ್ನು ರಣಜಿ ತಂಡದಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಸ್ಮರಣ್ ಬದಲಿಗೆ ಈ ಬಾರಿ ನಿಕಿನ್ ಜೋಸ್ ಕರ್ನಾಟಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ರಣಜಿ ಟೂರ್ನಿಯ ಉಳಿದ ಪಂದ್ಯಗಳಿಗೆ ಕರ್ನಾಟಕ ತಂಡ ಈ ಕೆಳಗಿನಂತಿದೆ…

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೃತಿಕ್ ಕೃಷ್ಣ, ಕೆವಿ ಅನೀಶ್, ಎಂ. ವೆಂಕಟೇಶ್.

ಅಗ್ರಸ್ಥಾನದಲ್ಲಿ ಕರ್ನಾಟಕ:

2025-26ರ ಸಾಲಿನ ರಣಜಿ ಟೂರ್ನಿಯಲ್ಲಿ ಗ್ರೂಪ್-ಬಿ ನಲ್ಲಿ ಕಣಕ್ಕಿಳಿಯುತ್ತಿರುವ ಕರ್ನಾಟಕ ತಂಡವು ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ 2 ಗೆಲುವು ಹಾಗೂ ಮೂರು ಡ್ರಾ ಸಾಧಿಸುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿದೆ.

ಇಲ್ಲಿ ಸೌರಾಷ್ಟ್ರ ಮತ್ತು ಗೋವಾ ವಿರುದ್ಧ ಡ್ರಾ ಸಾಧಿಸಿದ್ದ ಕರ್ನಾಟಕ ತಂಡವು ಮೂರನೇ ಪಂದ್ಯದಲ್ಲಿ ಕೇರಳ ವಿರುದ್ಧ ಜಯ ದಾಖಲಿಸಿತ್ತು. ಇನ್ನು ನಾಲ್ಕನೇ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಐದನೇ ಪಂದ್ಯದಲ್ಲಿ ಚಂಡಿಗಢ್​ ವಿರುದ್ಧ ಇನಿಂಗ್ಸ್ ಹಾಗೂ 185 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: ಪ್ಲೇಆಫ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ತಂಡವು ದ್ವಿತೀಯಾರ್ಧದ ಮೊದಲ ಮ್ಯಾಚ್​ನಲ್ಲಿ ಮಧ್ಯ ಪ್ರದೇಶ್ ತಂಡವನ್ನು ಎದುರಿಸಲಿದೆ. ಜನವರಿ 22 ರಿಂದ ಬೆಂಗಳೂರಿನ ಆಲೂರಿನಲ್ಲಿ ನಡೆಯಲಿರುವ ಈ ಪಂದ್ಯದ ಬಳಿಕ ಕರ್ನಾಟ ತಂಡವು ಪಂಜಾಬ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ ಶುರುವಾಗುವುದು ಜನವರಿ 29 ರಿಂದ.

ಈ ಎರಡು ಮ್ಯಾಚ್​ಗಳೊಂದಿಗೆ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿದೆ.